Home News ಭಾರತದಲ್ಲಿ ಟೆಸ್ಲಾ ಮೊದಲ ಶೋ ರೂಂ: ಯಾವಾಗ, ಯಾವ ನಗರದಲ್ಲಿ?

ಭಾರತದಲ್ಲಿ ಟೆಸ್ಲಾ ಮೊದಲ ಶೋ ರೂಂ: ಯಾವಾಗ, ಯಾವ ನಗರದಲ್ಲಿ?

ಮುಂಬೈ: ಯುರೋಪ್ ಮತ್ತು ಚೀನಾದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ಮಾರಾಟ ಕಡಿಮೆಯಾಗುತ್ತಿರುವ ಸಮಯದಲ್ಲಿ ಭಾರತಕ್ಕೆ ಟೆಸ್ಲಾ ಪ್ರವೇಶ ಮಾಡುತ್ತಿದೆ. ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಕಾರು ಭಾರತಕ್ಕೆ ಬರುವುದು ಖಾತ್ರಿಯಾಗಿದ್ದೂ, ಈ ಮೂಲಕ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಅಟೋಮೊಬೈಲ್‌ ಮಾರುಕಟ್ಟೆಯಾದ ಭಾರತದಲ್ಲಿ ಅಧಿಕೃತ ಕಾರ್ಯಾಚರಣೆಯನ್ನು ಪ್ರಾರಂಭಿಸುವತ್ತ ಒಂದು ಹೆಜ್ಜೆ ಇಟ್ಟಿದೆ.

ಗುರುವಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಜುಲೈ 15 ರಂದು ಮುಂಬೈನಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ತಿಳಿಸಿದೆ. ಕಾರು ತಯಾರಕರು ಜುಲೈ 15ರ ಕಾರ್ಯಕ್ರಮವು ನಗರದ ಪ್ರಮುಖ ವಾಣಿಜ್ಯ ವ್ಯಾಪಾರ ಜಿಲ್ಲೆಯಲ್ಲಿರುವ “ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಟೆಸ್ಲಾ ಕೇಂದ್ರವನ್ನು ತೆರೆಯುವ ಮೂಲಕ ಭಾರತದಲ್ಲಿ ಟೆಸ್ಲಾವನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಟೆಸ್ಲಾ, ಭಾರತದಲ್ಲಿ ಆಮದು ಮಾಡಿಕೊಂಡ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದು ಇದಕ್ಕಾಗಿ ಅದು ಸುಮಾರು 70% ಆಮದು ಸುಂಕ ಮತ್ತು ಇತರ ಸುಂಕಗಳನ್ನು ಪಾವತಿಸಬೇಕಾಗುತ್ತದೆ.

ಮಾರ್ಚ್‌ನ ಆರಂಭದಲ್ಲಿ, ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋರೂಂ ಸ್ಥಳಕ್ಕಾಗಿ ಗುತ್ತಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿತ್ತು. ಯುರೋಪ್ ಮತ್ತು ಚೀನಾದಲ್ಲಿ ಟೆಸ್ಲಾ ಕಾರುಗಳ ಮಾರಾಟ ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಟೆಸ್ಲಾ ಭಾರತಕ್ಕೆ ಎಂಟ್ರಿಯಾಗುತ್ತಿದೆ. ಕೆಲವು ತಿಂಗಳ ಹಿಂದೆ ಟೆಸ್ಲಾ ತನ್ನ ಭಾರತೀಯ ಕಾರ್ಯಾಚರಣೆಗಳಿಗಾಗಿ ತನ್ನ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೊಂದು ಶೋರೂಂ ತೆರೆಯುವ ನಿರೀಕ್ಷೆಯಿದೆ.

ಕೇಂದ್ರ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಟೆಸ್ಲಾ ಭಾರತದಲ್ಲಿ ಉತ್ಪದನಾ ಘಟಕ ತೆರೆಯುವುದಿಲ್ಲ ಎಂದು ಹೇಳಿದ್ದರು. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಕಂಪನಿಗಳು ಭಾರತದಲ್ಲಿ ಉತ್ಪದನಾ ಘಟಕೆ ತೆರೆಯಬಾರದು. ಅಮೆರಿಕದಲ್ಲೇ ಉತ್ಪದನಾ ಘಟಕ ತೆರೆಯುವಂತೆ ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಟೆಸ್ಲಾ ಭಾರತದಲ್ಲಿ ಉತ್ಪಾದನಾ ಘಟಕ ತೆರೆಯುತ್ತಿಲ್ಲ. ಅವರ ಆಸಕ್ತಿಗಳು ದೇಶದೊಳಗೆ ಶೋ ರೂಂಗಳನ್ನು ಸ್ಥಾಪಿಸುವುದಕ್ಕೆ ಸೀಮಿತವಾಗಿವೆ. ಭಾರತದ ವಿದ್ಯುತ್ ವಾಹನ ಉತ್ಪಾದನಾ ಕಾರ್ಯಕ್ರಮಗಳೊಂದಿಗೆ ಟೆಸ್ಲಾದ ತೊಡಗಿಸಿಕೊಳ್ಳುವಿಕೆ ಕಡಿಮೆಯಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಯ ಕುರಿತು ಆರಂಭಿಕ ಪಾಲುದಾರರ ಸಭೆಯಲ್ಲಿ ಟೆಸ್ಲಾ ಭಾಗವಹಿಸಿದ್ದರೂ, ನಂತರದ ಎರಡು ಸಮಾಲೋಚನಾ ಅವಧಿಗಳಿಗೆ ಅವರು ಹಾಜರಾಗಲಿಲ್ಲ. ಚೀನಾದಲ್ಲಿ ತಯಾರಾದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಮುಂದಾಗಿದ್ದು ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಕ್ರಾಸ್‌ಓವರ್‌ ಎಸ್‌ಯುವಿ ಮಾಡೆಲ್‌ ವೈ ಕಾರುಗಳನ್ನು ಆರಂಭದಲ್ಲಿ ಭಾರತದಲ್ಲಿ ಮಾರಾಟ ಮಾಡಲು ಟೆಸ್ಲಾ ಸಿದ್ಧತೆ ನಡೆಸಿದೆ.

ಈಗಾಗಲೇ ಟೆಸ್ಲಾ ತನ್ನ ಶಾಂಘೈ ಸ್ಥಾವರದಿಂದ ಐದು ಮಾಡೆಲ್ ವೈ ವಾಹನಗಳನ್ನು ಮುಂಬೈಗೆ ತಂದಿದೆ. ಈ ವಾಹನದ ಮೂಲ ಬೆಲೆ 27.70 ಲಕ್ಷ ರೂ. ಇದೆ. ಚೀನಾದಿಂದ ಭಾರತಕ್ಕೆ ಬಂದ ವೆಚ್ಚ, ಆಮದು ಸುಂಕ ವಿಧಿಸಿದ ಬಳಿಕ ಈ ಕಾರಿನ ದರ ಎಷ್ಟಿರಬಹುದು ಎನ್ನುವುದು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಟೆಸ್ಲಾ ಕಾರಿನ ಬೆಲೆ 40 ಲಕ್ಷ ರೂ.ಗಿಂತ ಕಡಿಮೆ ಇರಬಹುದು ಎಂದು ಕೆಲ ವರದಿಗಳು ಹೇಳಿವೆ.

ಹೊಸ ಎಲೆಕ್ಟ್ರಿಕಲ್‌ ಕಾರು ನೀತಿಯಲ್ಲಿ ಕೆಲ ಷರತ್ತು ಸಹ ಇದೆ. ಕಂಪನಿಯು ಕಾರ್ಯಾಚರಣೆಯ ಮೂರನೇ ವರ್ಷದ ವೇಳೆಗೆ ಭಾರತದಲ್ಲಿ ಕಾರುಗಳನ್ನು ತಯಾರಿಸಲು ಪ್ರಾರಂಭಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ಅನುಮೋದನೆ ಪಡೆದರೆ ರಿಯಾಯಿತಿ ದರದ 15% ಸುಂಕ ಮತ್ತು 5% ಜಿಎಸ್‌ಟಿ ಹಾಕಲಾಗುತ್ತದೆ. ಅಂದರೆ 35 ಸಾವಿರ ಡಾಲರ್‌ ಕಾರಿನ ಬೆಲೆ ಸುಮಾರು 36 ಲಕ್ಷ ರೂ. ಆದರೆ ಆಮದು ಮಾಡಿದ 50 ಸಾವಿರ ಡಾಲರ್‌ ಕಾರಿನ ಬೆಲೆಗೆ 52 ಲಕ್ಷ ರೂ. ಆಗಲಿದೆ.

Exit mobile version