‘ಬ್ಯಾಂಗಲ್ ಬಂಗಾರಿ’ ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ‘ಎಕ್ಕ’ ಸಿನಿಮಾ ಹೊಸ ಸಂಚಲನ ಉಂಟು ಮಾಡಿದೆ. ಜುಲೈ 18ರಂದು ಯುವ ರಾಜ್‌ಕುಮಾರ್ ಅಭಿನಯದ ಸಿನಿಮಾ ಬಿಡುಗಡೆಯಾಗಲಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ‘ಎಕ್ಕ’ ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಆಗಮಿಸುವಂತೆ ಸಿದ್ದರಾಮಯ್ಯರನ್ನು ಪ್ರೀತಿಯಿಂದ ಆಹ್ವಾನಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಪೋಸ್ಟ್ ಹಾಕಿದ್ದು,’ನಟ ಯುವ ರಾಜ್‌ಕುಮಾರ್ ಅವರು ಇಂದು ಕಾವೇರಿ ನಿವಾಸದಲ್ಲಿ ನನ್ನನ್ನು ಭೇಟಿಯಾಗಿ, ಜುಲೈ 18ರಂದು ತೆರೆ ಕಾಣಲಿರುವ ತಾವು ನಾಯಕನಟನಾಗಿ ಅಭಿನಯಿಸಿರುವ ಎಕ್ಕ ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು’ ಎಂದು ಹೇಳಿದ್ದಾರೆ.
‘ರಾಜ್‌ಕುಮಾರ್ ಅವರ ಕುಟುಂಬದ ಜೊತೆಗಿನ ನನ್ನ ಒಡನಾಟ ನಾಲ್ಕೈದು ದಶಕಗಳಷ್ಟು ಹಳೆಯದು. ರಾಘವೇಂದ್ರ ರಾಜ್‌ಕುಮಾರ್, ಶಿವಣ್ಣ ಮತ್ತು ಅಪ್ಪು ತಮ್ಮ ತಂದೆಯಂತೆ ಅಭಿನಯದಲ್ಲಿ ಮಾತ್ರವಲ್ಲ, ಸಾಮಾಜಿಕ ಕಳಕಳಿಯಲ್ಲೂ ಎತ್ತಿದಕೈ. ರಾಜಣ್ಣನ ಕುಟುಂಬದ ಮೂರನೇ ತಲೆಮಾರು ಅದೇ ಹಾದಿಯಲ್ಲಿ ಹೆಜ್ಜೆಹಾಕಲು ಆರಂಭಿಸಿದ್ದು ಕಂಡು ಖುಷಿಯಾಯಿತು. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಎಕ್ಕ’ ಚಿತ್ರದ ನಿರ್ದೇಶಕರು ರೋಹಿತ್ ಪದಕಿ. ರೋಮ್ಯಾಂಟಿಕ್, ಆಕ್ಷನ್ ಚಿತ್ರ ಇದಾಗಿದ್ದು, ಯುವ ರಾಜ್‌ಕುಮಾರ್ ನಾಯಕ. ಸಂಪದ ಮತ್ತು ಸಂಜನಾ ಆನಂದ್ ನಾಯಕಿಯರು. ಈಗಾಗಲೇ ಚಿತ್ರತಂಡ ಚಿತ್ರ ಬಿಡುಗಡೆಗೆ ಪೂರ್ವಭಾವಿಯಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದೆ.
ದಿ. ಪುನೀತ್ ರಾಜ್ ಕುಮಾರ್ ಅಭಿನಯದ ‘ಜಾಕಿ’ ಚಿತ್ರದ ದೃಶ್ಯವೊಂದನ್ನು ‘ಎಕ್ಕ’ ಸಿನಿಮಾ ನೆನಪಿಸುತ್ತಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ‘ಬ್ಯಾಂಗಲ್ ಬಂಗಾರಿ’ ಹಾಡು ವೈರಲ್ ಆದ ಬಳಿಕ ಚಿತ್ರದ ಟ್ರೈಲರ್ ಸಹ ಗಮನ ಸೆಳೆಯುತ್ತಿದೆ.
ಇದು ಯುವ ರಾಜ್‌ಕುಮಾರ್ ಅಭಿಯನದ 2ನೇ ಸಿನಿಮಾ. ಡಾ. ರಾಜ್ ಕುಟುಂಬದ ಕುಡಿಯ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಟ್ರೈಲರ್ ಮತ್ತು ಹಾಡಿನ ಮೂಲಕ ಈಗಾಗಲೇ ಗಮನ ಸೆಳೆದಿರುವ ಚಿತ್ರ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.
ಸಾಮಾನ್ಯ ಹುಡುಗನೊಬ್ಬ ಭೂಗತ ಲೋಕಕ್ಕೆ ಹೇಗೆ ಪ್ರವೇಶ ಮಾಡುತ್ತಾನೆ ಎಂಬುದು ಸಿನಿಮಾದ ಪ್ರಮುಖ ಅಂಶ ಎಂದು ಅಂದಾಜಿಸಲಾಗಿದೆ. ಜುಲೈ 18ರಂದು ಬೇರೆ ಚಿತ್ರಗಳು ಸಹ ತೆರೆ ಕಾಣಲಿದ್ದು, ಆದ್ದರಿಂದ ‘ಎಕ್ಕ’ ಚಿತ್ರತಂಡ ಭರ್ಜರಿಯಾಗಿಯೇ ಚಿತ್ರದ ಪ್ರಚಾರವನ್ನು ಮಾಡುತ್ತಿದೆ.
ಚರಣ್ ರಾಜ್ ಸಂಗೀತ ಸಂಯೋಜನೆಯ ಚಿತ್ರವಿದು. ‘ಎಕ್ಕ’ ಸಿನಿಮಾ ಪೋಸ್ಟರ್ ಬಿಡುಗಡೆ ದಿನವೇ ಭಾರೀ ಸದ್ದು ಮಾಡಿತ್ತು. ಬ್ಯಾಂಗಲ್ ಬಂಗಾರಿ ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಕಿಚ್ಚು ಹಚ್ಚಿದೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿರುವ ಸಿನಿಮಾ ಇದಾಗಿದೆ.