Home ಸುದ್ದಿ ರಾಜ್ಯ ರಾಜಭವನದಲ್ಲಿ ಶೀಘ್ರವೇ ವಾಕಿಂಗ್ ಟೂರ್!

ರಾಜಭವನದಲ್ಲಿ ಶೀಘ್ರವೇ ವಾಕಿಂಗ್ ಟೂರ್!

0

ರಾಜಭವನ ಸದಾ ಜನರಿಂದ ದೂರ ಇರುವುದೇ ಹೆಚ್ಚು. ಆದರೆ ಇನ್ನು ಮುಂದೆ ವಿಧಾನಸೌಧ ರೀತಿ ಕರ್ನಾಟಕ ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನವನ್ನು ಜನರು ವೀಕ್ಷಣೆ ಮಾಡಲು ಅವಕಾಶ ನೀಡಲಾಗುತ್ತದೆ.

ಈಗಾಗಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದಲೇ ತುಂಬಿರುತ್ತಿದ್ದ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಒಳಗೆ ಜನಸಾಮಾನ್ಯರಿಗೂ ಅವಕಾಶ ನೀಡಲಾಗಿದೆ. ಇದೀಗ ಅದೇ ರೀತಿಯಾಗಿ 19ನೇ ಶತಮಾನದ ಐತಿಹಾಸಿಕ ಕಟ್ಟಡ ರಾಜಭವನ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳುತ್ತಿರುವುದಾಗಿ ವರದಿ ಆಗಿದೆ.

ಈ ಮೂಲಕ ಜನರು ರಾಜಭವನವನ್ನು ಒಳಗಿನಿಂದ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಗಿರುವ ರಾಜಭವನವು ತನ್ನ ಅಪೂರ್ವ ವಾಸ್ತುಶಿಲ್ಪ, ಶ್ವೇತ ವರ್ಣದಿಂದ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯಪಾಲರ ನಿವಾಸವಿರುವ ರಾಜಭವನವನ್ನು ನೋಡಬೇಕು ಎನ್ನುವುದು ಸಾಕಷ್ಟು ಜನರ ಆಸೆ.

ಸದ್ಯ ಜನರ ಆ ಆಸೆ ನೆರವೇರುವ ಕಾಲ ಸನ್ನಿಹಿತವಾಗಿದೆ. ಮೊಟ್ಟಮೊದಲ ಬಾರಿಗೆ ಗೈಡ್ ಟೂರ್ ಹೆಸರಿನಲ್ಲಿ ಸಾರ್ವಜನಿಕರಿಗೆ ರಾಜಭವನ ಮುಕ್ತವಾಗಲಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಐತಿಹಾಸಿಕ ರಾಜಭವನದೊಳಗೆ ವಾಕಿಂಗ್ ಟೂರ್ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ರಾಜ್ಯಪಾಲ ಥಾವರ್‌ ಚಂದ್ ಗೆಲ್ಲೋಟ್ ಈಗಾಗಲೇ ಅಧಿಕೃತ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಭವನವು ಐತಿಹಾಸಿಕ ಮಹತ್ವವನ್ನು ಹೊಂದಿದೆ. 1840 ಮತ್ತು 1842ರ ನಡುವೆ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ್ದ ಈ ನಿವಾಸವನ್ನು ಮೂಲತಃ ಬ್ರಿಟಿಷ್ ಆಯುಕ್ತರಿಗಾಗಿ ನಿರ್ಮಿಸಲಾಗಿತ್ತು. ಆಗ ರೆಸಿಡೆನ್ಸಿ ಎಂದು ಕರೆಯಲ್ಪಡುತ್ತಿದ್ದ ಇದು ನಂತರ ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಎಲೀನರ್ ರೂಸ್ವೆಲ್ಟ್ ಅವರಂತಹ ಗಣ್ಯರಿಗೆ ಆತಿಥ್ಯ ವಹಿಸುವ ಉನ್ನತ ಮಟ್ಟದ ಅತಿಥಿ ಗೃಹವಾಗಿ ಪರಿವರ್ತನೆಗೊಂಡಿತ್ತು.

ಸ್ವಾತಂತ್ರ್ಯಾ ನಂತರ ಇದನ್ನು ರಾಜಭವನವಾಗಿ ರೂಪಾಂತರಿಸಲಾಯಿತು. ಅಂತಿಮವಾಗಿ ಕರ್ನಾಟಕದ ರಾಜ್ಯಪಾಲರ ಅಧಿಕೃತ ನಿವಾಸವಾಯಿತು. ಜೂನ್‌ನಲ್ಲಿ ನಡೆದ ವಿಧಾನಸೌಧ ಪ್ರವಾಸದ ಅದ್ಭುತ ಯಶಸ್ಸಿನ ನಂತರ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಮುಂದಾಗಿದೆ.

ಸಂದರ್ಶಕ ಸ್ನೇಹಿ ಪ್ರದೇಶಗಳನ್ನು ಗುರುತಿಸಲು, ಪ್ರವಾಸ ಮಾರ್ಗ ಮತ್ತು ವೀಕ್ಷಣಾ ಸಮಯವನ್ನು ನಿಗದಿ ಪಡಿಸಲಾಗುತ್ತಿದ್ದು, ಪ್ರಸ್ತುತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿರುವುದಾಗಿ ಈ ಯೋಜನೆಯ ಮೇಲ್ವಿಚಾರಕರಾದ ಕೆಎಸ್‌ಟಿಡಿಸಿಯ ಜನರಲ್ ಮ್ಯಾನೇಜರ್ ಶ್ರೀನಾಥ್ ಕೆ.ಎಸ್‌. ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version