Home ಅಪರಾಧ Vijaypur: ಕೊಯಮತ್ತೂರು ಬಾಂಬ್​ ಸ್ಫೋಟ: 27 ವರ್ಷದ ಬಳಿಕ ಟೈಲರ್ ರಾಜಾ ಅರೆಸ್ಟ್

Vijaypur: ಕೊಯಮತ್ತೂರು ಬಾಂಬ್​ ಸ್ಫೋಟ: 27 ವರ್ಷದ ಬಳಿಕ ಟೈಲರ್ ರಾಜಾ ಅರೆಸ್ಟ್

ವಿಜಯಪುರ: ತಮಿಳುನಾಡಿನ ಕೊಯಮತ್ತೂರಿನಲ್ಲಿ 1998ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿಯನ್ನು ತಮಿಳುನಾಡು ಪೊಲೀಸ್, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುಪ್ತಚರ ಇಲಾಖೆ ನೆರವಿನ ಮೇರೆಗೆ ವಿಜಯಪುರದಲ್ಲಿ ಬಂಧಿಸಿದ್ದಾರೆ.

27 ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಸಾದಿಕ್ ರಾಜಾ ಅಲಿಯಾಸ್ ಟೈಲರ್ ರಾಜಾ ಅಲಿಯಾಸ್ ಶಹಜಹಾನ್ ಅಬ್ದುಲ್ ಮಜೀದ್ ಮಕಾಂದರ್ ಅಲಿಯಾಸ್ ಶಹಜಹಾನ್ ಶೇಕ್ (50) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಾದಿಕ್ ರಾಜಾ ಕೊಯಮತ್ತೂರು ಸ್ಫೋಟ ಪ್ರಕರಣದ ಬಳಿಕ ರಾಜ್ಯದ ಹುಬ್ಬಳ್ಳಿ ಮತ್ತು ವಿಜಯಪುರ ನಗರದಲ್ಲಿ ಕಳೆದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಮೂಲತಃ ಕೊಯಮತ್ತೂರ ನಿವಾಸಿಯಾಗಿದ್ದ ಸಾದಿಕ್, ಈ ಹಿಂದೆಯೂ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದು ಈಗ ಪೊಲೀಸರ ಬಲೆಗೆ ಸಿಲುಕಿದ್ದಾನೆ. 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ 58 ಜನ ಸಾವನ್ನಪ್ಪಿದ್ದರು ಹಾಗೂ 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈತ 1996ರಲ್ಲಿ ಕೊಯಮತ್ತೂರಿನಲ್ಲೇ ಸಂಭವಿಸಿದ್ದ ಪೆಟ್ರೋಲ್ ಬಾಂಬ್ ದಾಳಿಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ. 1997ರಲ್ಲಿ ಮಧುರೈನಲ್ಲಿ ನಡೆದಿದ್ದ ಜೈಲರ್ ಜಯಪ್ರಕಾಶ್ ಅವರ ಹತ್ಯೆ ಆರೋಪವೂ ಈತನ ಮೇಲಿದೆ. ಅಲ್ಲದೇ ಇತರೆ ಪ್ರಕರಣಗಳಲ್ಲೂ ಭಾಗಿಯಾಗಿರುವ ಆರೋಪಗಳಿವೆ.

ಹುಬ್ಬಳ್ಳಿಯ ಮಹಿಳೆಯೊಬ್ಬರನ್ನು ವಿವಾಹವಾಗಿದ್ದ ಆರೋಪಿ ಸಾದಿಕ್, ಕಳೆದ 12 ವರ್ಷಗಳಿಂದ ವಿಜಯಪುರ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಸಂಬಂಧ ತಮಿಳುನಾಡು ಪೊಲೀಸರು ಆರೋಪಿಯನ್ನು ಕೊಯಮತ್ತೂರಿಗೆ ಕರೆದೊಯ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

24ರ ವರೆಗೆ ನ್ಯಾಯಾಂಗ ಬಂಧನ:
ಬಂಧಿತ ಸಾದಿಕ್​​ನನ್ನು ಐದನೇ ಕ್ರಿಮಿನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶೆ ವರ್ಜಿನ್ ವೆಸ್ಟಾ ಅವರು ಅಲ್ ಉಮ್ಮಾ ಚಳವಳಿಯ ಸದಸ್ಯ ಟೈಲರ್ ರಾಜಾನನ್ನು ಜುಲೈ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳಿಕ ಆತನನ್ನು ಬಿಗಿ ಭದ್ರತೆಯಲ್ಲಿ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು.

Exit mobile version