Home ಸಂಪಾದಕೀಯ ಐಟಿಬಿಟಿಗೆ ಉತ್ತೇಜನ: ಆಂಧ್ರ ಕರ್ನಾಟಕ ಪೈಪೋಟಿ ಬೇಕಿಲ್ಲ

ಐಟಿಬಿಟಿಗೆ ಉತ್ತೇಜನ: ಆಂಧ್ರ ಕರ್ನಾಟಕ ಪೈಪೋಟಿ ಬೇಕಿಲ್ಲ

0
ಸಂಯುಕ್ತ ಕರ್ನಾಟಕ ಪತ್ರಿಕೆ ಶುಕ್ರವಾರದ ಸಂಪಾದಕೀಯ

ಲೋಪಗಳನ್ನು ಹುಡುಕಿ ತನ್ನತ್ತ ಉದ್ಯಮಿಗಳನ್ನು ಸೆಳೆಯಲು ಆಂಧ್ರ ಪ್ರಯತ್ನಿಸುವುದು ಹಾಗೂ ಅನಗತ್ಯ ಆರೋಪಗಳನ್ನು ಮಾಡುವುದು ತಕ್ಕುದಲ್ಲ.

ಕರ್ನಾಟಕ- ಆಂಧ್ರ ಮೊದಲಿನಿಂದಲೂ ಸಾಂಸ್ಕೃತಿಕವಾಗಿ ಮಧುರ ಬಾಂದವ್ಯ ಹೊಂದಿದೆ. ತೆಲುಗುದೇಶಂ ಆರಂಭಿಸಿದ ಎನ್‌ಟಿಆರ್ ತನ್ನ ಶಾಸಕರನ್ನು ರಕ್ಷಿಸಲು ಆಶ್ರಯ ಪಡೆದದ್ದು ಕರ್ನಾಟಕದಲ್ಲಿ ಎಂಬುದನ್ನು ಚಂದ್ರಬಾಬು ನಾಯ್ಡು ಮರೆಯಬಾರದು. ಈಗ ಐಟಿ ಬಿಟಿ ಬೆಳವಣಿಗೆಯಲ್ಲಿ ಪೈಪೋಟಿ ಏರ್ಪಟ್ಟಿರುವುದು ಉತ್ತಮ. ಆದರೆ ಅದು ರಾಜಕಾರಣಿಗಳ ನಡುವೆ ವಿವಾದಕ್ಕೆ ಕಾರಣವಾಗಬಾರದು.

ಬೆಂಗಳೂರು ನಗರದಿಂದ ರಫ್ತಾಗುವ ಒಟ್ಟು ಐಟಿ ಸಾಮಗ್ರಿ 64 ಬಿಲಿಯನ್ ಡಾಲರ್. ರಾಜ್ಯದ ಜಿಡಿಪಿಯಲ್ಲಿ ಶೇ.24 ಐಟಿ ಕೊಡುಗೆ. ದೇಶದ ಒಟ್ಟು ಸ್ಟಾರ್ಟ್ಅಫ್‌ಗಳಲ್ಲಿ ಶೇ. 40 ರಷ್ಟು ಬೆಂಗಳೂರು ನಗರದಲ್ಲೇ ಇವೆ. ಬೆಂಗಳೂರು ನಗರದಲ್ಲಿ 1.5 ಕೋಟಿ ಐಟಿಬಿಟಿ ಉದ್ಯೋಗ ಪಡೆದಿದ್ದಾರೆ. ಇನ್ನೂ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈಗ ಆಂಧ್ರದಲ್ಲಿ ಅಮರಾವತಿ ಮತ್ತು ವಿಶಾಖಪಟ್ಟಣದಲ್ಲಿ ಐಟಿ ಬಿಟಿ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ.

ಗೂಗಲ್ ಕಂಪನಿ ತನ್ನ ಎಐ ಜಾಲವನ್ನು ಆಂಧ್ರದಲ್ಲಿ ಆರಂಭಿಸಲಿದ್ದು 30 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ. ಬೆಂಗಳೂರಿನಲ್ಲಿ ವಾಹನ ಸಂಚಾರ ಅಧಿಕಗೊಂಡಿದ್ದು, ಸಾರಿಗೆ ಸಮಸ್ಯೆ ಮತ್ತು ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಐಟಿಬಿಟಿ ದಿಗ್ಗಜರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.

ಇದನ್ನೇ ನೆಪ ಮಾಡಿಕೊಂಡು ಕರ್ನಾಟಕದ ಮೇಲೆ ಗೂಬೆ ಕೂರಿಸಲು ಆಂಧ್ರ ಸಚಿವರು ಯತ್ನಿಸುವುದು ಸದಭಿರುಚಿಯಲ್ಲಿ. ಚಾರಿತ್ರಿಕವಾಗಿ ನೋಡಿದರೆ ಕರ್ನಾಟಕದಿಂದ ಆಂಧ್ರಕ್ಕೆ ಬಹಳ ಲಾಭವಾಗಿದೆ. ಕರ್ನಾಟಕದ ದೊರೆ ಕೃಷ್ಣದೇವರಾಯ ಆಂಧ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಮೈಸೂರಿನ ದಿವಾನ್ ವಿಶ್ವೇಶ್ವರಯ್ಯ ಹೈದರಾಬಾದ್ ಕುಡಿಯುವ ನೀರಿನ ಯೋಜನೆ ರೂಪಿಸಿದವರು.

ಅಬ್ದುಲ್ ಕಲಾಂ ಬೆಂಗಳೂರು ಮತ್ತು ಹೈದರಾಬಾದ್ ಎರಡರಲ್ಲೂ ಕೆಲಸ ಮಾಡಿದವರು. ಈಗಲೂ ಜನ ಆಂಧ್ರ ಮತ್ತು ಕರ್ನಾಟಕದಲ್ಲಿ ವ್ಯಾಪಾರ-ವಹಿವಾಟು ಮುಕ್ತವಾಗಿ ನಡೆಸುತ್ತಾರೆ. ಹೀಗಿರುವಾಗ ಲೋಪಗಳನ್ನು ಹುಡುಕಿ ತನ್ನತ್ತ ಉದ್ಯಮಿಗಳನ್ನು ಸೆಳೆಯಲು ಆಂಧ್ರ ಪ್ರಯತ್ನಿಸುವುದು ಹಾಗೂ ಅನಗತ್ಯ ಆರೋಪಗಳನ್ನು ಮಾಡುವುದು ತಕ್ಕುದಲ್ಲ.

ಇದು ರಾಜಕಾರಣಿಗಳ ಸಂಕುಚಿತ ಮನೋಭಾವವನ್ನು ತೋರಿಸುತ್ತದೆಯೇ ಹೊರತು ಎರಡು ರಾಜ್ಯಗಳ ನಡುವೆ ಬಾಂದವ್ಯ ಕದಡಲು ಕಾರಣವಾಗಬಾರದು. ನಿಸರ್ಗ ಕೊಡುಗೆಯನ್ನು ನೋಡಿದರೆ ಇದು ತಿಳಿಯುತ್ತದೆ. ಕರ್ನಾಟಕದ ಮೂಲಕ ಕೃಷ್ಣ, ತುಂಗಭದ್ರ ಆಂಧ್ರಕ್ಕೆ ಹರಿದುಹೋಗುತ್ತದೆ. ಇಸ್ರೋ ಸಂಸ್ಥೆ ಕೇರಳ, ಕರ್ನಾಟಕ ಮತ್ತು ಆಂಧ್ರದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಜನಸಾಮಾನ್ಯರಲ್ಲಿ ಒಂದು ರೀತಿಯ ಅನ್ಯೋನ್ಯತೆ ಇದೆ.

ಅದರಲ್ಲೂ ಕನ್ನಡ ಮತ್ತು ತೆಲುಗು ಭಾಷೆಗಳ ನಡುವೆ ಎಂದೂ ಬಿರುಕು ಮೂಡಿಲ್ಲ. ತ್ಯಾಗರಾಜರು ತೆಲುಗಿನಲ್ಲಿ ಬರೆದ ಹಾಡುಗಳು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜನಪ್ರಿಯ. ಜನರಲ್ಲಿರುವ ಮಧುರ ಬಾಂದವ್ಯವನ್ನು ಎರಡೂ ಸರ್ಕಾರಗಳು ಬಳಸಿಕೊಂಡು ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಜಂಟಿ ಪ್ರಯತ್ನ ನಡೆಸುವುದು ಸೂಕ್ತ.

ರಾಜಕೀಯ ಪಕ್ಷಗಳು ರಾಜ್ಯದ ಬೆಳವಣಿಗೆಯ ವಿಷಯ ಬಂದಾಗ ಎಲ್ಲವನ್ನೂ ಬದಿಗೆ ಸರಿಸಿ ಇತರರೊಂದಿಗೆ ಸಹಕರಿಸುವ ಮನೋಭಾವ ತೋರಬೇಕು. ಜನರಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಸಬಾರದು. ತಿರುಪತಿ ದೇವಾಲಯಕ್ಕೆ ಅತಿ ಹೆಚ್ಚಿನ ಭಕ್ತರು ಇರುವುದು ಕರ್ನಾಟಕದಲ್ಲಿ. ಅದೇರೀತಿ ಮಂತ್ರಾಲಯ ಇರುವುದು ಆಂಧ್ರದಲ್ಲಿ.

ಅಲ್ಲಿ ಇರುವವರೆಲ್ಲ ಕನ್ನಡಿಗರು. ಆಡಳಿತ ದೃಷ್ಟಿಯಿಂದ ರಾಜ್ಯಗಳನ್ನು ನಿರ್ಮಿಸಲಾಗಿದೆಯೇ ಜನರ ನಡುವೆ ಮಾನಸಿಕ ಗೋಡೆ ನಿರ್ಮಿಸಿಲ್ಲ. ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರ ನಡುವೆ ಬಿರುಕು ತರುವ ಕೆಲಸ ಮಾಡಬಾರದು. ಐಟಿಬಿಟಿಯಲ್ಲಿ ಎಲ್ಲ ರಾಜ್ಯಗಳ ಯುವ ಪೀಳಿಗೆ ಕೆಲಸ ಮಾಡುತ್ತಿವೆ.

ಅವರಿಗೆ ದೇಶ-ಭಾಷೆಗಳ ಸಂಕೋಲೆ ತೊಡಿಸುವುದು ಬೇಡ. ಅವರಿಗೆ ಇಡೀ ವಿಶ್ವವೇ ಒಂದು ಕುಟುಂಬ. ಇಲ್ಲದಿದ್ದಲ್ಲಿ ಗೂಗಲ್ ಸಂಸ್ಥೆ ವಿಶಾಖಪಟ್ಟಣ ಹುಡುಕಿಕೊಂಡು ಬರುತ್ತಿರಲಿಲ್ಲ. ವಿಪ್ರೋ, ಐಬಿಎಂ. ಟಿಸಿಎಸ್ ದಿಗ್ಗಜಗಳು ಬೆಂಗಳೂರಿಗೆ ಬರುತ್ತಿರಲಿಲ್ಲ. ವಿಪ್ರೋ ಅಜೀಂ ಪ್ರೇಂಜಿ ಈಗ ಕನ್ನಡಿಗರೇ ಆಗಿದ್ದಾರೆ. ವಿಜ್ಞಾನ-ತಂತ್ರಜ್ಞಾನ ಹೊಸ ತಲೆಮಾರಿನ ಜನರಿಗೆ ಹೊಸ ಆಶಾಕಿರಣ ಮೂಡಿಸಿದೆ.

ಎಲ್ಲಿ ಜಾಗತಿಕ ಮಟ್ಟದ ಮೂಲಭೂತ ಸವಲತ್ತುಗಳು ಇರುತ್ತದೋ ಅಲ್ಲಿ ಈ ಎಲ್ಲ ಕಂಪನಿಗಳು ವಲಸೆ ಹೋಗುವುದು ಸಹಜ. ರಾಜಕೀಯ ಸ್ಥಿತ್ಯಂತರದಿಂದ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವುದು ಸಹಜ. ಅದೇರೀತಿ ಕೇಂದ್ರ ಸರ್ಕಾರದಲ್ಲೂ ಬದಲಾವಣೆಗಳಾಗುತ್ತದೆ. ಆದರೆ ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಪ್ರಭಾವ ಬೀರಬಾರದು.

ಇಸ್ರೋ ಮತ್ತು ಭಾರತೀಯ ವಿಜ್ಞಾನ ಮಂದಿರ ಇಡೀ ವಿಶ್ವಕ್ಕೆ ಸೇರಿದ್ದು. ಅದಕ್ಕೆ ನಮ್ಮ ರಾಜಕೀಯ ಸಂಕೋಲೆಗಳನ್ನು ತೊಡಿಸುವುದು ಬೇಡ. ಅದೇರೀತಿ ಐಟಿಬಿಟಿ ಕಂಪನಿಗಳು ಎಲ್ಲಿದ್ದರೂ ಅದು ದೇಶದ ಆಸ್ತಿ. ಅದರಲ್ಲಿ ಕೆಲಸಮಾಡುವವರು ಒಂದು ರಾಜ್ಯಕ್ಕೆ ಸೇರಿದವರಲ್ಲ ಎಂಬುದನ್ನು ನೆನಪಿಡಬೇಕು. ಭಾಷಾ ದುರಭಿಮಾನ ಅಲ್ಲಿ ತೋರುವುದು ಸರಿಯಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version