Home ಸುದ್ದಿ ದೇಶ ಕ್ರೆಡಿಟ್ ತೆಗೆದುಕೊಳ್ಳುವುದು ನಾಯಕತ್ವವಲ್ಲ: ಪ್ರಿಯಾಂಕಾ ಗಾಂಧಿ

ಕ್ರೆಡಿಟ್ ತೆಗೆದುಕೊಳ್ಳುವುದು ನಾಯಕತ್ವವಲ್ಲ: ಪ್ರಿಯಾಂಕಾ ಗಾಂಧಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರದ ವಿರುದ್ಧ ವಯನಾಡು ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿ, ಕೇವಲ ಕ್ರೆಡಿಟ್ ತೆಗೆದುಕೊಳ್ಳುವುದು ಮಾತ್ರ ನಾಯಕತ್ವವಲ್ಲ, ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಆಗಿದೆ ಎಂದು ಹೇಳಿದರು.

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಹೋರಾಡಿದ್ದು ನಮ್ಮ ಭಾರತೀಯ ಸೇನೆ. ಆದರೆ ಅದರ ಕ್ರೆಡಿಟ್‌ ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಭಾರತದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಯುದ್ಧವನ್ನು ಹಠಾತ್ತನೆ ನಿಲ್ಲಿಸಲಾಗಿದೆ. ಅಲ್ಲದೇ ಈ ಕದನ ವಿರಾಮದ ನಿರ್ಧಾರವನ್ನು ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ. ಇದು ನಮ್ಮ ಪ್ರಧಾನ ಮಂತ್ರಿಯ ಬೇಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಪ್ರವಾಸಕ್ಕೆ ಬಂದಿರುವ ಜನರು ಬೈಸರನ್ ಕಣಿವೆಗೆ ಹೋಗುತ್ತಾರೆ ಎಂದು ಸರಕಾರಕ್ಕೆ ಗೊತ್ತಿರಲಿಲ್ಲವೇ? ಅಲ್ಲದೇ ಪ್ರವಾಸಿಗರು ಬರುವ ಸ್ಥಳದಲ್ಲಿ ಭದ್ರತೆ ಇರಬೇಕಲ್ಲವೇ? ಅದನ್ನೆಲ್ಲವನ್ನೂ ಮತ್ತೇಕೆ ಕೈ ಬಿಡಲಾಯಿತು ಎಂದು ಅವರು ಪ್ರಶ್ನಿಸಿದರು.

ಇಂತಹ ದಾಳಿಯ ಬಗ್ಗೆ ಕೊಂಚ ಸುಳಿವು ಸಿಗಲಿಲ್ಲವೇ? ಭಯೋತ್ಪಾದಕರು ದಾಳಿ ನಡೆಸಲಿದ್ದಾರೆ. ಈ ಕುರಿತಂತೆ ವಿರೋಧಿ ಪಾಕಿಸ್ತಾನ ಸಂಚು ರೂಪಿಸುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಸರಕಾರಿ ಸಂಸ್ಥಗೆ ಮಾಹಿತಿ ಬರಲಿಲ್ಲವೇ. ಇದು ನಮ್ಮ ಸರ್ಕಾರ, ಗುಪ್ತಚರ ಸಂಸ್ಥೆಗಳ ದೊಡ್ಡ ವೈಫಲ್ಯ ಎಂದು ಆರೋಪಿಸಿದರು.

ಮುಂಬೈ ದಾಳಿ ನಡೆದಾಗ ಮನಮೋಹನ್‌ ಸಿಂಗ್‌ ಸರಕಾರ ಏನೂ ಮಾಡಲಿಲ್ಲ ಎಂದು ಹೇಳುತ್ತಿದ್ದೀರಿ. ಆದರೆ, ಆ ದಾಳಿ ನಡೆಯುತ್ತಿದ್ದಾಗಲೇ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ಬದುಕಿದ್ದ ಓರ್ವನನ್ನು ಕೂಡ ಗಲ್ಲಿಗೇರಿಸಲಾಯಿತು ಎಂದರು.

ಆ ದಾಳಿ ನಡೆದ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೂಡ ರಾಜೀನಾಮೆ ನೀಡಿದ್ದರು. ಆದರೆ ನಿಮ್ಮ ಅಧಿಕಾರ ಅವಧಿಯಲ್ಲಿ ನಡೆದ ಘಟನೆಗಳಲ್ಲಿ ಏನು ಮಾಡಿದ್ದೀರಿ? ಇದುವರೆಗೂ ಯಾರೂ ಕೂಡ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಿಲ್ಲ ಎಂದರು.

ಉರಿ-ಪುಲ್ವಾಮಾ ದಾಳಿ ವೇಳೆ ಗೃಹ ಸಚಿವರಾಗಿದ್ದ ರಾಜನಾಥ್‌ ಸಿಂಗ್‌, ಈಗ ರಕ್ಷಣಾ ಸಚಿವರಾಗಿದ್ದಾರೆ. ಈಗ ಗೃಹ ಸಚಿವರಾದ ಅಮಿತ್‌ ಶಾ ಅಧಿಕಾರವಧಿಯಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಗಲಭೆಗಳು ನಡೆಯುತ್ತಿವೆ. ಪಹಲ್ಗಾಮ್‌ ದಾಳಿಯೂ ಕೂಡ ನಡೆದಿದೆ. ಆದರೆ ರಾಜೀನಾಮೆ ಕೊಡದೇ ಈಗಲೂ ಅವರು ಗೃಹಸಚಿವರಾಗಿಯೇ ಇದ್ದಾರೆ ಎಂದರು.

ಜನರು ಭದ್ರತೆ ಇದೆ ಎಂಬ ವಿಶ್ವಾಸದಿಂದಲೇ ಪಹಲ್ಗಾಮ್‌ಗೆ ಹೋಗಿದ್ದರು. ಆದರೆ ಸರಕಾರ ನಾಗರಿಕರ ಸುರಕ್ಷತೆಯನ್ನೇ ಮರೆತಿದೆ. ದೇಶದ ನಾಗರಿಕರಿಗೆ ರಕ್ಷಣೆ ನೀಡುವಲ್ಲಿ ರಕ್ಷಣಾ ಸಚಿವರು ಜವಾಬ್ದಾರಿವಹಿಸಲಿಲ್ಲವೇ? ಗೃಹ ಸಚಿವರು ಇದರ ಜವಾಬ್ದಾರಿಯ ತೆಗೆದುಕೊಳ್ಳಲಿಲ್ಲವೇ? ಎಂದು ಪ್ರಶ್ನಿಸಿದರ ಪ್ರಿಯಾಂಕಾ, ಇದು ಭದ್ರತಾ ಸಂಸ್ಥೆಗಳ ಬಹುದೊಡ್ಡ ವೈಫಲ್ಯ ಎಂದು ಆಕ್ರೋಶವನ್ನು ಹೊರ ಹಾಕಿದರು.

NO COMMENTS

LEAVE A REPLY

Please enter your comment!
Please enter your name here

Exit mobile version