Home ಸಂಪಾದಕೀಯ ಸಂಪಾದಕೀಯ: ಉತ್ತರ ಕರ್ನಾಟಕದ ಭಾಗ್ಯ ಧಾರವಾಡದಲ್ಲಿ ಎಸ್‌ಇಝಡ್

ಸಂಪಾದಕೀಯ: ಉತ್ತರ ಕರ್ನಾಟಕದ ಭಾಗ್ಯ ಧಾರವಾಡದಲ್ಲಿ ಎಸ್‌ಇಝಡ್

0

ಧಾರವಾಡದ ಇಟ್ಟಿಗಟ್ಟಿ ಗ್ರಾಮದ ಬಳಿ 28 ಎಕರೆಗಳಲ್ಲಿ ಐಟಿ ಉದ್ಯಮಗಳಿಗೆ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದು ಉತ್ತರ ಕರ್ನಾಟಕದ ಯುವ ತಲೆಮಾರಿಗೆ ಭಾಗ್ಯದ ಬಾಗಿಲನ್ನು ತೆರೆಯಲಿದೆ. ವಿಶೇಷ ಆರ್ಥಿಕ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹರಿದು ಬರಲು ಎಲ್ಲ ರೀತಿಯ ತೆರಿಗೆ ವಿನಾಯಿತಿ ನೀಡುವುದರಿಂದ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗಲಿದೆ.

ಒಟ್ಟು 391 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ತಲೆಎತ್ತಲಿದ್ದು, ವಿಶೇಷ ಆರ್ಥಿಕ ವಲಯದಲ್ಲಿ ರಫ್ತಿಗೆ ಸಹಕಾರಿಯಾಗುವ ವಸ್ತುಗಳ ಉತ್ಪಾದನೆಗೆ ವಿಶೇಷ ಒತ್ತು ಸಿಗಲಿದೆ. ದೇವನಹಳ್ಳಿಯಲ್ಲಿ ಕೈಬಿಟ್ಟು ಹೋದ ಏರೋಸ್ಪೇಸ್ ಯೋಜನೆಯನ್ನೂ ರಾಜ್ಯ ಸರ್ಕಾರ ಅಲ್ಲಿಗೆ ವರ್ಗಾಯಿಸಬಹುದು. ಒಟ್ಟು 20 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ.

ಉತ್ತರ ಕರ್ನಾಟಕದಲ್ಲಿರುವ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳು ಇಲ್ಲಿ ಬರುವ ಕೈಗಾರಿಕೆಗಳಿಗೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಕೈಗೊಳ್ಳಬೇಕು. ಎಸ್‌ಇಝಡ್ ಸುತ್ತ ನಾಗರಿಕ ಸವಲತ್ತು ಹೆಚ್ಚಿಸುವ ಅಗತ್ಯ ಇದ್ದೇ ಇರುತ್ತದೆ. ಸ್ಥಳೀಯ ಉದ್ಯಮಶೀಲರು ಆ ಕೊರತೆಯನ್ನು ತುಂಬಬಹುದು. ಪ್ರತ್ಯೇಕ ಟೌನ್‌ಶಿಪ್ ಅಗತ್ಯ ಎನಿಸಿದರೆ ಅದಕ್ಕೆ ಈಗಲೇ ಯೋಜಿಸುವುದು ಸೂಕ್ತ.

ಭೂಮಿ, ವಿದ್ಯುತ್, ನೀರು ಒದಗಿಸುವುದು ಸ್ಥಳೀಯರ ಕರ್ತವ್ಯ. ಇಲ್ಲಿ ತಯಾರಾದ ವಸ್ತುಗಳನ್ನು ಸಾಗಿಸಲು ಸೂಕ್ತ ರಸ್ತೆ, ರೈಲು, ವಿಮಾನ ಸಂಪರ್ಕ ಮತ್ತು ಬಂದರು ಸವಲತ್ತು ಲಭಿಸುವುದಕ್ಕೆ ಈಗಿನಿಂದಲೇ ಯೋಜಿಸುವುದು ಅಗತ್ಯ. ಕೈಗಾರಿಕೆ ಬಂದ ಮೇಲೆ ನೋಡಿಕೊಳ್ಳೋಣ ಎಂಬ ಉದಾಸೀನ ಮತ್ತೊಂದು ಬೆಂಗಳೂರನ್ನು ಸೃಷ್ಟಿಸಿದಂತೆ ಆಗುತ್ತದೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಸುಂಕದಿಂದ ವಿನಾಯಿತಿ ಕೊಡುವ ಮೂಲ ಉದ್ದೇಶವೇ ಆ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿ ತ್ವರಿತಗತಿಯಲ್ಲಿ ಸಾಗಬೇಕು.

ಎಲೆಕ್ಟ್ರಾನಿಕ್ ಯಂತ್ರಗಳು, ಸೆಮಿಕಂಡಕ್ಟರ್, ಪಿಸಿಬಿ, ಸೆನ್ಸರ್, ಕನೆಕ್ಟರ್‌ಗಳ ಉತ್ಪಾದನೆ ಅಧಿಕಗೊಳ್ಳಲಿದೆ. ಈಗಾಗಲೇ ಧಾರವಾಡದಲ್ಲಿ ಇವಿ ವಾಹನಗಳ ಬಿಡಿಭಾಗಗಳ ತಯಾರಿಕೆ, ಟಾಟಾ ಮಾರ್ಕೊಪೊಲೊ ವಾಹನಗಳ ತಯಾರಿಕೆ ಘಟಕಗಳಿವೆ. ಈಗ ಧಾರವಾಡದಲ್ಲಿ ಜವಳಿ, ಆಹಾರ ಸಂಸ್ಕರಣ ಘಟಕ, ಎಂಜಿನಿಯರಿಂಗ್ ಬಿಡಿಭಾಗಗಳ ಉತ್ಪಾದನೆ ಘಟಕಗಳಿವೆ. ಸಮೀಪದಲ್ಲಿ ಬೆಳಗಾವಿ ಕೈಗಾರಿಕೆ ಪ್ರದೇಶವಿದೆ. ಗೋವಾ ಬಂದರಿಗೆ ರೈಲ್ವೆ ಸಂಪರ್ಕ ಇದೆ.

ಹೀಗಾಗಿ ಧಾರವಾಡದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಬೇಕಾದ ವಾತಾವರಣವಿದೆ. ಐಐಟಿ ಕೂಡ ಆರಂಭಗೊಂಡಿದೆ. ಧಾರವಾಡ ಮೊದಲು ಜ್ಞಾನ ಕೇಂದ್ರವಾಗಿತ್ತು. ಈಗ ಐಟಿ ನಗರವಾಗುವ ಕಡೆ ಹೆಜ್ಜೆ ಹಾಕುತ್ತಿದೆ. ಅಲ್ಲದೆ ಭಾಷೆಯ ಸಮಸ್ಯೆ ಏನೂ ಇಲ್ಲ. ಉತ್ತರ ಭಾರತದವರು ಇಲ್ಲಿ ಬಂದು ನೆಲೆಸುವುದು ಕಷ್ಟವಾಗುವುದಿಲ್ಲ. ಜೋಳದ ತವರೂರಿನಲ್ಲಿ ಗೋಧಿಗೂ ಕೊರತೆ ಏನೂ ಇಲ್ಲ. ಧಾರವಾಡದ ಜನ ಆತಿಥ್ಯದಲ್ಲಿ ಎತ್ತಿದಕೈ. ಅವರು ಹೊರಗಿನವರನ್ನು ಎಂದೂ ದೂರ ಮಾಡುವುದಿಲ್ಲ. ಹೀಗಾಗಿ ಐಟಿ ಕಂಪನಿಗಳು ಬೆಳೆಯಲು ಉತ್ತಮ ಅವಕಾಶಗಳಿವೆ.

ಧಾರವಾಡಕ್ಕೆ ಮಾದರಿಯಾಗಿ ಚೀನಾ, ದುಬೈ, ಗುಜರಾತ್, ಆಂಧ್ರದಲ್ಲಿರುವ ಎಸ್‌ಇಝಡ್ ವಲಯಗಳಿವೆ. ಚೀನಾ 1980ರಲ್ಲೇ ವಿಶೇಷ ಆರ್ಥಿಕ ವಲಯ ಸ್ಥಾಪಿಸಿತು. ಗುಜರಾತ್ ಮುಂದ್ರಾದಲ್ಲಿ ವಿದೇಶಿ ಕಂಪನಿಗಳು ತಲೆ ಎತ್ತಿವೆ. ದುಬೈನಲ್ಲಿ ಜೆಬೆಲ್ ಅಲಿ ಬಂದರು ಪ್ರದೇಶದಲ್ಲಿ 100 ದೇಶಗಳ 8 ಸಾವಿರ ಕಂಪನಿಗಳಿವೆ. ಆಂಧ್ರದ ಶ್ರೀಸಿಟಿಯಲ್ಲಿ ಆರ್ಥಿಕ ವಲಯ ತಲೆಎತ್ತುತ್ತಿದೆ.

ಪ್ರತಿಯೊಂದು ವಿಶೇಷ ಆರ್ಥಿಕ ವಲಯಕ್ಕೆ ನಿರ್ದಿಷ್ಟ ಗುರಿ ಇರಬೇಕು. ಅದನ್ನು ಸಾಧಿಸಲು ಕಟಿಬದ್ಧವಾದ ಆಡಳಿತ ಸಂಸ್ಥೆ ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಸ್ತಕ್ಷೇಪ ಇರಬಾರದು. 10 ವರ್ಷಗಳಲ್ಲಿ ಇದು ಸ್ವಯಂ ಪರಿಪೂರ್ಣವಾಗಬೇಕು. ಆ ರೀತಿ ಯೋಜಿಸುವುದು ಅಗತ್ಯ. ಖಾಸಗಿ ಕಂಪನಿಗಳಿಗೆ ಮುಕ್ತ ಅವಕಾಶ ನೀಡುವುದೇ ಎಸ್‌ಇಝಡ್ ಮೂಲ ಉದ್ದೇಶ.

ಅದರಲ್ಲಿ ಸ್ಥಳೀಯರು ಮೂಗು ತೂರಿಸಲು ಅವಕಾಶ ನೀಡಬಾರದು. ಉತ್ತರ ಕರ್ನಾಟಕದ ಯುವಕ-ಯುವತಿಯರು ಎಂಜಿನಿಯರಿಂಗ್ ಪದವಿ ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರಿಗೆ ವಲಸೆ ಬರಬೇಕಿತ್ತು. ಕೆಲವರು ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದರೆ ಕೆಲಸ ಬೇಗನೇ ಸಿಗುತ್ತದೆ ಎಂದು ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದರು. ಇದಕ್ಕಾಗಿ ಅವರು ಸಾವಿರಾರು ರೂ. ವೆಚ್ಚ ಮಾಡಬೇಕಿತ್ತು.

ಈಗ ಧಾರವಾಡದಲ್ಲೇ ಕೆಲಸ ಸಿಗುತ್ತೆ ಎಂದಾದರೆ ಮನೆಯಲ್ಲೇ ಬಿಸಿ ಬಿಸಿ ರೊಟ್ಟಿ ತಿಂದು ಹಾಯಾಗಿ ಓದಿ ಅಲ್ಲೆ ಕೆಲಸ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರದ ಇಂದಿನ ನಿರ್ಧಾರ ಉತ್ತರ ಕರ್ನಾಟಕದ ಸಾವಿರಾರು ಯುವಕ-ಯುವತಿಯರ ಭಾಗ್ಯದ ಬಾಗಿಲು ತೆರೆಯಲಿದೆ. ಮುಂದಿನ ತಲೆಮಾರು ಉತ್ತಮ ದಿನಗಳನ್ನು ಕಾಣುವ ಕಾಲ ಬರಲಿದೆ. ಕರ್ನಾಟಕ ಏಕೀಕರಣದ ಕನಸು ಈಗ ನನಸಾಗುವ ಕಾಲ ಬರುತ್ತಿದೆ. ಹಿರಿಯರ ತ್ಯಾಗಬಲಿದಾನ ಈಗ ಸಾರ್ಥಕ ವಾಗುವ ಕಾಲ ಬರುತ್ತಿದೆ ಎಂಬುದೇ ಸಂತಸದ ಸಂಗತಿ.

NO COMMENTS

LEAVE A REPLY

Please enter your comment!
Please enter your name here

Exit mobile version