ವಿಜಯಪುರ: ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ 2 ಡಿಫೆನ್ಸ್ ಕಾರಿಡಾರ್ ಕೊಡಬೇಕು. ಇದನ್ನು ಮನದಟ್ಟು ಮಾಡಿಕೊಡಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿಮಾಡಿದ್ದರು.
ಶುಕ್ರವಾರ ದೆಹಲಿ ಭೇಟಿ ಬಗ್ಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಂ. ಬಿ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯದಲ್ಲಿ ರಾಷ್ಟ್ರಕ್ಕೆ ನಮ್ಮ ರಾಜ್ಯದ ಕೊಡುಗೆ ಶೇ. 65 ರಷ್ಟಿದ್ದರೂ ಡಿಫೆನ್ಸ್ ಕಾರಿಡಾರ್ ದೊರೆತಿಲ್ಲ. ನಮಗಿಂತಲೂ ಕಡಿಮೆ ಕೊಡುಗೆ ನೀಡುತ್ತಿರುವ ತಮಿಳುನಾಡು ಮತ್ತು ಉತ್ತರ ಪ್ರದೇಶಕ್ಕೆ ಡಿಫೆನ್ಸ್ ಕಾರಿಡಾರ್ ನೀಡಲಾಗಿದೆ” ಎಂದರು.
“ಈ ಲೋಪವನ್ನು ಹಿಂದೆಯೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಡಿಫೆನ್ಸ್ ಕಾರಿಡಾರ್ ನಮ್ಮ ಹಕ್ಕಾಗಿದ್ದು, ,ರಾಜ್ಯಕ್ಕೆ 2 ಡಿಫೆನ್ಸ್ ಕಾರಿಡಾರ್‌ಗಳ ಬೇಡಿಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪ್ರಧಾನಿಗಳನ್ನು ಭೇಟಿ ಮಾಡಲಾಗುವುದು. ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ 2 ಡಿಫೆನ್ಸ್ ಕಾರಿಡಾರ್ ಕೊಡಬೇಕು. ಇದು ನಮ್ಮ ಹಕ್ಕಾಗಿದೆ” ಎಂದು ತಿಳಿಸಿದರು.
“ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯಕ್ಕೆ ಕರ್ನಾಟಕ ನೀಡುತ್ತಿರುವ ಕೊಡುಗೆಗೆ ಉತ್ತರ ಕರ್ನಾಟಕದಲ್ಲಿ ಒಂದು, ದಕ್ಷಿಣ ಕರ್ನಾಟಕದಲ್ಲಿ ಮತ್ತೊಂದು ಡಿಫೆನ್ಸ್ ಕಾರಿಡಾರ್ ಅಗತ್ಯವಿದೆ ಎಂಬ ಬೇಡಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತಾವವನ್ನು ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಪ್ರಸ್ತಾಪಿಸಲು ಸಲಹೆ ನೀಡಿದ್ದಾರೆ” ಎಂದು ಸಚಿವರು ಹೇಳಿದರು.
“ಬೆಳಗಾವಿಯಲ್ಲಿ ಈಗ ಏಕಸ್ ತರಹದ ದೈತ್ಯ ಕಂಪನಿಗಳಿವೆ. ಬೇರೆ ರಾಜ್ಯದವರಿಗೆ ಡಿಫೆನ್ಸ್ ಕಾರಿಡಾರ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ನಮಗೆ ಸಲ್ಲಬೇಕಾದ್ದು ಸಲ್ಲಲೇಬೇಕು ಹಿಂದೆ ಮಾಡಿದ ತಪ್ಪು ಕೇಂದ್ರ ಸರ್ಕಾರಕ್ಕೆ ಅರಿವಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಗಳನ್ನು ಭೇಟಿ ಮಾಡಿ ರಾಜ್ಯದ ಬೇಡಿಕೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ” ಎಂದರು.
ಸಚಿವ ಎಂ. ಬಿ. ಪಾಟೀಲ್ ಶುಕ್ರವಾರದಿಂದ ವಿಜಯಪುರ ಪ್ರವಾಸದಲ್ಲಿದ್ದು, ಇಂದು ತಿಕೋಟಾ ತಾಲ್ಲೂಕಿನ ಕೊರಬುಗಲ್ಲಿ 4.95 ಕೋಟಿ ರೂ. ವೆಚ್ಚದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಡಿ.ಸಿ-2 ರಿಂದ ಜಂಕ್ಷನ್ ವರೆಗೆ ವಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿ ವರೆಗೆ 5 ಕಿ.ಮೀ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.