Home ಕೃಷಿ/ವಾಣಿಜ್ಯ ಕರ್ಣಾಟಕ ಬ್ಯಾಂಕ್ ಸದೃಢ: ಪ್ರಧಾನ ಕಚೇರಿ ಸ್ಥಳಾಂತರ, ವಿಲೀನ ಇಲ್ಲ

ಕರ್ಣಾಟಕ ಬ್ಯಾಂಕ್ ಸದೃಢ: ಪ್ರಧಾನ ಕಚೇರಿ ಸ್ಥಳಾಂತರ, ವಿಲೀನ ಇಲ್ಲ

0

ಮಂಗಳೂರು: “ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಯಾವುದೇ ಪ್ರಸ್ತಾವನೆ ಇಲ್ಲ” ಎಂದು ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದ್ದಾರೆ.

ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ಣಾಟಕ ಬ್ಯಾಂಕ್ ಸ್ಥಳಾಂತರ ಆಗುವುದಿಲ್ಲ, ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಬ್ಯಾಂಕ್ ಸದೃಢವಾಗಿದೆ. ಅಲ್ಲದೆ ಬ್ಯಾಂಕ್ ವಿಲೀನ ಕುರಿತ ಸುದ್ದಿಗಳೂ ಸತ್ಯಕ್ಕೆ ದೂರವಾಗಿದೆ” ಎಂದು ಹೇಳಿದರು.

“ಹಿಂದಿನ ಸಿಇಒ ಮತ್ತು ಎಂಡಿ ಅವರ ಅಧಿಕಾರದ ಅವಧಿಯಲ್ಲಿ ಅವರ ಅನುಕೂಲ ಕಾರಣಕ್ಕೆ ಬೆಂಗಳೂರು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದ್ದಿರಬಹುದು. ಆದರೆ ಬ್ಯಾಂಕಿನ ಪ್ರಧಾನ ಕಚೇರಿ ಇಲ್ಲಿಯೇ ಇದೆ, ಇಲ್ಲಿಯೇ ಇರುತ್ತದೆ. ಕರಾವಳಿಯಲ್ಲಿ ಸ್ಥಾಪನೆಯಾದ ಬ್ಯಾಂಕ್‌ನ ಪ್ರಧಾನ ಕಚೇರಿ ಇಲ್ಲಿಯೇ ಇರಲಿದೆ” ಎಂದರು.

“ಕರ್ಣಾಟಕ ಬ್ಯಾಂಕ್ ಕೂಡ ಇತರೆ ಖಾಸಗಿ ಬ್ಯಾಂಕ್‌ಗಳ ಜೊತೆ ವಿಲೀನಗೊಳ್ಳುತ್ತದೆ ಎಂಬ ಸುದ್ದಿಗಳೂ ನಿಜವಲ್ಲ. ಈ ಬ್ಯಾಂಕಿಗೆ ಶೇ. 61ರಷ್ಟು ಸಾರ್ವಜನಿಕರ ಪ್ರಾತಿನಿಧ್ಯ ಇದೆ. ಹಾಗಾಗಿ ಇದನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಅಥವಾ ಪ್ರಯತ್ನಗಳು ಇಲ್ಲ ಎಂದು ಅವರು ನಿರಾಕರಿಸಿದರು. ಈ ಬ್ಯಾಂಕಿನ ಮೂಲ ಬಂಡವಾಳ ಸದೃಢವಾಗಿರುವುದರಿಂದ ವಹಿವಾಟು, ಲಾಭಾಂಶಗಳಿಗೇನೂ ತೊಂದರೆ ಆಗಿಲ್ಲ. ಗ್ರಾಹಕರು ಗಾಬರಿಪಡುವ ಅಗತ್ಯ ಇಲ್ಲ” ಎಂದು ಹೇಳಿದರು.

“ಬ್ಯಾಂಕ್‌ನಲ್ಲಿ ಎಂಡಿ, ಸಿಇಒ ಮುಂತಾದ ಆಡಳಿತಾತ್ಮಕ ಬದಲಾವಣೆಗಳು ಸಾಮಾನ್ಯ. ಅದರಂತೆ ಎಂಡಿ, ಸಿಇಒ ನೇಮಕ ನಡೆದಿದೆ. ಸೂಕ್ತ ಕಾಲಕ್ಕೆ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಹೊರಗಿನವರು ಅಥವಾ ಒಳಗಿನವರ ನೇಮಕ ಎಂಬ ತಾರತಮ್ಯ ಇಲ್ಲ, 1991ರಲ್ಲಿ ಯು.ಎನ್. ಭಟ್ ಎಂಬವರು ಕೇಂದ್ರ ಆಡಿಟ್ ವಿಭಾಗದಲ್ಲಿದ್ದವರು ಬ್ಯಾಂಕಿನ ಎಂಡಿ ಆಗಿದ್ದರು. ಬಳಿಕ ಹೆಚ್ಚಿನ ಸಂದರ್ಭ ಬ್ಯಾಂಕಿನಲ್ಲಿ ಇದ್ದವರನ್ನೇ ಎಂಡಿ ಆಗಿ ನೇಮಕ ಮಾಡಲಾಗಿತ್ತು. ಇದೆಲ್ಲವೂ ಆಡಳಿತ ಮಂಡಳಿ ತೀರ್ಮಾನ” ಎಂದರು.

“ಕರ್ಣಾಟಕ ಬ್ಯಾಂಕ್ 102ನೇ ವರ್ಷಕ್ಕೆ ಕಾಲಿಡುತ್ತಿದೆ. ಪ್ರಸಕ್ತ ದೇಶಾದ್ಯಂತ 950 ಶಾಖೆಗಳನ್ನು ಹೊಂದಿದ್ದು, 1.82 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಇದನ್ನು 2 ಲಕ್ಷ ಕೋಟಿ ರೂ. ವರೆಗೆ ವಹಿವಾಟು ತಲುಪಿಸುವ ಗುರಿ ಹೊಂದಲಾಗಿದೆ. ಇದಲ್ಲದೆ ಕೃಷಿ, ಗೃಹ ಮತ್ತಿತರ ವಲಯಗಳಿಗೂ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ” ಎಂದರು.

“ಆಡಳಿತದ ಜವಾಬ್ದಾರಿ ನನ್ನ ಮೇಲೆ ಇದೆ. ಇದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಹೊಣೆಗಾರಿಕೆ, ವಿಶ್ವಾಸ ಹೊಂದಿದ್ದೇನೆ. 1924ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬ್ಯಾಂಕಿನ ಅಸ್ಮಿತೆಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಾಗುವುದು” ಎಂದರು.

ರಾಘವೇಂದ್ರ ಎಸ್. ಭಟ್ ಪರಿಚಯ: ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ಬುಧವಾರ ಅಧಿಕಾರ ವಹಿಸಿಕೊಂಡಿರುವ ರಾಘವೇಂದ್ರ ಎಸ್. ಭಟ್ 1981ರಲ್ಲಿ ಕ್ಲರ್ಕ್ ಆಗಿ ಈ ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದು, 2019ರಲ್ಲಿ ಬ್ಯಾಂಕಿನ ಕರ್ತವ್ಯದಿಂದ ನಿವೃತ್ತರಾಗಿದ್ದರು. ಮಂಗಳೂರು, ಮುಂಬೈ ಮತ್ತು ದೆಹಲಿಗಳಲ್ಲಿ ಬ್ಯಾಂಕಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಕೆಲವು ಕಾಲ ಬಿಡುವಿನ ಬಳಿಕ ಈಗ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version