Home ಸುದ್ದಿ ದೇಶ ವೋಟರ್ ಲಿಸ್ಟ್‌ನಿಂದ ಕೈಬಿಟ್ಟ ಹೆಸರುಗಳ ಪ್ರಕಟಣೆಗೆ ಸುಪ್ರೀಂ ಕೋರ್ಟ್ ಸೂಚನೆ

ವೋಟರ್ ಲಿಸ್ಟ್‌ನಿಂದ ಕೈಬಿಟ್ಟ ಹೆಸರುಗಳ ಪ್ರಕಟಣೆಗೆ ಸುಪ್ರೀಂ ಕೋರ್ಟ್ ಸೂಚನೆ

0

ನವದೆಹಲಿ: ಬಿಹಾರ ಮತ ಪರಿಷ್ಕರಣೆಯಲ್ಲಿ ಕೈ ಬಿಟ್ಟಿರುವ 65 ಲಕ್ಷ ಜನರ ಹೆಸರುಗಳ ವಿವರಗಳನ್ನು ಕಾರಣ ಸಹಿತವಾಗಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಗುರುವಾರ ನಿರ್ದೇಶನ ನೀಡಿದೆ. ಮತದಾರರ ಗುರುತಿಗೆ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳನ್ನೂ ಆಧಾರವನ್ನಾಗಿ ಸ್ವೀಕರಿಸುವಂತೆಯೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯ್‌ಮಲ್ಯ ಬಗ್ಚಿ ಅವರ ಪೀಠ ನಿರ್ದೇಶಿಸಿದೆ. ಜನ ತಮ್ಮ ಹೆಸರಿನ ಬಗ್ಗೆ ಸ್ಪಷ್ಟೀಕರಣ ಕೇಳಲು ಅಥವಾ ತಿದ್ದುಪಡಿ ಮಾಡಲು ಹೆಚ್ಚಿನ ಪಾರದರ್ಶಕತೆ ಅಗತ್ಯ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ ಎನ್ನುವ ಪ್ರತಿಪಕ್ಷಗಳ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ಎಸ್‌ಐಆರ್ ವಿರುದ್ಧ ಇಂಡಿಯಾ ಬ್ಲಾಕ್ ಪಕ್ಷಗಳಾದ ಆರ್‌ಜೆಡಿ, ಟಿಎಂಸ, ಕಾಂಗ್ರೆಸ್, ಎನ್‌ಸಿಪಿ(ಎಸ್‌ಪಿ), ಸಿಪಿಐ, ಎಸ್ಪಿ, ಶಿವಸೇನಾ(ಯುಬಿಟಿ), ಜೆಎಂಎಂ, ಸಿಪಿಐ
(ಎಂಎಲ್), ಸ್ವಯಂಸೇವಾ ಸಂಘಟನೆಗಳಾದ ಪಿಯುಸಿಎಲ್, ಎಡಿಆರ್, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ಅರ್ಜಿ ಸಲ್ಲಿಸಿದ್ದರು.

ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಿದ್ದಲ್ಲಿ ಕೋರ್ಟ್ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಜುಲೈ 29ರಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಈಗಾಗಲೇ ಕರಡು ಪ್ರತಿ ಆಗಸ್ಟ್ 1ರಂದು ಪ್ರಕಟವಾಗಿದ್ದು, ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.

ಸುಪ್ರೀಂ ಕೋರ್ಟ್ ನಿರ್ದೇಶನಗಳು

  1. 2025ರ ಪಟ್ಟಿಯಲ್ಲಿ ಹೆಸರು ಇದ್ದರೂ ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗದ 65 ಲಕ್ಷ ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ಜಾಲತಾಣಗಳಲ್ಲಿ ಪ್ರದರ್ಶಿಸಬೇಕು. ಮಾಹಿತಿಯು ಬೂತ್ ಮಟ್ಟದ್ದಾಗಿರಬೇಕು. ವೋಟರ್ ಐಡಿ ಸಂಖ್ಯೆ ನಮೂದಿಸಿ ಅದರ ವಿವರಗಳನ್ನು ಪಡೆಯಲು ಸಾಧ್ಯವಾಗುವಂತಿರಬೇಕು. ಪಟ್ಟಿಗಳನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ಜಾಲತಾಣದಲ್ಲಿ ಪ್ರಕಟಿಸಬೇಕು. ಕಾರಣಗಳನ್ನು ಕೂಡ ಬಹಿರಂಗಪಡಿಸಬೇಕು.
  2. ಪಟ್ಟಿ ಪ್ರಕಟಿಸುವ ಬಗ್ಗೆ ಪತ್ರಿಕೆ, ಇ-ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ಜಿಲ್ಲಾ ಚುನಾವಣಾ ಅಧಿಕಾರಿಗೆ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಇದ್ದರೆ, ಅವರು ಅಲ್ಲಿಯೂ ಪ್ರದರ್ಶಿಸಬೇಕು.
  3. ಬಾಧಿತ ವ್ಯಕ್ತಿ ಆಧಾರ್ ಕಾರ್ಡ್ ಪ್ರತಿಯೊಂದಿಗೆ ತಮ್ಮ ವಾದ ಮಂಡಿಸಬಹುದು ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು.

NO COMMENTS

LEAVE A REPLY

Please enter your comment!
Please enter your name here

Exit mobile version