ಅಕ್ರಮ ಬೆಟ್ಟಿಂಗ್ ಆ್ಯಪ್ ಒಂದರ ಪ್ರಚಾರ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಟೀಮ್ ಇಂಡಿಯಾದ ಮಾಜಿ ತಾರಾ ಆಟಗಾರರಾದ ಶಿಖರ್ ಧವನ್ ಮತ್ತು ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ (ED) ಭಾರೀ ಆಘಾತ ನೀಡಿದೆ.
ಇಬ್ಬರಿಗೂ ಸೇರಿದ ಬರೋಬ್ಬರಿ ರೂ.11.14 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಈ ಮೂಲಕ, ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿದ್ದ ಆಟಗಾರರು ಇದೀಗ ಕಾನೂನಿನ ಅಂಗಳದಲ್ಲಿ ವಿಲವಿಲ ಒದ್ದಾಡುವಂತಾಗಿದೆ.
ಯಾರಿಗೆಷ್ಟು ನಷ್ಟ?: ಇಡಿ ಜಪ್ತಿ ಮಾಡಿರುವ ಒಟ್ಟು ರೂ.11.14 ಕೋಟಿ ಆಸ್ತಿಯಲ್ಲಿ, ಸುರೇಶ್ ರೈನಾ ಅವರಿಗೆ ಸೇರಿದ ರೂ.6.64 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಶಿಖರ್ ಧವನ್ ಹೆಸರಿನಲ್ಲಿದ್ದ ರೂ.4.5 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದೆ.
ನಿಷೇಧಿತ ‘1xBet’ ಎಂಬ ಬೆಟ್ಟಿಂಗ್ ವೇದಿಕೆಯ ಪ್ರಚಾರಕ್ಕಾಗಿ ಇವರಿಬ್ಬರೂ ವಿದೇಶಿ ಸಂಸ್ಥೆಗಳೊಂದಿಗೆ ಉದ್ದೇಶಪೂರ್ವಕವಾಗಿಯೇ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಇಡಿ ತನಿಖೆಯಲ್ಲಿ ಬಯಲಾಗಿದೆ. ಈ ಪ್ರಚಾರದ ಮೂಲಕ ಪಡೆದ ಹಣವನ್ನು “ಅಕ್ರಮ ಆದಾಯ” ಎಂದು ಪರಿಗಣಿಸಿ, ಇಡಿ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೃಹತ್ ಜಾಲದ ಭಾಗವಾದ ಕ್ರಿಕೆಟಿಗರು: ಈ ಪ್ರಕರಣ ಕೇವಲ ಇಬ್ಬರು ಕ್ರಿಕೆಟಿಗರಿಗೆ ಸೀಮಿತವಾಗಿಲ್ಲ, ಬದಲಿಗೆ ಇದೊಂದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಹಗರಣದ ಭಾಗವಾಗಿದೆ. ‘1xBet’ ಪ್ಲಾಟ್‌ಫಾರ್ಮ್, ಭಾರತದಲ್ಲಿ ಬೆಟ್ಟಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ವರ್ಗಾವಣೆ ಮಾಡಲು ಬರೋಬ್ಬರಿ 6 ಸಾವಿರಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳನ್ನು ಬಳಸುತ್ತಿತ್ತು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆ.
ವಿವಿಧ ಪಾವತಿ ಗೇಟ್‌ವೇಗಳ ಮೂಲಕ ಈ ಖಾತೆಗಳಿಗೆ ಹಣವನ್ನು ಜಮಾ ಮಾಡಿ, ಹಣದ ಮೂಲವನ್ನು ಮರೆಮಾಚುವ ವ್ಯವಸ್ಥಿತ ಸಂಚು ಇದಾಗಿತ್ತು. ಇಲ್ಲಿಯವರೆಗೆ, ಈ ಜಾಲದ ಮೂಲಕ ರೂ.1ಸಾವಿರ ಕೋಟಿಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆಯಾಗಿರುವುದನ್ನು ಇಡಿ ಪತ್ತೆಹಚ್ಚಿದೆ.
ಸಾರ್ವಜನಿಕರಿಗೆ ಇಡಿ ಖಡಕ್ ಎಚ್ಚರಿಕೆ: ಈ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಇಡಿ, ಈಗಾಗಲೇ ನಾಲ್ಕು ಪಾವತಿ ಗೇಟ್‌ವೇ ಕಂಪನಿಗಳ ಮೇಲೆ ದಾಳಿ ನಡೆಸಿ, 60ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಈ ಖಾತೆಗಳಿಂದ ರೂ.4 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಇಡಿ, ಯಾವುದೇ ರೀತಿಯ ಆನ್‌ಲೈನ್ ಬೆಟ್ಟಿಂಗ್, ಜೂಜು ಅಥವಾ ಅವುಗಳ ಪ್ರಚಾರದಲ್ಲಿ ಭಾಗಿಯಾಗದಂತೆ ಸೂಚಿಸಿದೆ. ಅಕ್ರಮ ಚಟುವಟಿಕೆಗಳು ಕೇವಲ ಆರ್ಥಿಕ ನಷ್ಟಕ್ಕೆ ಸೀಮಿತವಲ್ಲ, ಬದಲಿಗೆ ಇದು ದೇಶದ ಆರ್ಥಿಕತೆಗೆ ಹಾನಿ ಮಾಡುವ ಮಣಿ ಲ್ಯಾಂಡ್ರಿಂಗ್ ನಂತಹ ಗಂಭೀರ ಅಪರಾಧಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಇಲಾಖೆ ತಿಳಿಸಿದೆ.
ಯಾವುದೇ ಅನುಮಾನಾಸ್ಪದ ಆನ್‌ಲೈನ್ ಜಾಹೀರಾತುಗಳು ಅಥವಾ ಹಣಕಾಸು ವಹಿವಾಟುಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಅಥವಾ ಇಡಿ ಕಚೇರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
