Home ಸುದ್ದಿ ದೇಶ ರಾಷ್ಟ್ರೀಯ ಏಕತಾ ದಿವಸ್: ಏಕತೆಯ ಪ್ರಮಾಣವಚನ ಸ್ವೀಕಾರ

ರಾಷ್ಟ್ರೀಯ ಏಕತಾ ದಿವಸ್: ಏಕತೆಯ ಪ್ರಮಾಣವಚನ ಸ್ವೀಕಾರ

0

ನವದೆಹಲಿ: ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಸಂಕೇತವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯಾದ ರಾಷ್ಟ್ರೀಯ ಏಕತಾ ದಿವಸ್ (Ekta Diwas) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಏಕತಾ ದಿನಾಚರಣೆಯ ನೇತೃತ್ವ ವಹಿಸಿ, ‘ಏಕತಾ ಪ್ರತಿಮೆ’ಗೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರದ ಏಕತೆಗೆ ಪ್ರೇರಣಾದಾಯಕ ಪ್ರಮಾಣವಚನವನ್ನು ಬೋಧಿಸಿದರು. “ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಸಂರಕ್ಷಣೆಗೆ ನಾನು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಎಂದು ನಾನು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದಿಂದ ಸಾಧ್ಯವಾದ ದೇಶದ ಏಕತೆಯ ಉತ್ಸಾಹದಲ್ಲಿ ನಾನು ಈ ಪ್ರಮಾಣವಚನ ಸ್ವೀಕರಿಸುತ್ತೇನೆ. ನನ್ನ ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಲು ನನ್ನ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸುವೆನು”

ಕಾರ್ಯಕ್ರಮದ ಅಂಗವಾಗಿ ಭವ್ಯವಾದ ರಾಷ್ಟ್ರೀಯ ಏಕತಾ ಪರೇಡ್ ಆಯೋಜಿಸಲಾಯಿತು. ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿ ಸಿಮ್ರಾನ್ ಭಾರದ್ವಾಜ್ ಅವರು ಪ್ರಧಾನಿಗೆ ಗೌರವ ವಂದನೆ ಸಲ್ಲಿಸಿದರು. ಪರೇಡ್‌ನಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು, ಕೇಂದ್ರ ಸಶಸ್ತ್ರ ಪಡೆಗಳು ಮತ್ತು ಯುವವಾಹಿನಿ ಘಟಕಗಳು ಭಾಗವಹಿಸಿವೆ.

ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ದೇಶದ ಯುವಜನತೆಗೆ ಸರ್ದಾರ್ ಪಟೇಲ್ ಅವರ ಜೀವನಮೌಲ್ಯಗಳು ಮತ್ತು ದೇಶದ ಏಕತೆಯ ಪರವಾದ ಹೋರಾಟದಿಂದ ಪ್ರೇರಣೆ ಪಡೆಯಲು ಕರೆ ನೀಡಿದರು.

ಏಕತಾ ದಿನಾಚರಣೆಯು ದೇಶಾದ್ಯಂತ ವಿವಿಧ ಮಟ್ಟಗಳಲ್ಲಿ ಉತ್ಸಾಹದಿಂದ ಆಚರಿಸಲ್ಪಟ್ಟಿತು. ಶಾಲೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಏಕತಾ ಪ್ರಮಾಣವಚನ ಕಾರ್ಯಕ್ರಮಗಳು ಜರುಗಿದವು.

NO COMMENTS

LEAVE A REPLY

Please enter your comment!
Please enter your name here

Exit mobile version