Home ಸಂಪಾದಕೀಯ ಸಂಪಾದಕೀಯ: ಪ್ರತ್ಯೇಕ ರಾಜ್ಯದ ಕೂಗು ದೂರದೃಷ್ಟಿ ಇಲ್ಲದ ನಡೆ

ಸಂಪಾದಕೀಯ: ಪ್ರತ್ಯೇಕ ರಾಜ್ಯದ ಕೂಗು ದೂರದೃಷ್ಟಿ ಇಲ್ಲದ ನಡೆ

0

ಕರ್ನಾಟಕ ಉದಯವಾಗಿ 79 ವರ್ಷಗಳು ಕಳೆದಿದೆ. ರಾಜ್ಯದ ಎಲ್ಲ ಭಾಗ ಸರ್ವತೋಮುಖ ಬೆಳವಣಿಗೆ ಕಂಡಿದೆ ಎಂದು ಯಾರೂ ಹೇಳುವುದಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಭಾಗ ಇನ್ನೂ ಅಭಿವೃದ್ಧಿ ಕಾಣಬೇಕೆಂದು ಹಳೆಯ ಮೈಸೂರು ಭಾಗದವರೇ ಒಪ್ಪಿಕೊಳ್ಳುತ್ತಾರೆ. ಹೀಗಿರುವಾಗ ಪ್ರತ್ಯೇಕತೆಯ ಅಪಸ್ವರ ಸರಿಯಲ್ಲ. ಎಲ್ಲರೂ ಸೇರಿ ಬೆಳವಣಿಗೆಗೆ ಕೈಜೋಡಿಸಬೇಕು. ಪ್ರತ್ಯೇಕತೆ ಕೂಗಿನಿಂದ ಪ್ರಯೋಜನವೇನೂ ಆಗುವುದಿಲ್ಲ ಎಂಬುದು ಕೂಗೆಬ್ಬಿಸಿದವರಿಗೇ ಗೊತ್ತಿದೆ. ಹಿಂದೆ ಆಂಧ್ರ ಹೇಗಿತ್ತು. ಈಗ ವಿಭಜನೆಯ ನಂತರ ಏನಾಗಿದೆ ಎಂಬುದನ್ನು ಅವಲೋಕಿಸುವುದು ಒಳಿತು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಹಲವರು ವಿರೋಧಿಸಿದ್ದು ನಿಜ. ಆದರೆ ಒಮ್ಮೆ ರಚನೆಯಾದ ಮೇಲೆ ಎಲ್ಲರೂ ಒಮ್ಮನಸ್ಸಿನಿಂದ ಕೆಲಸ ಮಾಡಲು ಆರಂಭಿಸಿಯಾಗಿದೆ.

ಎರಡು ತಲೆಮಾರು ಕಳೆದಿದೆ. ಈಗ ಮನೆಯನ್ನು ಒಡೆಯುವ ಮಾತು ಬರಬಾರದು. ಉತ್ತರ ಕರ್ನಾಟಕದ ಬೆಳವಣಿಗೆ ನಿರೀಕ್ಷಿಸಿದ ಮಟ್ಟದಲ್ಲಿ ಆಗಿಲ್ಲ ಎಂಬುದು ನಿಜ. ಅದಕ್ಕೆ ಕಾರಣವೇನು ಎಂಬುದನ್ನು ಅಲ್ಲಿಯ ಶಾಸಕರೇ ಒಂದೆಡೆ ಕುಳಿತು ಆಲೋಚಿಸುವುದು ಒಳಿತು. ಅಲ್ಲಿಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಇದು ಸಕಾಲ. ಡಾ. ನಂಜುಂಡಪ್ಪ ಸಮಿತಿ ವರದಿಯನ್ನು ಸರ್ಕಾರ ಜಾರಿಗೆ ತಂದಿದೆ. ಧಾರವಾಡ ಮತ್ತು ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಕೆಲಸ ಮಾಡುತ್ತಿದೆ. ಬೆಳಗಾವಿಯಲ್ಲಿ ಪ್ರತಿ ವರ್ಷ ವಿಧಾನಸಭೆ ಅಧಿವೇಶನ ನಡೆಯುವುದಲ್ಲದೆ ಸರ್ಕಾರದ ಚಟುವಟಿಕೆಗಳು ಬೆಳಗಾವಿಯಲ್ಲಿ ಅಧಿಕಗೊಂಡಿದೆ. ಇದಕ್ಕೆ ಎಂಇಎಸ್ ಪುಂಡಾಟ ಇಳಿಮುಖಗೊಂಡಿರುವುದೇ ಸಾಕ್ಷಿ.

ಮಹಾಜನ್ ವರದಿ ಜಾರಿಗೆ ಬರಲು ದಾತಾರ್ ಸಲ್ಲಿಸಿದ ಸೇವೆಯನ್ನು ಮರೆಯುವಂತಿಲ್ಲ. ಈಗ ಬೆಂಗಳೂರು – ಬೆಳಗಾವಿ ನಡುವೆ ವಂದೇ ಭಾರತ ರೈಲು ಪ್ರಯಾಣದ ಕಾಲವನ್ನು ಕೇವಲ 6 ಗಂಟೆಗಳಿಗೆ ಇಳಿಸಿದೆ. ವೈಮಾನಿಕ ಸಂಪರ್ಕ ಅಧಿಕಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಜನಸಾಮಾನ್ಯರ ನಡುವೆ ಸುಲಭದ ಸಂಪರ್ಕ ಏರ್ಪಡಿಸಿದೆ. ಇದೆಲ್ಲವೂ ಬೆಳವಣಿಗೆಯ ದ್ಯೋತಕ. ಇನ್ನೂ ರಾಜಕೀಯ ಅಧಿಕಾರ ಹಂಚಿಕೆ ಆಯಾ ರಾಜಕೀಯ ಪಕ್ಷಗಳಿಗೆ ಸೇರಿದ್ದು. ಬಹುಮತದ ಸರ್ಕಾರ ನಡೆಯವುದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆ ನೋಡಿದರೆ ಉತ್ತರ ಕರ್ನಾಟಕದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಮನಸ್ಸು ಮಾಡಿ ಒಂದುಗೂಡಿದರೆ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಉತ್ತರ ಕರ್ನಾಟಕದ ಕೈಯಲ್ಲೇ ಆಡಳಿತ ಇರುವಂತೆ ನೋಡಿಕೊಳ್ಳಬಹುದು. ಇದಕ್ಕೆ ಯಾರ ಅಡ್ಡಿಯೂ ಇಲ್ಲ.

ಆದರೂ ಪ್ರತ್ಯೇಕ ರಾಜ್ಯ ಬೇಕು ಎನ್ನುವವರು ಮೊದಲು ಆಲೂರುವೆಂಕಟರಾಯರು, ಹುಯಿಲಗೋಳ ನಾರಾಯಣ ರಾಯರು, ಗುದ್ಲಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬ್ಳಿ, ಅನ್ನದಾನಯ್ಯ ದೊಡ್ಡಮೇಟಿ, ಅಣ್ಣಾರಾವ ಗಣಮುಖಿ, ಬಾಳೆಕುಂದ್ರಿ ಮುಂತಾದವರ ಹೆಸರನ್ನು ಒಮ್ಮೆ ನೆನಪಿಸಿ ಕೊಳ್ಳುವುದು ಒಳ್ಳೆಯದು. ಕರ್ನಾಟಕದ ಏಕೀಕರಣದ ಹಿಂದೆ ಅವರು ಬೆವರಹನಿ ಇದೆ. ಆರ್. ಆರ್.ದಿವಾಕರ ಪತ್ರಿಕೋದ್ಯಮದ ಮೂಲಕ ಸಂಯುಕ್ತ ಕರ್ನಾಟಕ ರಚನೆಗೆ ಕಾರಣರಾದವರು. ಈಗಿನ ಕಾಲಕ್ಕೆ ಬಂದರೆ ಐಟಿ ದಿಗ್ಗಜ ನಾರಾಯಣಮೂರ್ತಿ ಅವರ ಕೈಜೋಡಿಸಿರುವವರು ಸುಧಾಮೂರ್ತಿ ಉತ್ತರ ಕರ್ನಾಟಕದ ಪ್ರತಿನಿಧಿ. ಇದಕ್ಕಿಂತ ಏಕೀಕರಣಕ್ಕೆ ಸಾಕ್ಷಿ ಬೇಕಿಲ್ಲ

ವರುಣನೇ ನಮ್ಮ ಅತ್ಯಂತ ದೊಡ್ಡ ಉದ್ಯೋಗದಾತ. ಅವನ ಮುಂದೆ ಯಾವ ಉದ್ಯಮಿಯೂ ಇಲ್ಲ. ಈ ಬಾರಿ ಉತ್ತಮ ಮಳೆಯಾಗಿದೆ. ಕೆರೆಕಟ್ಟೆಗಳು ತುಂಬಿವೆ. ಜಲಾಶಯಗಳಲ್ಲಿ ಜಲರಾಶಿ ಕಣ್ಣುತುಂಬಿ ನಿಂತಿವೆ. ದೇಶದ ಮೊದಲ 5 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ದೇಶದ ಒಟ್ಟು ಸಾಫ್ಟವೇರ್ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. 38 ಒಟ್ಟು 21 ಲಕ್ಷ ಜನ ಈ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. 16 ಶತಕೋಟಿ ಡಾಲರ್ ಬಂಡವಾಳ ರೂಪದಲ್ಲಿ ಕರ್ನಾಟಕಕ್ಕೆ ಬಂದಿದೆ. ರಾಜ್ಯದಲ್ಲಿ ಒಟ್ಟು 8.5 ಲಕ್ಷ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಕೌಟುಂಬಿಕ ವಾತಾವರಣವಿದೆ. ಹೊರಗಿನವರು ಯಾವುದೇ ಸಮಸ್ಯೆ ಇಲ್ಲದೆ ನೆಮ್ಮದಿಯಾಗಿ ಬದುಕಬಹುದು.

ಈ ವಾತಾವರಣ ಬೇರೆ ರಾಜ್ಯಗಳಲ್ಲಿ ಇಲ್ಲ ಎಂಬುದು ಸ್ಪಷ್ಟ. ಹೊರಗಿನಿಂದ ಬರುವ ಜನ ಮೊದಲು ಹುಡುಕುವುದು ಈ ಕೌಟುಂಬಿಕ ವಾತಾವರಣವನ್ನೇ ಎಂಬುದನ್ನು ಮರೆಯುವ ಹಾಗಿಲ್ಲ. ನಮಗೆ ನಿಸರ್ಗವೂ ನಮಗೆ ಸಹಕಾರಿಯಾಗಿದೆ. ಇಲ್ಲಿಯ ತಂಪಾದ ಹವಾಗುಣ ಉತ್ತರ ಭಾರತದ ಜನರನ್ನು ಕೈಬೀಸಿ ಕರೆಯುತ್ತಿದೆ. ನಾವು ಹೊರಗಿನಿಂದ ಯಾರೇ ಬರಲಿ ಇವನಾರವ, ಇವನಾರವ ಎಂದು ಕೇಳುವುದಿಲ್ಲ. ಇವ ನಮ್ಮವ ಎನ್ನುತ್ತೇವೆ. ಅದರಿಂದಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದು ಬರಲು ಕಾರಣವಾಗಿದೆ. ನಮ್ಮ ರಾಜ್ಯ ಆರೋಗ್ಯ ಮತ್ತು ಕೈಗಾರಿಕೆ ರಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಅಗತ್ಯವಿದೆ. ಹೀಗಿರುವಾಗ ಪ್ರತ್ಯೇಕ ರಾಜ್ಯದ ಕೂಗು ಕೈಬಿಡುವುದು ಒಳಿತು.

NO COMMENTS

LEAVE A REPLY

Please enter your comment!
Please enter your name here

Exit mobile version