ಬೆಂಗಳೂರು: ರಾಜ್ಯ ಸರ್ಕಾರ ನಷ್ಟದಲ್ಲಿರುವ ಸರ್ಕಾರಿ ಒಡೆತನದ ಹತ್ತು ನಿಗಮಗಳಿಗೆ 43 ಸಾವಿರ ಕೋಟಿ ರೂಪಾಯಿಯನ್ನು ಖರ್ಚು ಮಾಡಿ ಕೈಸುಟ್ಟುಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ಕೇಂದ್ರದ ಪ್ರಧಾನ ಲೆಕ್ಕಪರಿಶೋಧಕ ಮತ್ತು ನಿಯಂತ್ರಕ ಸಂಸ್ಥೆ (ಸಿಎಜಿ)ಯ ಇತ್ತೀಚಿನ ವರದಿಯಲ್ಲಿ ಈ ಆಘಾತಕಾರಿ ಅಂಶ ಬಯಲಿಗೆ ಬಂದಿದ್ದು ಕಳೆದ ಐದು ವರ್ಷಗಳಲ್ಲಿ ಸರ್ಕಾರ ನಷ್ಟದಲ್ಲಿರುವ ಹತ್ತು ಸರ್ಕಾರಿ ನಿಗಮಗಳಿಗೆ 43,355 ಕೋಟಿ ರೂ. ವಿನಿಯೋಗಿಸಿದ್ದು ಅಲ್ಪ ಪ್ರಮಾಣದ ಹಣವಷ್ಟೇ ಹಿಂತಿರುಗಿದೆ. ಇನ್ನುಳಿದ ಸಾವಿರಾರು ಕೋಟಿ ರೂಪಾಯಿ ನಷ್ಟ ಬಾಬ್ತು ಆಗಿದೆ ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ 159 ಸರ್ಕಾರಿ ಅಥವಾ ಸರ್ಕಾರಿ ಬೆಂಬಲಿತ ಸಂಸ್ಥೆಗಳ ಪೈಕಿ ಬಂಡವಾಳ ಹೂಡಿದ 73,487 ಕೋಟಿ ರೂಪಾಯಿಗಳಲ್ಲಿ ಅರ್ಧಕ್ಕೂ ಹೆಚ್ಚು ಹಣ ಹತ್ತು ಸರ್ಕಾರಿ ನಿಗಮಗಳಿಗೆ ಹೋಗಿದೆ ಎನ್ನಲಾಗಿದೆ. 2019-20ರಿಂದ 2023-24ರ ನಡುವೆ ರಾಜ್ಯದಲ್ಲಿ 100 ಸರ್ಕಾರಿ ಸಂಸ್ಥೆಗಳು, 9 ಶಾಸನಬದ್ಧ ನಿಗಮಗಳು, 44 ಜಂಟಿ ಸ್ಟಾಕ್ ಕಂಪನಿಗಳು, ಸಹಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಆರು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬಂಡವಾಳ ಹೂಡಿದೆ.
ಈ ಪೈಕಿ ಬರೋಬ್ಬರಿ ಶೇ. 59ರಷ್ಟು ಹಣ ಹತ್ತು ನಿಗಮಗಳಿಗೆ ಹರಿದುಹೋಗಿದ್ದು ಭಾರಿ ನಷ್ಟವನ್ನುಂಟು ಮಾಡಿದೆ. ಆ ಪೈಕಿ ಎರಡು ರಸ್ತೆ ಸಾರಿಗೆ ನಿಗಮಗಳಾದರೆ, ಎರಡು ನೀರಾವರಿ ನಿಗಮಗಳು, ಮೂರು ವಿದ್ಯುತ್ ಸರಬರಾಜು ನಿಗಮಗಳು ಮತ್ತು ಇತರೆ ಮೂರು ಸಂಸ್ಥೆಗಳು ಸೇರಿವೆ. ಈ ನಷ್ಟದ ಸಂಸ್ಥೆಗಳ ಪೈಕಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತ ಅಗ್ರಸ್ಥಾನದಲ್ಲಿದ್ದು 23,745 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಂಸ್ಥೆಯು 13,034 ಕೋಟಿ ರೂ. ನಷ್ಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ನೈಋತ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಜಂಟಿಯಾಗಿ 1,100 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
ಈ ಕುರಿತು ಪತ್ರಿಕ್ರಿಯಿಸಿರುವ ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಅವರು, “ರಸ್ತೆ ಸಾರಿಗೆ ನಿಗಮಗಳು, ನೀರಾವರಿ ನಿಗಮಗಳು, ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳು ಸೇವಾ ಕೇಂದ್ರಿತ ಸಂಸ್ಥೆಗಳಾಗಿದ್ದು ಲಾಭದಾಯಕ ಸಂಸ್ಥೆಗಳಲ್ಲ. ಇಡೀ ವಿಶ್ವದಲ್ಲಿ ಯಾವೊಂದು ಸಾರಿಗೆ ಸಂಸ್ಥೆಯು ಸಹ ಲಾಭದಲ್ಲಿ ನಡೆಯುತ್ತಿಲ್ಲ. ಕರ್ನಾಟಕದಲ್ಲಿ ನಾವು ಮಹಿಳೆಯರು, ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯವನ್ನು ನೀಡುತ್ತಿದ್ದೇವೆ. ಲಾಭತರದ ಮಾರ್ಗಗಳಲ್ಲೂ ಸಹ ಸಾರಿಗೆ ಬಸ್‌ಗಳ ಸಂಚಾರವಿದ್ದು ಲಾಭಕ್ಕಿಂತಲೂ ಜನಸಾಮಾನ್ಯರ ಅನುಕೂಲದ ಕಡೆಗೆ ನಮ್ಮ ಆದ್ಯ ಗಮನವಿದೆ” ಎನ್ನುವ ಮೂಲಕ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಎಜಿ ವರದಿಯ ಪ್ರಕಾರ ನಷ್ಟವನ್ನು ಭರಿಸಿ ನಾವು ಲಾಭದ ಕಡೆಗೆ ನಡೆಯಬೇಕೆಂದರೆ ಎಲ್ಲಾ ಸಾರಿಗೆ ನಿಗಮಗಳಿಗೆ ಅವುಗಳದ್ದೇ ಆದ ಪ್ರಯಾಣ ದರವನ್ನು ನಿಗದಿಪಡಿಸಲು, ಯಾವ ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ ನಡೆಸುವ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕಾಗುತ್ತದೆ ಎಂದು ಸಾರಿಗೆ ಸಚಿವರು ಮಾರ್ಮಿಕವಾಗಿ ನುಡಿದಿದ್ದಾರೆ.
“ನಾವು ಸಮಾಜ ಮತ್ತು ಮಾನವ ಸಂಪನ್ಮೂಲದ ಮೇಲೆ ಬಂಡವಾಳ ಹೂಡಿದ್ದೇವೆ. ಹಾಗಾಗಿ ನಷ್ಟ ಸಹಜ. ಸಿಎಜಿ ವರದಿಯು ನಾವು ಲಾಭದೆಡೆಗೆ ಹೆಜ್ಜೆಯಿಡಬೇಕೆಂದರೆ ಸಾರಿಗೆ ನಿಗಮಗಳಿಗೆ ದರ ನಿಗದಿ, ಮಾರ್ಗಗಳ ಸಂಚಾರ ಮತ್ತು ಸಂಚಾರದ ಸಾಂದ್ರತೆಯ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕಾಗುತ್ತದೆ.” ಎಂದು ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಷ್ಟದಲ್ಲಿರುವ ನಿಗಮಗಳಿಗೆ ಕೊಟ್ಟಿರುವ 43 ಸಾವಿರ ಕೋಟಿ ಸಾಲದಲ್ಲಿ ಕನಿಷ್ಠ 25000 ಕೋಟಿ ರೂಪಾಯಿಗಳು ರಾಜಕಾರಣಿಗಳ ಜೀವ ತುಂಬಿರುತ್ತದೆ ಇಷ್ಟಾದರೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಶೂನ್ಯ ಈ ನಾಲಾಯಕ್ ಸರ್ಕಾರ ಎಷ್ಟು ದಿನ ಇರುತ್ತದೆ ಅಷ್ಟು ದಿನ ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಕಾಂಗ್ರೆಸ್ ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ