ಇಂದಿನ ಜೇನುಗೂಡಿನಂತಹ ಜೀವನಶೈಲಿಯಲ್ಲಿ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಪಾನೀಯಗಳ ಕಡೆಗೆ ಜನರ ಒಲವು ಹೆಚ್ಚುತ್ತಿದ್ದು, ಅದರಲ್ಲಿ ‘ಎಬಿಸಿ’ (Apple-Beetroot-Carrot) ಜ್ಯೂಸ್ ಅತ್ಯಂತ ಜನಪ್ರಿಯವಾಗಿದೆ. ಇದನ್ನು ‘ಮಿರಾಕಲ್ ಡ್ರಿಂಕ್’ ಅಥವಾ ಅದ್ಭುತ ಪಾನೀಯವೆಂದೇ ಕರೆಯಲಾಗುತ್ತದೆ.
ಏನಿದು ಎಬಿಸಿ ಜ್ಯೂಸ್?: ಸೇಬು (Apple), ಬೀಟ್ರೂಟ್ (Beetroot) ಮತ್ತು ಗಜ್ಜರಿ (Carrot) ಈ ಮೂರೂ ಪದಾರ್ಥಗಳ ಸಮ್ಮಿಲನವೇ ಈ ಪಾನೀಯ. ಇದರಲ್ಲಿ ವಿಟಮಿನ್ ಎ, ಬಿ1, ಬಿ2, ಬಿ6, ಸಿ, ಇ ಮತ್ತು ಕೆ ಸೇರಿದಂತೆ ಫೋಲೇಟ್, ಸತು, ತಾಮ್ರ ಮತ್ತು ಕಬ್ಬಿಣದಂತಹ ಖನಿಜಾಂಶಗಳು ಹೇರಳವಾಗಿವೆ.
ತಯಾರಿಸುವ ವಿಧಾನ: ಒಂದು ದೊಡ್ಡ ಸೇಬು, ಅರ್ಧ ಬೀಟ್ರೂಟ್ ಹಾಗೂ ಒಂದು ದೊಡ್ಡ ಗಜ್ಜರಿಯನ್ನು ತೆಗೆದುಕೊಂಡು ಸಿಪ್ಪೆ ಸುಲಿದು ಹೋಳು ಮಾಡಿಕೊಳ್ಳಬೇಕು. ಇದಕ್ಕೆ ಒಂದು ಇಂಚು ಶುಂಠಿ ಮತ್ತು ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮಲ್ ಬಟ್ಟೆಯಲ್ಲಿ ಸೋಸಿ, ಅರ್ಧ ಹೋಳು ನಿಂಬೆ ರಸ ಸೇರಿಸಿದರೆ ಆರೋಗ್ಯಕರ ಜ್ಯೂಸ್ ಸಿದ್ಧ. ಜ್ಯೂಸ್ ತೆಗೆದ ಮೇಲೆ ಉಳಿಯುವ ಪಲ್ಪ್ (ತಿರುಳು) ಅನ್ನು ಪರಾಟಾ ಅಥವಾ ಚಪಾತಿ ಹಿಟ್ಟಿನೊಂದಿಗೆ ಬೆರೆಸಿ ಬಳಸುವುದರಿಂದ ನಾರಿನಂಶವೂ ದೇಹಕ್ಕೆ ಲಭಿಸುತ್ತದೆ.
ಆರೋಗ್ಯ ಪ್ರಯೋಜನಗಳು:
- ಚರ್ಮ ಮತ್ತು ಕೂದಲಿನ ಸಂರಕ್ಷಣೆ: ಈ ಜ್ಯೂಸ್ ಸೇವನೆಯಿಂದ ಚರ್ಮದ ಮೇಲಿರುವ ಕಪ್ಪು ಕಲೆಗಳು ಮತ್ತು ಮೊಡವೆಗಳು ಕಡಿಮೆಯಾಗಿ, ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
- ದೇಹದ ಶುದ್ಧೀಕರಣ (Detoxification): ಲಿವರ್ ಮತ್ತು ಕಿಡ್ನಿಗಳಲ್ಲಿರುವ ಕಸವನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
- ರೋಗನಿರೋಧಕ ಶಕ್ತಿ: ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ಗಳು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡಲು ಸಜ್ಜುಗೊಳಿಸುತ್ತವೆ. ಶುಂಠಿ ಮತ್ತು ನಿಂಬೆ ಸೇರಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
- ಹೃದಯದ ಆರೋಗ್ಯ: ಬೀಟ್ರೂಟ್ನಲ್ಲಿರುವ ನೈಟ್ರೇಟ್ ಅಂಶವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ಹೃದಯದ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ.
ಸೇವಿಸುವ ಸರಿಯಾದ ಸಮಯ: ಪೌಷ್ಟಿಕತಜ್ಞರ ಪ್ರಕಾರ, ಎಬಿಸಿ ಜ್ಯೂಸ್ನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಪರಿಣಾಮಕಾರಿ. ಮಧ್ಯಾಹ್ನದ ಸಮಯದಲ್ಲೂ ಇದನ್ನು ಸೇವಿಸಬಹುದು. ಆದ್ರೆ ರಾತ್ರಿ ಹೊತ್ತು ಸೇವಿಸುವುದಕ್ಕಿಂತ ಹಗಲಿನಲ್ಲಿ ಸೇವಿಸುವುದು ಉತ್ತಮ.
ಓದುಗರ ಗಮನಕ್ಕೆ: ಡಯಾಬಿಟಿಸ್ (ಮಧುಮೇಹ) ಇರುವವರು ಬೀಟ್ರೂಟ್ ಮತ್ತು ಸೇಬಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ವೈದ್ಯರ ಸಲಹೆ ಮೇರೆಗೆ ಇದನ್ನು ಮಿತವಾಗಿ ಸೇವಿಸುವುದು ಒಳಿತು.