Home ಕ್ರೀಡೆ ರೋಹಿತ್-ಕೊಹ್ಲಿ ವಿಶ್ವಕಪ್ ಭವಿಷ್ಯ: ಹೀಗೇಕೆ ಅಂದ್ರು ಅಶ್ವಿನ್?

ರೋಹಿತ್-ಕೊಹ್ಲಿ ವಿಶ್ವಕಪ್ ಭವಿಷ್ಯ: ಹೀಗೇಕೆ ಅಂದ್ರು ಅಶ್ವಿನ್?

0

ಭಾರತೀಯ ಕ್ರಿಕೆಟ್ ವಲಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಇವರಿಬ್ಬರು ಆಡುತ್ತಾರಾ ಎಂಬ ಪ್ರಶ್ನೆಗೆ, ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ತಮ್ಮದೇ ಆದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ.

ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ನಿರ್ಧಾರಗಳನ್ನು ಬೆಂಬಲಿಸಿರುವ ಅಶ್ವಿನ್, “ಹಿರಿಯ ಆಟಗಾರರು 2027ರ ವಿಶ್ವಕಪ್‌ಗಾಗಿ ತಮ್ಮ ಬದ್ಧತೆಯನ್ನು ದೇಶೀಯ ಟೂರ್ನಿಗಳಲ್ಲಿ ಆಡುವ ಮೂಲಕ ಸಾಬೀತುಪಡಿಸಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ಅಶ್ವಿನ್ ತಮ್ಮ ‘ಆ್ಯಶ್ ಕೀ ಬಾತ್’ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, ರೋಹಿತ್ ಶರ್ಮಾ 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದರೂ, ಆಯ್ಕೆಗಾರರ ಗಮನ ದೀರ್ಘಕಾಲೀನ ಯೋಜನೆ ಮತ್ತು ಸ್ಥಿರವಾದ ಫಾರ್ಮ್‌ನ ಮೇಲಿರುತ್ತದೆ ಎಂದಿದ್ದಾರೆ.

“2027ರ ವಿಶ್ವಕಪ್ ದೃಷ್ಟಿಯಿಂದ ರೋಹಿತ್ ಮತ್ತು ಕೊಹ್ಲಿ ನಮ್ಮ ಯೋಜನೆಗಳಲ್ಲಿ ಇಲ್ಲವೇ, ಅಥವಾ ಅವರು ಆಯ್ಕೆಯಾದರೆ, 2027ರ ಐಸಿಸಿ ಟೂರ್ನಿ ತನಕ ತಮ್ಮ ಫಾರ್ಮ್ ಅನ್ನು ಕಾಯ್ದುಕೊಳ್ಳಲು ಸಾಧ್ಯವೇ ಎಂಬ ಎರಡು ಪ್ರಮುಖ ಪ್ರಶ್ನೆಗಳು ಆಯ್ಕೆ ಸಮಿತಿ ಮುಂದಿವೆ” ಎಂದು ಅಶ್ವಿನ್ ವಿವರಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಬದ್ಧತೆ ಪ್ರದರ್ಶಿಸಿ: ಅಶ್ವಿನ್ ಪ್ರಕಾರ, ರೋಹಿತ್ ಮತ್ತು ಕೊಹ್ಲಿ ತಮ್ಮ ಲಯವನ್ನು ಕಂಡುಕೊಳ್ಳಲು ಮತ್ತು ಬದ್ಧತೆ ಪ್ರದರ್ಶಿಸಲು ಇಂಡಿಯಾ ‘ಎ’ ಸರಣಿ ಅಥವಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸುವುದು ಅತ್ಯಗತ್ಯ.

“ಅವರ ಸೇವೆ ಅಗತ್ಯವಿದ್ದರೆ, ಅದಕ್ಕೆ ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಆಯ್ಕೆಗಾರರು ಕೇವಲ ಲಯಕ್ಕೆ ಮರಳಲು ದೇಶೀಯ ಸರಣಿಗಳನ್ನು ಆಡಲು ಹೇಳಿದರೆ, ಅದು ಬದ್ಧತೆಯನ್ನು ತೋರಿಸುತ್ತದೆ” ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. “ಯಾವುದೇ ಆಯ್ಕೆಗಾರರಿಗೆ ಅಥವಾ ಕೋಚ್‌ಗೆ ಕೊಹ್ಲಿ ಮತ್ತು ರೋಹಿತ್ ಸೇವೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ಹೇಳಲು ಧೈರ್ಯವಿರುವುದಿಲ್ಲ. ವಿಶ್ವಕಪ್‌ಗೆ ಹೋಗುವಾಗ ಇಂತಹ ಗೊಂದಲಗಳು ಇರಬಾರದು” ಎಂದು ಅಶ್ವಿನ್ ಹೇಳಿದ್ದಾರೆ.

ಗಿಲ್ ನಾಯಕತ್ವ, ಆಯ್ಕೆಗಾರರ ದೂರದೃಷ್ಟಿ: ರೋಹಿತ್ ಶರ್ಮಾರಿಂದ ಶುಭಮನ್ ಗಿಲ್‌ಗೆ ಏಕದಿನ ನಾಯಕತ್ವವನ್ನು ಹಸ್ತಾಂತರಿಸಿದ ನಿರ್ಧಾರವನ್ನು ಅಶ್ವಿನ್ ಬಲವಾಗಿ ಬೆಂಬಲಿಸಿದ್ದಾರೆ. “ರೋಹಿತ್ ನಾಯಕರಾಗಿ ಮುಂದುವರಿದು 2026ರಲ್ಲಿ ಫಿಟ್ ಇಲ್ಲದಿದ್ದರೆ, ಹೊಸ ನಾಯಕನನ್ನು ಬೆಳೆಸಲು ಸಾಕಷ್ಟು ಸಮಯವಿರುವುದಿಲ್ಲ ಎಂದು ಆಯ್ಕೆಗಾರರು ಯೋಚಿಸಿರಬಹುದು. ಇದು ತಾರ್ಕಿಕ ನಿರ್ಧಾರ” ಎಂದು ಅಶ್ವಿನ್ ವಿವರಿಸಿದ್ದಾರೆ.

ರೋಹಿತ್ ಶರ್ಮಾ ಇತ್ತೀಚೆಗೆ ನಾಯಕತ್ವ ತಪ್ಪಿದ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಅಶ್ವಿನ್ ಈ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ. ಮೊಹಮ್ಮದ್ ಕೈಫ್ ಅವರಂತಹ ಮಾಜಿ ಆಟಗಾರರು ರೋಹಿತ್ ಬೆಂಬಲಕ್ಕೆ ನಿಂತು ಬಿಸಿಸಿಐ ನಿರ್ಧಾರವನ್ನು ಟೀಕಿಸಿದರೂ, ಅಶ್ವಿನ್ ಮಾತ್ರ ಆಯ್ಕೆ ಸಮಿತಿಯ ದೂರದೃಷ್ಟಿಯನ್ನು ಪ್ರಶಂಸಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version