Home ಕ್ರೀಡೆ ಪಾಕ್ ಕ್ರಿಕೆಟ್‌ನ ಚುಕ್ಕಾಣಿ ಶಾಹಿನ್ ಕೈಗೆ: ರಿಝ್ವಾನ್‌ಗೆ ಕೊಕ್, ಏನಿದು ಹೊಸ ಅಧ್ಯಾಯ?

ಪಾಕ್ ಕ್ರಿಕೆಟ್‌ನ ಚುಕ್ಕಾಣಿ ಶಾಹಿನ್ ಕೈಗೆ: ರಿಝ್ವಾನ್‌ಗೆ ಕೊಕ್, ಏನಿದು ಹೊಸ ಅಧ್ಯಾಯ?

0

ಪಾಕಿಸ್ತಾನ ಕ್ರಿಕೆಟ್ ಜಗತ್ತಿನಲ್ಲಿ ನಾಯಕತ್ವದ ಬದಲಾವಣೆ ಎಂಬುದು ಹೊಸ ವಿಷಯವೇನಲ್ಲ. ಆಗಾಗ ನಾಯಕರನ್ನು ಬದಲಿಸುವ ತನ್ನ ಹಳೆಯ ಚಾಳಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದುವರಿಸಿದ್ದು, ಇದೀಗ ಏಕದಿನ ತಂಡಕ್ಕೆ ಹೊಸ ಸಾರಥಿಯನ್ನು ನೇಮಿಸಿದೆ.

ಇತ್ತೀಚಿನ ಸರಣಿ ಸೋಲುಗಳ ಹಿನ್ನೆಲೆಯಲ್ಲಿ, ಮೊಹಮ್ಮದ್ ರಿಝ್ವಾನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿಗೆ ತಂಡದ ಜವಾಬ್ದಾರಿ ನೀಡಲಾಗಿದೆ.

ಮೊಹಮ್ಮದ್ ರಿಝ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ಕೆಲವು ಸ್ಮರಣೀಯ ಗೆಲುವುಗಳನ್ನು ಸಾಧಿಸಿತ್ತು. ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಮಣಿಸಿದ್ದು ಮತ್ತು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದಿದ್ದು ಅವರ ನಾಯಕತ್ವದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಆದಾಗ್ಯೂ, ಈ ವರ್ಷ ತಂಡದ ಪ್ರದರ್ಶನದಲ್ಲಿ ಸ್ಥಿರತೆ ಇರಲಿಲ್ಲ. ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೋಲು ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಬೇಗನೆ ಹೊರಬಿದ್ದಿದ್ದು, ನಾಯಕತ್ವ ಬದಲಾವಣೆಗೆ ಪಿಸಿಬಿಯನ್ನು ಪ್ರೇರೇಪಿಸಿತು. ವೈಯಕ್ತಿಕವಾಗಿ ರಿಝ್ವಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ತಂಡದ ಸೋಲು ಅಂತಿಮವಾಗಿ ನಾಯಕತ್ವಕ್ಕೆ ಮುಳುವಾಯಿತು.

ಶಾಹಿನ್ ಅಫ್ರಿದಿ ಮುಂದೆ ಇರುವ ಸವಾಲುಗಳೇನು?: ಎಡಗೈ ವೇಗಿ ಶಾಹಿನ್ ಅಫ್ರಿದಿ ಪಾಕಿಸ್ತಾನದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, 66 ಏಕದಿನ ಪಂದ್ಯಗಳಲ್ಲಿ 131 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರಿಗೆ ನಾಯಕತ್ವ ಹೊಸದೇನಲ್ಲ. ಈ ಹಿಂದೆ ಟಿ20 ತಂಡವನ್ನು ಮುನ್ನಡೆಸಿದ ಅನುಭವ ಅವರಿಗಿದೆ.

ಆದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ನಂತರ ಅವರನ್ನು ಆ ಸ್ಥಾನದಿಂದಲೂ ಕೆಳಗಿಳಿಸಲಾಗಿತ್ತು. ಇದೀಗ ಏಕದಿನ ತಂಡದ ನಾಯಕನಾಗಿ ಮರುನೇಮಕಗೊಂಡಿರುವ ಶಾಹಿನ್, ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ. ಮೊದಲ ಸವಾಲು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಾಗಿದ್ದು, ಇಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ತಮ್ಮ ನಾಯಕತ್ವದ ಪಯಣವನ್ನು ಯಶಸ್ವಿಯಾಗಿ ಆರಂಭಿಸಬೇಕಿದೆ.

ಪಿಸಿಬಿಯ ಅಸ್ಥಿರ ನಿರ್ಧಾರಗಳು: ಕೇವಲ ಒಂದೇ ವರ್ಷದಲ್ಲಿ ಮೂರು ಬಾರಿ ನಾಯಕನನ್ನು ಬದಲಿಸಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಸ್ಥಿರ ನಿಲುವುಗಳನ್ನು ತೋರಿಸುತ್ತದೆ. ಕೋಚ್ ಮೈಕ್ ಹೆಸ್ಸನ್ ಮತ್ತು ನಿರ್ದೇಶಕ ಆಕಿಬ್ ಜಾವೇದ್ ನೇತೃತ್ವದ ಆಯ್ಕೆ ಸಮಿತಿಯು ಈ ನಿರ್ಧಾರವನ್ನು ಕೈಗೊಂಡಿದೆ. ಈ ರೀತಿಯ ನಿರಂತರ ಬದಲಾವಣೆಗಳು ಆಟಗಾರರ ಮನೋಬಲದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮುಂದಿನ ದಿನಗಳಲ್ಲಿ ಶಾಹಿನ್ ಅಫ್ರಿದಿ ಟಿ20 ತಂಡದ ನಾಯಕತ್ವವನ್ನೂ ವಹಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಏಷ್ಯಾ ಕಪ್‌ನಲ್ಲಿನ ಕಳಪೆ ಪ್ರದರ್ಶನದಿಂದಾಗಿ ಹಾಲಿ ಟಿ20 ನಾಯಕ ಸಲ್ಮಾನ್‌ ಆಘಾ ಟೀಕೆಗೆ ಗುರಿಯಾಗಿದ್ದಾರೆ. 2027ರ ಏಕದಿನ ವಿಶ್ವಕಪ್‌ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟುವ ದೊಡ್ಡ ಜವಾಬ್ದಾರಿ ಶಾಹಿನ್ ಹೆಗಲಿಗೆರಿದೆ. ಅವರು ಪಾಕಿಸ್ತಾನ ತಂಡಕ್ಕೆ ಅಗತ್ಯವಿರುವ ಸ್ಥಿರತೆಯನ್ನು ತಂದುಕೊಡುತ್ತಾರೆಯೇ ಅಥವಾ ಈ ‘ಸಂಗೀತ ಕುರ್ಚಿ’ ಆಟ ಮುಂದುವರಿಯುತ್ತದೆಯೇ ಎಂದು ಕಾದು ನೋಡಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version