ಮೈಸೂರು: ಅಪಾಯದ ಅಂಚಿನಲ್ಲಿರುವ ಪೆಂಗ್ವಿನ್ ಪಕ್ಷಿಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ವಿಪರೀತ ಜಾಗತಿಕ ತಾಪಮಾನ, ಹವಾಮಾನದ ವೈಪರಿತ್ಯದ ಕಾರಣದಿಂದಾಗಿ ಪಕ್ಷಿಯ ಸಂತತಿ ಅವನತಿಯತ್ತ ತಲುಪಿದ್ದು, ಈ ಪಕ್ಷಿಯ ಸಂತಾನವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಜನವರಿ 20 ರಂದು ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರವು ದಕ್ಷಿಣ ಭಾರತದ ಮೊದಲ ಪೆಂಗ್ವಿನ್ ಪಾರ್ಕ್ ಕರ್ನಾಟಕದಲ್ಲಿ ನಿರ್ಮಿಸುವ ಯೋಜನೆ ಹೊಂದಿದ್ದು, ಪೆಂಗ್ವಿನ್ ಪಕ್ಷಿ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ.
ಮೈಸೂರು ಮೃಗಾಲಯಕ್ಕೆ ಹೊಂದಿಕೊಂಡಿರುವ ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರದ ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸುವ ಪ್ರಸ್ತಾವನೆಗೆ ಗುರುವಾರ ಅನುಮೋದನೆ ನೀಡಿದೆ. ತಜ್ಞರು ಅಭಿಪ್ರಾಯದ ಹಿನ್ನೆಲೆಯಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಗುರುವಾರ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೃಗಾಲಯಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸಿದರೆ, ಹೊಸ ವನ್ಯಜೀವಿಗಳು ಸೇರ್ಪಡೆಯಾದರೆ, ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆ ಇರುತ್ತದೆ ಎಂದಿದ್ದಾರೆ.
ಮೃಗಾಲಯ ಪ್ರವೇಶ ದರ ಹೆಚ್ಚಳ: ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶ ದರವನ್ನು ಶೇ.50ರಷ್ಟು ಹೆಚ್ಚಿಸಬೇಕೆಂಬ ಪ್ರಾಧಿಕಾರದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಅವರು, ಏಕಾಏಕಿ ಶೇ.50ರಷ್ಟು ಪ್ರವೇಶದರ ಹೆಚ್ಚಳ ಮಾಡುವುದು ಸರಿಯಲ್ಲ. ಶೇ.20ರಷ್ಟು ಮಾತ್ರವೇ ದರ ಹೆಚ್ಚಳ ಮಾಡಿ ಎಂದು ಪ್ರಸ್ತಾವನೆಗೆ ಅನುಮೋದನೆ ನೀಡಿದರು. ಯಾವುದೇ ಕಾರಣಕ್ಕೂ ಸಫಾರಿ ದರ ಹೆಚ್ಚಿಸದಂತೆಯೂ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಖರ್ಚು, ವೆಚ್ಚ ನಿರ್ವಹಿಸಲು ಶಕ್ತವಾಗುವುಂತೆ ಮೃಗಾಲಯಗಳು ಸಿದ್ದಗೊಳ್ಳಬೇಖಿದೆ, ಮೃಗಾಲಯಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸಿದರೆ, ಹೊಸ ವನ್ಯಜೀವಿಗಳು ಸೇರ್ಪಡೆಯಾದರೆ ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆ ಇರುತ್ತದೆ. ಈ ನಿಟ್ಟಿನಲ್ಲಿ ವಿದೇಶಿ ಮೃಗಾಲಯಗಳೊಂದಿಗೆ ವಿನಿಮಯ ಕಾರ್ಯಕ್ರಮಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಮುಂದಿನ 5 ವರ್ಷಗಳಲ್ಲಿ ಆಯಾ ಮೃಗಾಲಯಗಳು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿರ್ವಹಿಸಲು ಶಕ್ತವಾಗುವಂತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.
ಪಕ್ಷಿಲೋಕ ನಿರ್ಮಿಸುವ ವಿಸ್ತೃತ ಯೋಜನಾ ವರದಿ: ಗಣಿಬಾಧಿತ ಜಿಲ್ಲೆಗಳಲ್ಲಿರುವ ಮೃಗಾಲಯಗಳ ಅಭಿವೃದ್ಧಿಗೆ ಕೆಎಂಇಆರ್‌ಸಿ ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ದಾವಣಗೆರೆಯ ಮೃಗಾಲಯ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದರು. ಬೀದರ್‌ನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಕ್ಷಿಧಾಮ, ವಿದೇಶಿ ಹಕ್ಕಿ, ಪಕ್ಷಿಗಳ ವಿಶಿಷ್ಟವಾದ ಪಕ್ಷಿಲೋಕವನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಿದರು. ಜೊತೆಗೆ ಈ ಯೋಜನೆಗೆ 20 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಸೂಚಿಸಿದರು.