ಚಿಕ್ಕಮಗಳೂರು: ಭಾರತ ಮಹಿಳಾ ತಂಡದ ಬ್ಯಾಟರ್, ಕರ್ನಾಟಕದ ಚಿಕ್ಕಮಗಳೂರು ಮೂಲದ ವೇದಾ ಕೃಷ್ಣಮೂರ್ತಿ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿರುವ ವೇದಾ ಕೃಷ್ಣಮೂರ್ತಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಮಹಿಳಾ ಕ್ರಿಕೆಟ್ ಆಟಗಾರರಲ್ಲಿ ವೇದಾ ಪ್ರಮುಖರು.
ಬಲಗೈ ಬ್ಯಾಟರ್ ಆದ ವೇದಾ ಕೃಷ್ಣಮೂರ್ತಿ 48 ಅಂತರಾಷ್ಟ್ರೀಯ ಏಕದಿನ ಮತ್ತು 76 ಅಂತರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. 2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಟವಾಡಿದ್ದು, ಅವಿಸ್ಮರಣೀಯ ಎಂದು ತಮ್ಮ ಪತ್ರದಲ್ಲಿ ಅವರು ಹೇಳಿದ್ದಾರೆ.
ವೇದಾ ಕೃಷ್ಣಮೂರ್ತಿ ಕರ್ನಾಟಕ, ಭಾರತ ಮಹಿಳಾ ತಂಡ, ಭಾರತ ವಿಮೆನ್ ಗ್ರೀನ್, ಭಾರತ ವಿಮೆನ್ ರೆಡ್, ವೆಲೂಸಿಟಿ, ಇಂಡಿಯಾ ಸಿ ವಿಮೆನ್, ಗುಜರಾತ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ‘ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. ಆದರೆ ಕ್ರಿಕೆಟ್‌ನೊಂದಿಗೆ ನಂಟು ಮುಂದುವರೆಸುತ್ತೇನೆ” ಎಂದು ವೇದ ವಿದಾಯದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾವುಕ ಪತ್ರ: ವೇದಾ ತಮ್ಮ ವಿದಾಯದ ಪೋಸ್ಟ್‌ನಲ್ಲಿ, ‘ಕಡೂರಿನಲ್ಲಿ ಇದೆಲ್ಲವೂ ಆರಂಭವಾಯಿತು. ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದ ಸಣ್ಣ ಪಟ್ಟಣದ ಹುಡುಗಿ ನಾನು. ಬದುಕು ಎಲ್ಲಿಯ ತನಕ ಸಾಗಲಿದೆ ಎಂದು ಮೊದಲ ದಿನ ಬ್ಯಾಟ್ ಕೈಗೆತ್ತಿಕೊಂಡ ದಿನ ನನಗೂ ತಿಳಿದಿರಲಲ್ಲ’ ಎಂದು ಬರೆದಿದ್ದಾರೆ.
‘ನನ್ನ ಪಯಣದ ಊಹೆಯೂ ಇರಲಿಲ್ಲ. ಚಿಕ್ಕ ಗಲ್ಲಿಗಳಿಂದ ಪ್ರಾರಂಭವಾಗಿ ವಿಶ್ವದ ದೊಡ್ಡ ಕ್ರೀಡಾಂಗಣದಲ್ಲಿ ಆಡುತ ತನಕ ಬೆಳೆದೆ. ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಭಾರತದ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಕ್ರಿಕೆಟ್ ವೃತ್ತಿಯ ಜೊತೆಗೆ ಜೀವನ ಪಾಠ ಕಲಿಸಿತು. ಹೋರಾಡುವುದು, ಎದುರಿಸಿ ನಿಲ್ಲುವುದು, ಬೀಳುವುದನ್ನು ಕಲಿಸಿತು’ ಎಂದು ಹೇಳಿದ್ದಾರೆ.
‘ಕೋಚ್‌ಗಳು, ಕ್ಯಾಪ್ಟನ್‌ಗಳು, ಪೋಷಕರಿಗೆ ಧನ್ಯವಾದಗಳು. ಭಾರತ ತಂಡದಲ್ಲಿ ಆಡಲು ವಿಶ್ವಾಸವಿಟ್ಟು ಅವಕಾಶ ನೀಡಿದ ಬಿಸಿಸಿಐ, ಕೆಎಸ್‌ಸಿಎ, ರೈಲ್ವೇಸ್ ಮತ್ತು ಕೆಐಒಸಿ ತಂಡಗಳಿಗೆ ಧನ್ಯವಾದಗಳು. ಸಹ ಆಟಗಾರ್ತಿಯರು, ಕರ್ನಾಟಕದ ನಾಯಕಿಯಾಗಿದ್ದಾಗ ಬೆಂಬಲಿಸಿದರು’ ಎಂದು ಬರೆದಿದ್ದಾರೆ.
‘2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದು ವಿಶೇಷ ಅನುಭ. ಮಹಿಳಾ ಕ್ರಿಕೆಟ್ ನೋಡುವ ದೃಷ್ಟಿಕೋನ ಆ ವರ್ಷ ಬದಲಾಯಿತು. ಆ ಮಹತ್ವದ ಘಟ್ಟದಲ್ಲಿ ಭಾಗಿಯಾದ ಬಗ್ಗೆ ಹೆಮ್ಮೆ ಇದೆ. ಫಿಸಿಯೊ, ಟ್ರೈನರ್, ಆಯ್ಕೆಗಾರರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ವೇದಾ ಅವರ ತಾಯಿ ಚೆಲುವಾಂಗ ದೇವಿ ಮೃತಟ್ಟಿದ್ದರು. ಅಕ್ಕ ವತ್ಸಲಾ ಶಿವಕುಮಾರ್ ಅವರು ಸಹ ಸಾವನ್ನಪ್ಪಿದ್ದರು. ತೀವ್ರ ಮಾನಸಿಕ ವೇದನೆ ಅನುಭವಿಸಿದ್ದ ವೇದಾ ಚೇತರಿಸಿಕೊಂಡು ಕರ್ನಾಟಕ ತಂಡದಲ್ಲಿಯೂ ಆಡಿದ್ದರು. ಈಗ ಕನ್ನಡ ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ವರ್ಷ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದರು.