Home News ಏಕದಿನ ಕ್ರಿಕೆಟ್‌ಗೆ ಫಿಂಚ್ ವಿದಾಯ

ಏಕದಿನ ಕ್ರಿಕೆಟ್‌ಗೆ ಫಿಂಚ್ ವಿದಾಯ

ಸಿಡ್ನಿ: ಸದ್ಯ ನ್ಯೂಜಿಲೆಂಡ್ ವಿರುದ್ಧ ನಡೆದಿರುವ ಏಕದಿನ ಕ್ರಿಕೆಟ್ ಸರಣಿಯ ನಂತರ ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ಶನಿವಾರ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪ್ರಕಟಿಸಿದೆ.
ಆ್ಯರೋನ್ ಫಿಂಚ್ ಈ ವರೆಗೆ ೧೪೫ (ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಪಂದ್ಯ ಹೊರತುಪಡಿಸಿ) ಏಕದಿನ ಪಂದ್ಯಗಳನ್ನು ಆಡಿದ್ದು, ೫೪ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
ಏಕದಿನ ಕ್ರಿಕೆಟ್‌ಗೆ ಫಿಂಚ್ ವಿದಾಯ ಹೇಳಿದ್ದರೂ ಕೂಡ ಅವರು ಟಿ-೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆಂದು ಸಿಎ ತಿಳಿಸಿದೆ.
2013ರಲ್ಲಿ ಏಕದಿನ ಕ್ರಿಕೆಟ್ ರಂಗಕ್ಕೆ ಪಾದಾರ್ಪಣೆ ಮಾಡಿದ ಫಿಂಚ್, ಈ ವರೆಗೆ ಆಡಿರುವ ೧೪೫ ಪಂದ್ಯಗಳಲ್ಲಿ ಸರಾಸರಿ ೩೯.೧೩ ರಂತೆ ಒಟ್ಟು ೫೦೪೧ ರನ್ ಗಳಿಸಿದ್ದಾರೆ. ಇವುಗಳಲ್ಲಿ ೧೭ ಅರ್ಧ ಶತಕ ಹಾಗೂ ೩೦ ಅರ್ಧ ಶತಕಗಳು ಸೇರಿವೆ.
ಇತ್ತಿಚೀನ ದಿನಗಳಲ್ಲಿ ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರ ಆ್ಯರೋನ್ ಫಿಂಚ್, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ನನ್ನ ಸಾಧನೆಯ ಬಗ್ಗೆ ತೃಪ್ತಿ ಇದೆ ಎಂದಿರುವ ಆ್ಯರೋನ್ ಫಿಂಚ್, ಪ್ರಮುಖ ಆಟಗಾರರೊಂದಿಗೆ ಕಳೆದ ದಿನಗಳು ನನ್ನ ಕ್ರಿಕೆಟ್ ಜೀವನದ ಅಪೂರ್ವ ಕ್ಷಣ ಎಂದು ಬಣ್ಣಿಸಿದ್ದಾರೆ.
ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಕೈರ್ನ್ಸ್‌ನಲ್ಲಿ ಭಾನುವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಆ್ಯರೋನ್ ಫಿಂಚ್ ಆಡಲಿದ್ದಾರೆ.

Exit mobile version