ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ; ಸದ್ಯಕ್ಕೆ ಬಿಗ್ ರಿಲೀಫ್!

0
49

ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಗಡಿಪಾರು ಆದೇಶಕ್ಕೆ ತಡೆ ಕೋರಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಕ್ಟೋಬರ್ 8 ರವರೆಗೆ ಗಡಿಪಾರು ಆದೇಶ ಜಾರಿಗೊಳಿಸದಂತೆ ಸ್ಪಷ್ಟ ಸೂಚನೆ ನೀಡಿದೆ.

ಈ ಆದೇಶದಿಂದ ತಿಮರೋಡಿ ಸದ್ಯಕ್ಕೆ ಗಡಿಪಾರು ಭೀತಿಯಿಂದ ಪಾರಾಗಿದ್ದಾರೆ. ನ್ಯಾಯಾಲಯದ ಈ ನಿರ್ಧಾರ, ತಿಮರೋಡಿ ಕಾನೂನು ಹೋರಾಟಕ್ಕೆ ತಾತ್ಕಾಲಿಕ ಬಲ ತಂದಿದೆ ಎನ್ನಬಹುದು. ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ತಿಮರೋಡಿ ಗಡಿಪಾರು ಆದೇಶವನ್ನು ಹೊರಡಿಸಿದ್ದರು. ಈ ಆದೇಶದ ಬೆನ್ನಲ್ಲೇ ತಿಮರೋಡಿ ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದರು.

ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಮಧ್ಯಂತರ ಆದೇಶ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಈ ಮೂಲಕ ತಿಮರೋಡಿಗೆ ತಮ್ಮ ನಿಲುವು ಮಂಡಿಸಲು ಅವಕಾಶ ದೊರೆತಂತಾಗಿದೆ.

ಆದರೆ, ತಿಮರೋಡಿ ಕಾನೂನು ಸಂಕಷ್ಟಗಳು ಇಲ್ಲಿಗೇ ಮುಗಿದಿಲ್ಲ. ಅವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರಗಳನ್ನು ಮನೆಯಲ್ಲಿ ಹೊಂದಿರುವ ಆರೋಪವಿದೆ. ಈ ಸಂಬಂಧ ಈಗಾಗಲೇ ಮೂರು ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಆದರೆ, ಈ ಮೂರು ನೋಟಿಸ್‌ಗಳ ವಿಚಾರಣೆಗೂ ತಿಮರೋಡಿ ಗೈರು ಹಾಜರಾಗಿದ್ದಾರೆ.

ಪ್ರಸ್ತುತ, ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಶಸ್ತ್ರಾಸ್ತ್ರ ಪ್ರಕರಣದಲ್ಲಿ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ, ಮಹೇಶ್ ಶೆಟ್ಟಿ ತಿಮರೋಡಿ ಮುಂದಿನ ಕಾನೂನು ನಡೆಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ. ನ್ಯಾಯಾಲಯದ ಅಂತಿಮ ತೀರ್ಪು ಹೊರಬರುವವರೆಗೂ ಅವರ ಮೇಲಿನ ಆರೋಪಗಳು ಮತ್ತು ಗಡಿಪಾರು ಆದೇಶದ ಭವಿಷ್ಯ ಅನಿಶ್ಚಿತತೆಯಲ್ಲಿದೆ.

ಕಾನೂನು ಚೌಕಟ್ಟಿನಲ್ಲೇ ಮಾಡಬೇಕು ಗೃಹ ಸಚಿವ: ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, “ನಾವು ಏನೇ ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕು” ಎಂದು ಹೇಳಿದ್ದರು. ತಿಮರೋಡಿ ಗಡೀಪಾರು ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ನ್ಯಾಯಾಲಯದ ತೀರ್ಪಿಗೆ ಕಾಯಬೇಕು ಎಂದಿದ್ದರು.

“ತಿಮರೋಡಿ ಬಂಧಿಸೋದಾಗಲೀ, ಅಥವಾ ಕಾನೂನು ಕ್ರಮವಾಗಿ ಕೈಗೊಳ್ಳೋದಾಗಲೀ ಕಾನೂನು ಪ್ರಕಾರವೇ ಮಾಡ್ತಾರೆ. ಇದರ ಬಗ್ಗೆ ಸರ್ಕಾರ ಎಸ್ಐಟಿಗೆ ಸೂಚನೆ ಕೊಡಕ್ಕಾಗಲ್ಲ. ಅಂತಿಮವಾಗಿ ಎಸ್ಐಟಿನವ್ರು ತೀರ್ಮಾನ ಮಾಡ್ತಾರೆ” ಎಂದು ಸಚಿವರು ಸ್ಪಷ್ಟಪಡಿಸಿದ್ದರು. ಎಸ್‌ಐಟಿಯು ಕಾನೂನಿನ ಅಡಿಯಲ್ಲಿ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದೆ ಎಂದು ಪುನರುಚ್ಚರಿಸಿದ್ದರು.

Previous articleಸಂಪಾದಕೀಯ: ಮಹಾರಾಷ್ಟ್ರದ ಅತಿಯಾಸೆ ಕರ್ನಾಟಕಕ್ಕೆ ಗತಿಗೇಡು
Next articleವಾಟ್ಸಾಪ್‌ಗೆ ಪರ್ಯಾಯ ದೇಸಿ ಆ್ಯಪ್ ಅರಟ್ಟೈ

LEAVE A REPLY

Please enter your comment!
Please enter your name here