ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಶಿಕ್ಷಕರ ತುರ್ತು ಗಮನಕ್ಕೆ

0
72

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯಾದ್ಯಾಂತ ಕರ್ನಾಟಕ ಸರ್ಕಾರ ಸೆಪ್ಟೆಂಬರ್ 22ರಿಂದ ಆರಂಭಿಸಿದೆ. ಈ ಸಮೀಕ್ಷೆಗಾಗಿ ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಒಟ್ಟು 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ. ಸಮೀಕ್ಷೆ ಹಿನ್ನಲೆಯಲ್ಲಿ ಶಿಕ್ಷಕರಿಗೆ ತುರ್ತು ಮಾಹಿತಿಯೊಂದನ್ನು ನೀಡಲಾಗಿದೆ.

ಈ ಕುರಿತು ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ :04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳು-2022ರ ಪ್ರಕಾರ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ ತತ್ಸಮಾನ ವೃಂದದ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು/ ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ಕೋರಿಕೆ/ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್‌ ನಡೆಸುವ ಸಂಬಂಧ ದಿನಾಂಕ 19/09/2025ರಲ್ಲಿ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿ-4 ಪ್ರಕಟಿಸಲಾಗಿತ್ತು ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ನಡೆಯುತಿದ್ದು, ಇದರಲ್ಲಿ ಬಹುತೇಕ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿರುವುದರಿಂದ, ಶಿಕ್ಷಕರು ವರ್ಗಾವಣೆ ಕೌನ್ಸಿಲಿಂಗ್‌ಗೆ ಹಾಜರಾಗಲು ಮತ್ತು ಸಮೀಕ್ಷೆಯನ್ನು ಏಕ ಕಾಲದಲ್ಲಿ ನಡೆಸಲು ಸಮಸ್ಯೆಯಾಗುವುದರಿಂದ ದಿನಾಂಕ 25/09/2025ರಿಂದ ಪ್ರಾರಂಭವಾಗಬೇಕಾಗಿದ್ದ ಎಲ್ಲಾ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮುಂದಿನ ಎಲ್ಲಾ ರೀತಿಯ ಕೌನ್ಸಿಲಿಂಗ್ ದಿನಾಂಕಗಳನ್ನು ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯಲ್ಲಿ ಮುಂದೆ ಪ್ರಕಟಿಸಲಾಗುವುದು. ಈ ಮಾಹಿತಿಯನ್ನು ಶಿಕ್ಷಕರುಗಳಿಗೆ ತಿಳಿಸಲು ಸೂಚಿಸಿದೆ ಎಂದು ಹೇಳಿದೆ.

ಒಟ್ಟು 1.60 ಲಕ್ಷ ಶಿಕ್ಷಕರ ನಿಯೋಜನೆ: ಕರ್ನಾಟಕ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ರಾಜ್ಯಾದ್ಯಾಂತ ಶಿಕ್ಷಣ ಇಲಾಖೆಯಿಂದ ಒಟ್ಟು 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆ ನೀಡಿದ ಭರವಸೆಯಂತೆ ಒಳಮೀಸಲಾತಿ ಜಾರಿಗೆ ತಂದೆವು. ಈಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದೇವೆ. ಈ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದೆ” ಎಂದರು.

“ಈಗಾಗಲೇ ಸರ್ಕಾರದ ಆದೇಶದಂತೆ ಸಮೀಕ್ಷೆಗೆ ನನ್ನ ಇಲಾಖೆಯಿಂದ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 1 ಕೋಟಿ ಮನೆಗಳಿದ್ದು, ಸಮೀಕ್ಷೆಗೆ ಇಲಾಖೆಯಿಂದ 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ. ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5.50 ಲಕ್ಷ ಮನೆಗಳಿದ್ದು, 35000 ಶಿಕ್ಷಕರನ್ನು ನೇಮಿಸಲಾಗಿದೆ. ಜಿಲ್ಲಾಡಳಿತವೂ ಯಾವುದೇ ರೀತಿ ಸಮಸ್ಯೆಯಾಗದಂತೆ ಸಮೀಕ್ಷೆಯನ್ನು ನಡೆಸಬೇಕು. ಅಂತಹ ಸಂದರ್ಭ ಒದಗಿ ಬಂದರೆ ಇಲಾಖೆಯ ಕಾರ್ಯದರ್ಶಿ ಅಥವಾ ಹಿಂದುಳಿದ ವರ್ಗಗಳ ಇಲಾಖೆ ಆಯುಕ್ತರ ಗಮನಕ್ಕೆ ತಂದು ಅದನ್ನು ಸರಿಪಡಿಸಿಕೊಳ್ಳಬೇಕು” ಎಂದು ಹೇಳಿದರು.

“ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದಾರೆ. ಸೆ.22 ರಿಂದ ಅ.7 ರವೆಗೆ ಈ ಸಮೀಕ್ಷೆ ನಡೆಯಲಿದ್ದು, ಜನರು ವಿರೋಧ ಪಕ್ಷಗಳ ಮಾತುಗಳಿಗೆ ಕಿವಿಕೊಡದೆ ಸಮೀಕ್ಷೆಗೆ ಸಹಕರಿಸಬೇಕು, ಸರಿಯಾದ ಮಾಹಿತಿ ನೀಡಬೇಕು. ಇದರಿಂದ ನಿಮ್ಮ ಹಕ್ಕಗಳನ್ನು ಪಡೆದುಕೊಳ್ಳಲು ಒಂದು ವ್ಯವಸ್ಥೆ ನಿರ್ಮಾಣವಾದಂತೆ ಆಗುತ್ತದೆ. ನಮ್ಮ ಇಲಾಖೆಯ ಶಿಕ್ಷಕರುಗಳು ನಿಗದಿತ ದಿನದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಆಗದಿದ್ದರೆ ಮುಂದಿನ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ” ಎಂದು ತಿಳಿಸಿದರು.

Previous articleಸ್ವದೇಶಿ ಮೆಸೇಜಿಂಗ್ ಆ್ಯಪ್‌ Arattai ಬೆಂಬಲಿಸಿದ ಧರ್ಮೇಂದ್ರ ಪ್ರಧಾನ್
Next articleದಾವಣಗೆರೆ: ವಿವಾದಕ್ಕೆ ಕಾರಣವಾದ ಆಕ್ಷೇಪಾರ್ಹ ಫ್ಲೆಕ್ಸ್

LEAVE A REPLY

Please enter your comment!
Please enter your name here