ಬಿಹಾರ ವಿಧಾನಸಭೆ ಚುನಾವಣೆ-2025ರಲ್ಲಿ ಬಿಜೆಪಿಯ ಪ್ರತಿಷ್ಠೆ ಅಡಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಚುನಾವಣೆಯ ತಯಾರಿಯನ್ನು ನಡೆಸುತ್ತಿದ್ದಾರೆ. ವಿವಿಧ ಸಮಾವೇಶಗಳನ್ನು ನಡೆಸುವ ಮೂಲಕ ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಿಸುತ್ತಿದ್ದಾರೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷ. ಬಿಹಾರದಲ್ಲಿ ಬಿಜೆಪಿ ಜೆಡಿಯು ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಎನ್‌ಡಿಎ, ಇಂಡಿಯಾ ಮೈತ್ರಿಕೂಟಕ್ಕೆ ಚುನಾವಣೆ ಪ್ರತಿಷ್ಠೆಯಾಗಿದೆ.
ಬಿಹಾರ ವಿಧಾನಸಭೆ ಚುನಾವಣೆ-2025ಕ್ಕೆ ಬಿಜೆಪಿ ಗುರುವಾರ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬಿಹಾರ ಚುನಾವಣೆಯ ಉಸ್ತುವಾರಿಯಾಗಿದ್ದಾರೆ.
ಪಕ್ಷ ಸಿ.ಆರ್.ಪಾಟೀಲ್ ಮತ್ತು ಕೇಶವ್ ಪ್ರಸಾದ್ ಮೌರ್ಯರನ್ನು ಸಹ ಉಸ್ತುವಾರಿಯಾಗಿ ನೇಮಿಸಿ ಆದೇಶಿಸಿದೆ. ಈ ಮೂಲಕ ಬಿಹಾರದಲ್ಲಿ ಚುನಾವಣಾ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಯಾವಾಗ ಬೇಕಾದರೂ ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದೆ.
ಸೀಟು ಹಂಚಿಕೆ ಹೇಗೆ?; ಸದ್ಯದ ಮಾಹಿತಿ ಪ್ರಕಾರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ಸೀಟು ಹಂಚಿಕೆ ಮಾಡಿಕೊಳ್ಳಲಿದೆ. ಜೆಡಿಯು ರಾಜ್ಯದ ಆಡಳಿತ ಪಕ್ಷವಾಗಿದ್ದು, ನಿತೀಶ್ ಕುಮಾರ್ ಹಾಲಿ ಸಿಎಂ.
ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 243. ಮುಂಬರುವ ಚುನಾವಣೆಯಲ್ಲಿ ಬಿಜೆಪಿ 101, ಜೆಡಿಯು 102 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ ಎಂದು ಅಂದಾಜಿಸಲಾಗಿದೆ. ಚಿರಾಗ್ ಪಸ್ವಾನ್ ಪಕ್ಷಕ್ಕೆ 20 ಕ್ಷೇತ್ರಗಳನ್ನು ಬಿಟ್ಟುಕೊಡುವ ನಿರೀಕ್ಷೆ ಇದೆ.
2020ರ ಚುನಾವಣೆಯಲ್ಲಿ ಜೆಡಿಯು 115, ಬಿಜೆಪಿ 110 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು. ಆದರೆ ಈ ಬಾರಿ ಚಿರಾಗ್ ಪಸ್ವಾನ್ ಪಕ್ಷ ಸಹ ಮೈತ್ರಿಕೂಟದಲ್ಲಿದೆ. ಆದ್ದರಿಂದ ಅದಕ್ಕೆ ಸಹ ಸೀಟು ಬಿಟ್ಟುಕೊಡಬೇಕಿದೆ. ಸೀಟು ಹಂಚಿಕೆ ಕುರಿತು ಯಾವುದೇ ಪಕ್ಷಗಳು ಇನ್ನು ಅಂತಿಮ ಘೋಷಣೆ ಮಾಡಿಲ್ಲ.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ‘ಇಂಡಿಯಾ’ ಮೈತ್ರಿಕೂಟ ಎದುರಾಳಿ. ಕಾಂಗ್ರೆಸ್, ಆರ್‌ಜೆಡಿ ಈ ಮೈತ್ರಿಕೂಟದಲ್ಲಿವೆ. ಈ ಮೈತ್ರಿಕೂಟದ ಸೀಟು ಹಂಚಿಕೆ ಕುರಿತು ಇನ್ನೂ ಸಹ ಅಂತಿಮ ತೀರ್ಮಾನವಾಗಿಲ್ಲ.
ಅಕ್ಟೋಬರ್ ಅಂತ್ಯ ಅಥವ ನವೆಂಬರ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 15ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ನವೆಂಬರ್ 22ರಂದು ಹಾಲಿ ಸರ್ಕಾರದ ಅವಧಿ ಪೂರ್ಣಗೊಳ್ಳಲಿದ್ದು, ಅದಕ್ಕೂ ಮೊದಲು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.
ಮುಂದಿನ ವಾರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯ ಚುನಾವಣಾ ಅಧಿಕಾರಿಗಳ ಜೊತೆ ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ, ಹೊಸ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡುತ್ತಿದ್ದಾರೆ.
243 ಸೀಟುಗಳಿಗೆ 2020ರಲ್ಲಿ ಮೂರು ಹಂತದಲ್ಲಿ ಚುನಾವಣೆಗಳನ್ನು ನಡೆಸಲಾಗಿತ್ತು. ಈ ಬಾರಿ ಎಷ್ಟು ಹಂತದಲ್ಲಿ ಮತದಾನ ನಡೆಯಲಿದೆ? ಎಂದು ಆಯೋಗ ತೀರ್ಮಾನ ಮಾಡಲಿದೆ. ಸದ್ಯ ವಿಧಾನಸಭೆಯಲ್ಲಿ ಎನ್‌ಡಿಎ 131 ಸದಸ್ಯ ಬಲ ಹೊಂದಿದೆ. ಬಿಜೆಪಿ 80, ಜೆಡಿಯು 45. ನಿತೀಶ್ ಕುಮಾರ್ ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.