Home ನಮ್ಮ ಜಿಲ್ಲೆ RCB: ಆರ್‌ಸಿಬಿ ವಿಜಯೋತ್ಸದಲ್ಲಿ ಕಾಲ್ತುಳಿತ, ಸರ್ಕಾರದ ಕೈ ಸೇರಿದ ವರದಿ

RCB: ಆರ್‌ಸಿಬಿ ವಿಜಯೋತ್ಸದಲ್ಲಿ ಕಾಲ್ತುಳಿತ, ಸರ್ಕಾರದ ಕೈ ಸೇರಿದ ವರದಿ

0

ಬೆಂಗಳೂರು: ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಗೆಲುವಿನ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಗೆ ಯಾರು ಹೊಣೆ? ಎಂದು ಆರೋಪ ಪ್ರತ್ಯಾರೋಪಗಳು ನಡೆದಿದ್ದವು.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಕೆ ಮಾಡಲು ನಿವೃತ್ತ ನ್ಯಾಯಮೂರ್ತಿ ನ್ಯಾ. ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಏಕ ಸದಸ್ಯ ಆಯೋಗವು ಎರಡು ಸಂಪುಟಗಳಲ್ಲಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದೆ.

ಈ ಕುರಿತು ಮುಖ್ಯಮಂತ್ರಿಗಳ ಕಛೇರಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದೆ.
‘ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕು 11 ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅವಘಡದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಏಕ ಸದಸ್ಯ ಆಯೋಗವು ಇಂದು ಎರಡು ಸಂಪುಟಗಳಲ್ಲಿ ವರದಿ ಸಲ್ಲಿಸಿದೆ’ ಎಂದು ಪೋಸ್ಟ್‌ನಲ್ಲಿ ಹೇಳಿದೆ.

‘ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟ ನಿರ್ಧಾರ ಮಾಡಲಿದೆ. ವರದಿ ಈಗಷ್ಟೇ ಸಲ್ಲಿಕೆಯಾಗಿರುವುದರಿಂದ ನಾನು ವರದಿಯನ್ನು ಪೂರ್ಣವಾಗಿ ಓದಿಲ್ಲ. ಜುಲೈ 17ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಈ ವರದಿಯನ್ನು ಮಂಡಿಸಿ, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಈ ಕುರಿತು ಸಿಐಡಿ ತನಿಖೆಗೆ ಆದೇಶವನ್ನು ನೀಡಿದೆ. ಘಟನೆಯ ಬಳಿಕ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಕರ್ನಾಟಕದ ಪ್ರತಿಪಕ್ಷಗಳು ಈ ಕ್ರಮವನ್ನು ಖಂಡಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದವು.

ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬಳಿಕ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಲೆ ಕಾಲ್ತುಳಿತ ಸಂಭವಿಸಿತ್ತು. ಸಿಐಡಿ ಪ್ರಾಥಮಿಕ ವರದಿಯಲ್ಲಿ ಈ ಕಾಲ್ತುಳಿತ ಸಂಭವಿಸಲು ಆರ್‌ಸಿಬಿ ಆಡಳಿತ ಮಂಡಳಿ ಕೈಗೊಂಡ ತರಾತುರಿಯ ನಿರ್ಧಾರವೇ ಕಾರಣ ಎಂದು ಹೇಳಿತ್ತು.

ಈ ಘಟನೆ ಬಳಿಕ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಲಾಗಿತ್ತು. ಘಟನೆಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರ ಆಕ್ರೋಶದ ಬಳಿಕ ಕೆಎಸ್‌ಸಿಎ, ಡಿಎನ್ಎ ಇವೆಂಟ್ ಮ್ಯಾನೇಜ್‌ಮೆಂಟ್, ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಸರ್ಕಾರ ಬಳಿಕ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಿತ್ತು.

ಜೂನ್‌ 4ರಂದು ವಿಜಯೋಯ್ಸವ ಆಚರಣೆ ಬೇಡ ಎಂದು ಬೆಂಗಳೂರು ಪೊಲೀಸರು, ಕೆಎಸ್‌ಸಿಎ ಅಭಿಪ್ರಾಯಪಟ್ಟಿತ್ತು. ಆದರೆ ಆರ್‌ಸಿಬಿ ಆಡಳಿತ ಮಂಡಳಿ ಪಟ್ಟು ಹಿಡಿದು ವಿಜಯೋತ್ಸವ ಆಚರಣೆ ಮಾಡಿಸಿತ್ತು ಎಂಬುದು ಆರೋಪವಾಗಿದೆ.

ವಿಜಯೋಯ್ಸವ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಎಂದು ಆರ್‌ಸಿಬಿ ಆಡಳಿತ ಮಂಡಳಿ ಘೋಷಣೆ ಮಾಡಿದ್ದು, ಪೊಲೀಸರು ಸರಿಯಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿರಲಿಲ್ಲ, ವಿಧಾನಸೌಧ ಬಳಿಯ ಕಾರ್ಯಕ್ರಮದ ಬಗ್ಗೆ ಪೊಲೀಸರು ಹೆಚ್ಚಿನ ಗಮನ ಹರಿಸಿದ್ದು, ಎರಡು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದು ಘಟನೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಆಯೋಗ ಸರ್ಕಾರಕ್ಕೆ ಏನು ವರದಿ ನೀಡಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ವರದಿಯ ಶಿಫಾರಸುಗಳೇನು?, ಸರ್ಕಾರದ ನಿಲುವೇನು? ಎಂಬುದು ಸಚಿವ ಸಂಪುಟ ಸಭೆಯ ಬಳಿಕ ತಿಳಿಯಲಿದೆ.

Exit mobile version