ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಅಣೆಕಟ್ಟಿನಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತದೆ. ಕಾಲುವೆ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಭದ್ರಾ ಡ್ಯಾಂ ಈಗಾಗಲೇ ಭರ್ತಿಯಾಗಿದ್ದು, ಕಾಲುವೆ ಮತ್ತು ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಡಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಗ್ರಾಮಗಳ ಮಾರ್ಗವಾಗಿ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರ (ಮಾರಿಕಣಿವೆ) ಡ್ಯಾಂಗೆ ಸರ್ಕಾರದ ನಿರ್ದೇಶನದಂತೆ ದಿನಾಂಕ 27/07/2025ರಿಂದ ನೀರು ಹರಿಸಲಾಗುತ್ತದೆ.
ಜನರಿಗೆ ಎಚ್ಚರಿಕೆ: ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯು ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದೆ.
ಸರ್ಕಾರದ ನಿರ್ದೇಶನದಂತೆ ಜುಲೈ 27ರಿಂದ ಶಾಂತಿಪುರ ಪಂಪ್ ಹೌಸ್-1, ಜಂಭದಹಳ್ಳ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್ ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಟ್ಟೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿಂದ ಹೆದ್ದೂರು, ಕಾಟಿನಗೆರೆ, ಬೆಣಕುಣಿಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಹೆಚ್. ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳಹಿರಿಯೂರು ಮತ್ತು ಹಿ. ತಿಮ್ಮಾಪುರ ಗ್ರಾಮಗಳ ಮಾರ್ಗವಾಗಿ ನೀರು ಹರಿದು ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತದೆ.
ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಹಾಗೂ ಇತರೆ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಈ ಸೂಚನೆಗಳನ್ನು ಉಲ್ಲಂಘಿಸುವುದು, ನಿಗಮದ ಆಸ್ತಿಯಾದ ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‌ಸೆಟ್ ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಬಲದಂಡೆ ನಾಲೆಗೆ ನೀರು: ಭದ್ರಾ ಡ್ಯಾಂನಿಂದ ಮುಂಗಾರು ಬೆಳೆಗೆ ಬಲದಂಡೆ ನಾಲೆಗೆ ಜುಲೈ 22ರಿಂದ 120 ದಿನಗಳ ಕಾಲ ನೀರು ಹರಿಸಲಾಗುತ್ತದೆ ಎಂದು ಈಗಾಗಲೇ ದಿನಾಂಕ ಘೋಷಣೆ ಮಾಡಲಾಗಿದೆ. ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕ ಶೀಘ್ರದಲ್ ನಿಗದಿಯಾಗಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ತೀರ್ಮಾನಿಸಲಾಗಿದೆ.
ಜುಲೈ 22ರ ಮಂಗಳವಾರದಿಂದ ಬಲದಂಡೆ ನಾಲೆಗೆ 120 ದಿನಗಳ ಕಾಲ ನೀರು ಹರಿಸಲು ಸಭೆ ನಿರ್ಧರಿಸಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ನೀರು ಬಿಡಬೇಕು. ಎಡದಂಡೆ ನಾಲೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದು, ಶೀಘ್ರದಲ್ಲೇ ಎಡದಂಡೆ ನಾಲೆಗೆ ನೀರು ಹರಿಸಲು ದಿನಾಂಕ ನಿಗದಿಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.