ವೈದ್ಯ ಸೀಟಿಗೆ ನಕಲಿ ದಾಖಲೆ ಸೃಷ್ಟಿ: 21 ಮೆಡಿಕಲ್‌ ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರ!

0
28

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಅಂಗವಿಕಲ ಕೋಟಾ ಮೀಸಲಾತಿಯಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು 21 ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಇಬ್ಬರು ಸರ್ಕಾರಿ ವೈದ್ಯರು ಸೇರಿದಂತೆ ಐವರನ್ನು  ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರಂ ಪೊಲೀಸರು ಇಬ್ಬರು ಸರ್ಕಾರಿ ವೈದ್ಯರು, ಇಬ್ಬರು ಶಿಕ್ಷಕರು ಮತ್ತು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಂಗಳೂರಿನ ನಂದಿನಿ ಲೇಔಟ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಭರ್ಮಪ್ಪ ಕೆಬಿ (50), ವಿಜಯನಗರ ಜಿಲ್ಲೆಯ ಹೊಸಪೇಟೆಯ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಕೊಪ್ಪಳ ಮೂಲದ ಡಿಜೆ ಸುಧಾಕರ್, ಹೊಸಪೇಟೆಯ ಎಫ್‌ಡಿಎ .ಉಮೇಶ್ ನಾಗಪ್ಪ ಚೌಧರಿ, ಆಡಳಿತ ವೈದ್ಯಾಧಿಕಾರಿ (ಎಎಂಒ) ಡಾ. ಹರಿಪ್ರಸಾದ್ ಮತ್ತು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಎಂದು ಗುರುತಿಸಲಾಗಿದೆ.

ಕೆಇಎ ವ್ಯತ್ಯಾಸಗಳನ್ನು ಗಮನಿಸಿದ ನಂತರ ನಕಲಿ ಪ್ರಮಾಣಪತ್ರ ದಂಧೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಪ್ರಮಾಣ ಪತ್ರಗಳನ್ನು ನೀಡಲು ಅವರು ಪ್ರತಿ ಅಭ್ಯರ್ಥಿಗೆ 5 ರಿಂದ 10 ಲಕ್ಷ ರೂ. ಶುಲ್ಕ ವಿಧಿಸಿದ್ದಾರೆಂದು ತಿಳಿದುಬಂದಿದೆ. ಸೀಟುಗಳಿಗೆ ಅರ್ಜಿ ಸಲ್ಲಿಸುವಾಗ ಅಂಗವಿಕಲ ಕೋಟಾ ಆಯ್ಕೆ ಮಾಡದಿದ್ದರೂ, ಆನ್‌ಲೈನ್‌ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಶ್ರವಣದೋಷವಿದೆ ಎಂದು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೆಇಎ ನಿಯಮಗಳಂತೆ ಜು.17ರಂದು ವಿಕ್ಟೋರಿಯಾ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ಗೆ ಆಡಿಯೋಗ್ರಾಮ್ ಮತ್ತು ಬೆರಾ (ಬ್ರೈನ್‌ಸ್ಟೆಮ್ ಆಡಿಟರಿ ಎವೋಕ್ಡ್ ರೆಸ್ಪಾನ್ಸ್) ಪರೀಕ್ಷೆಗೆ ಒಳಪಡಿಸಲು ಕಳುಹಿಸಲಾಯಿತು. ಈ ವೇಳೆ ವೈದ್ಯರು ಅಭ್ಯರ್ಥಿಗಳು ಸಲ್ಲಿಸಿದ ಆಡಿಯೋಲಾಜಿಕಲ್ ಮೌಲ್ಯಮಾಪನ ವರದಿಗಳು ಅಧಿಕೃತವಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಇದರ ನಂತರ, 21 ಅಭ್ಯರ್ಥಿಗಳಿಗೆ ದಾಖಲೆಗಳನ್ನು ಸಲ್ಲಿಸಲು ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್‌ ಬೆನ್ನಲೇ ಮೂವರು ವಿದ್ಯಾರ್ಥಿಗಳ ಪೋಷಕರು ವಿಚಾರಣೆಗೆ ಹಾಜರಾಗಿದ್ದು, ನಕಲಿ ಪ್ರಮಾಣಪತ್ರ ಕುರಿತು ಮಾಹಿತಿ ನೀಡಿದ್ದಾರೆ.

ಇದರ ಆಧಾರದ ಮೇಲೆ, ಕೆಇಎ ಆಡಳಿತ ಅಧಿಕಾರಿಯೊಬ್ಬರು ಸೆ.8 ರಂದು 21 ವಿದ್ಯಾರ್ಥಿಗಳು ಸೇರಿದಂತೆ 24 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಬೆನ್ನಲ್ಲೇ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಆರ್. ಜಗದೀಶ್ ಮತ್ತು ಅವರ ತಂಡ ತನಿಖೆಯನ್ನು ಪ್ರಾರಂಭಿಸಿದ್ದು, ಭರ್ಮಪ್ಪ ಈ ದಂಧೆಯ ಪ್ರಮುಖ ಆರೋಪಿ ಎಂದು ಗುರುತಿಸಿದೆ. ಚಿತ್ರದುರ್ಗದ ಮೂಲದವನಾದ ಈತ ಸುಧಾಕರ್ ಮತ್ತು ಉಮೇಶ್ ಜೊತೆ ಸಂಪರ್ಕ ಹೊಂದಿದ್ದ, ಒಟ್ಟಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಮಿಷನ್ ಆಧಾರದ ಮೇಲೆ, ನಕಲಿ ಪ್ರಮಾಣ ಪತ್ರಗಳಿಗಾಗಿ ವೈದ್ಯರ ಸಹಿಯನ್ನು ಪಡೆಯುತ್ತಿದ್ದ.

ಭರ್ಮಪ್ಪ ಇತರ ಶಿಕ್ಷಕರ ಮಕ್ಕಳಿಗೆ ನೀಟ್ ಸೀಟುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಇದರಂತೆ ನಕಲಿ ಪ್ರಮಾಣಪತ್ರ ನೀಡಲು ಅಭ್ಯರ್ಥಿಗಳಿಗೆ 5 ರಿಂದ 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ನಂತರ 2 ರಿಂದ 5 ಲಕ್ಷ ರೂ.ಗಳವರೆಗೆ ಮುಂಗಡ ಹಣವನ್ನು ಸಂಗ್ರಹಿಸಿದ್ದಾರೆಂದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Previous articleಅಯ್ಯರ್‌ಗೆ ನಾಯಕತ್ವದ ಪಟ್ಟ: ಅಚ್ಚರಿಯ ಆಯ್ಕೆ!
Next articleಯಾದಗಿರಿ: ಮಕ್ಕಳನ್ನೇ ಬರ್ಬರವಾಗಿ ಕೊಂದ ತಂದೆ

LEAVE A REPLY

Please enter your comment!
Please enter your name here