ಬೆಂಗಳೂರು: ಕಳೆದ 2022 ರಿಂದ 2025 ರ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ 13,719 ಪೋಕ್ಸೊ (18 ವರ್ಷದೊಳಗಿನ ಮಕ್ಕಳ ಮೇಲಿನ ದೌರ್ಜನ್ಯ) ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ಕೇವಲ 348 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. ಗ್ರಾಮೀಣ ಪ್ರದೇಶ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲವೊಂದು ಪೋಕ್ಸೋ ಪ್ರಕರಣಗಳಲ್ಲಿ ಪೋಷಕರು ಮರ್ಯಾದೆಗೆ ಹೆದರಿ ಪೊಲೀಸ್ ಠಾಣೆ ಮೆಟ್ಟಿಲೇ ಹತ್ತಿಲ್ಲ. ಹಲವೆಡೆ ಪೊಲೀಸ್ ಠಾಣೆ ಮಟ್ಟದಲ್ಲಿ ರಾಜಿ ಪಂಚಾಯ್ತಿ ಆಗಿವೆ. ಹೀಗಾಗಿ ಕೈಗೆ ಸಿಗುವ ಅಂಕಿ ಅಂಶಗಳು ದಾಖಲಾಗಿವೆ.
ಪೋಕ್ಸೋ ಪ್ರಕರಣ ತಡೆಗಟ್ಟಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಇಂತಹ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ತೀರ ಕಳವಳಕಾರಿ ಸಂಗತಿಯಾಗಿದೆ. ವರ್ಷದಿಂದ ವರ್ಷಕ್ಕೆ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಬಂದಿವೆ. 2022ರಲ್ಲಿ ಒಟ್ಟು 3209 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 4064ಕ್ಕೆ ಏರಿಕೆಯಾಗಿದೆ. ಈ ಮೂಲಕ ಶೇ. 26ರಷ್ಟು ಪ್ರಕರಣಗಳು ಏರಿಕೆಯಾಗಿವೆ. 2022ರಲ್ಲಿ ದಾಖಲಾಗಿದ್ದ 3,209 ಪ್ರಕರಣಗಳ ಪೈಕಿ 186 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿವೆ. ಇನ್ನು 1,562 ಕೇಸ್‌ಗಳು ನ್ಯಾಯಾಲಯದಲ್ಲಿ ವಜಾಗೊಂಡರೆ, 1,224 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ರಾಜ್ಯದ ಎಲ್ಲಾ ಶಾಲಾ, ಕಾಲೇಜು ಸೇರಿದಂತೆ ವಿವಿಧೆಡೆ ಪೋಕ್ಸೋ ಕಾಯ್ದೆ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಪೋಕ್ಸೋ ಪ್ರಕರಣಗಳು ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಮುಂದುವರಿಸದೆ ಪೋಷಕರು ಹಿಂಜರಿದ ಉದಾಹರಣೆಗಳು ಇವೆ. ನ್ಯಾಯಾಲಯದ ಹೊರಗೆ ರಾಜಿ ಸಂಧಾನದ ಮೂಲಕ ಕೆಲವು ಪ್ರಕರಣಗಳನ್ನು ಇತ್ಯರ್ಥಗೊಳ್ಳುತ್ತಿವೆ. ಇದರಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಶಿಕ್ಷೆಯಾಗದಿರಲು ಕಾರಣ?
ಕೋರ್ಟ್‌ನಲ್ಲಿ ಸುದೀರ್ಘವಾಗಿ ನಡೆಯುವ ವಿಚಾರಣೆಯಿಂದ ಆಗುವ ತೊಂದರೆ
ಕೋರ್ಟ್‌ನಲ್ಲಿ ವಿಚಾರಣೆಯಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಹುದು ಎನ್ನುವ ಭೀತಿ
ಅತ್ಯಾಚಾರವೆಸಗಿದ ಬಾಲಕಿಯನ್ನು ಮದುವೆಯಾಗಲು ಆರೋಪಿಯೇ ಮುಂದಾಗುವುದು
ದೇಶದಲ್ಲಿ ಕಳೆದ 3 ವರ್ಷದಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳು
2022ರಲ್ಲಿ 3,209 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 186 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 3,196 ಪ್ರಕರಣಗಳು ಇತ್ಯರ್ಥಗೊಂಡಿವೆ.
2023ರಲ್ಲಿ 3,902 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 126 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 3,883 ಪ್ರಕರಣಗಳು ಇತ್ಯರ್ಥಗೊಂಡಿವೆ.
2024ರಲ್ಲಿ 4,064 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 36 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 4,026 ಪ್ರಕರಣಗಳು ಇತ್ಯರ್ಥಗೊಂಡಿವೆ.
2025ರ ಜುಲೈ ಅಂತ್ಯದವರೆಗೆ ಒಟ್ಟು 2,544 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ ಯಾವುದೇ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿಲ್ಲ. ಸದ್ಯ 1,928 ಪ್ರಕರಣಗಳು ಇತ್ಯರ್ಥಗೊಂಡಿವೆ.