Government Employee. ಕರ್ನಾಟಕದ ಸರ್ಕಾರಿ ನೌಕರರಿಗೆ ಸ್ಪಷ್ಟನೆಯೊಂದನ್ನು ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ, ಬೆಂಗಳೂರು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಹೆಚ್.ಗಿರಿಗೌಡ, ಪ್ರಧಾನ ಕಾರ್ಯದರ್ಶಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಸ್ಟಷ್ಟೀಕರಣ ಎಂದು ಸರ್ಕಾರಿ ನೌಕರರಿಗೆ ಮಾಹಿತಿ ನೀಡಲಾಗಿದೆ.
ಸ್ಪಷ್ಟೀಕರಣ ಏನು?
- ವಿಶಾಲ ಕರ್ನಾಟಕ ಸರ್ಕಾರಿ ಮತ್ತು ಖಾಸಗಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಅವರಿಂದ ಕಡಿಮೆ ಬೆಲೆಯಲ್ಲಿ ಸರ್ಕಾರಿ ನೌಕರರಿಗೆ ‘ಸರ್ಕಾರಿ ನೌಕರರ ಬಡಾವಣೆಗಳು’ ಎಂದು ಪ್ರಚಾರ ಮಾಡುತ್ತಿರುವುದು ಕಂಡು ಬಂದಿರುತ್ತದೆ.
- ಈ ಬಗ್ಗೆ ಸರ್ಕಾರಿ ನೌಕರರಲ್ಲಿ ಗೊಂದಲ ಮೂಡಿದ್ದು, ಈ ರೀತಿಯ ಯಾವುದೇ ಬಡಾವಣೆಗಳು ‘ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು’ ಅವರಿಂದ ಬೆಂಗಳೂರು ನಗರದಲ್ಲಿ ಅಥವಾ ರಾಜ್ಯದ ಇತರೆ ಯಾವುದೇ ಜಿಲ್ಲೆ ತಾಲ್ಲೂಕುಗಳಲ್ಲಿ ಅಭಿವೃದ್ಧಿಪಡಿಲಾಗಿರುವುದಿಲ್ಲ ಎಂದು ಈ ಮೂಲಕ ಸೃಷ್ಟೀಕರಿಸಲಾಗಿದೆ.
- ಮೇಲೆ ನಮೂದಿಸಿರುವ ಗೃಹ ನಿರ್ಮಾಣ ಸಂಘಕ್ಕೂ – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಅವರಿಗೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ಹೇಳಿದೆ.
ಸರ್ಕಾರಿ ನೌಕರರಿಗೆ ಸೂಚನೆಗಳು: ಕ್ರೀಡಾ ಸಂಘದ ಆಯ್ಕೆ ಹುದ್ದೆಗೆ ಸ್ಪರ್ಧಿಸುವ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ರಾಜ್ಯ ಸರ್ಕಾರಿ ನೌಕರರಿಗೆ ಸೂಚನೆಗಳನ್ನು ನೀಡಲಾಗಿದೆ.
- ಸರ್ಕಾರಿ ನೌಕರನು ಅಂತರಾಷ್ಟ್ರೀಯ ಮಟ್ಟದ, ರಾಷ್ಟ್ರಮಟ್ಟದ, ರಾಜ್ಯ ಮಟ್ಟದ ಅಥವಾ ಜಿಲ್ಲಾ ಮಟ್ಟದಲ್ಲಿ ಯಾವುದೇ ಕ್ರೀಡಾ ಸಂಘ/ ಸಂಸ್ಥೆಗಳಲ್ಲಿ ಯಾವುದೇ ಕಚೇರಿ/ ಹುದ್ದೆಯ ಚುನಾವಣೆಗೆ ಸ್ಪರ್ಧಿಸಲು ಸರ್ಕಾರದ ಅಥವಾ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
- ಸರ್ಕಾರಿ ನೌಕರನು ಅಂತರಾಷ್ಟ್ರೀಯ ಮಟ್ಟದ, ರಾಷ್ಟ್ರಮಟ್ಟದ, ರಾಜ್ಯ ಮಟ್ಟದ ಅಥವಾ ಜಿಲ್ಲಾ ಮಟ್ಟದಲ್ಲಿ ಯಾವುದೇ ಕ್ರೀಡಾ ಸಂಘ/ ಸಂಸ್ಥೆಗಳು ಆಹ್ವಾನಿಸುವ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸರ್ಕಾರದ ಅಥವಾ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
- ಗ್ರೂಪ್-ಎ ಸರ್ಕಾರಿ ನೌಕರರ ಸಂದರ್ಭದಲ್ಲಿ ಸರ್ಕಾರ ಮತ್ತು ಗ್ರೂಪ್-ಬಿ, ಸಿ ಮತ್ತು ಗ್ರೂಪ್-ಡಿ ಸರ್ಕಾರಿ ನೌಕರರ ವಿಷಯದಲ್ಲಿ ಇಲಾಖೆಯ ಮುಖ್ಯಸ್ಥರು ಅಂತಹ ಮಂಜೂರಾತಿಯನ್ನು ನೀಡಲು ಸಕ್ಷಮ ಪ್ರಾಧಿಕಾರವಾಗಿರುತ್ತಾರೆ. ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಕ್ಷಮ ಪ್ರಾಧಿಕಾರವು ಇಂತಹ ಮಂಜೂರಾತಿಯನ್ನು ನೀಡುವುದು.
- ಒಬ್ಬ ಸರ್ಕಾರಿ ನೌಕರನು ಒಂದು ಕಛೇರಿಗೆ/ ಕ್ರೀಡಾ ಸಂಘ/ ಸಂಸ್ಥೆಯಲ್ಲಿನ ಹುದ್ದೆಗೆ ಚುನಾಯಿತನಾದಲ್ಲಿ, ಆತ ಚುನಾಯಿತನಾದ ಹುದ್ದೆಯನ್ನು ಎರಡು ಅವಧಿಯ ಅಥವಾ ಐದು ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಕಡಿಮೆಯೋ ಅಂತಹ ಅವಧಿಗೆ ಧಾರಣ ಮಾಡಲು ಅನುಮತಿ ನೀಡುವುದು.
- ಒಬ್ಬ ಸರ್ಕಾರಿ ನೌಕರನು ಆತನ ಸಂಪೂರ್ಣ ಸೇವೆಯಲ್ಲಿ ಒಮ್ಮೆ ಮಾತ್ರ ಕ್ರೀಡಾ ಸಂಘ/ಸಂಸ್ಥೆಯಲ್ಲಿ ಚುನಾಯಿತ ಹುದ್ದೆಯನ್ನು ಹೊಂದತಕ್ಕದ್ದು.
- ಯಾವುದೇ ಕ್ರೀಡಾ ಸಂಘಗಳಲ್ಲಿ/ಸಂಸ್ಥೆಗಳಲ್ಲಿ ಒಮ್ಮೆ ಯಾವುದೇ ಕಛೇರಿ/ ಹುದ್ದೆಗಳನ್ನು ನಿರ್ವಹಿಸಿರುವ ಒಬ್ಬ ಸರ್ಕಾರಿ ನೌಕರನು, ಅದೇ ಕ್ರೀಡಾ ಸಂಘ/ಸಂಸ್ಥೆಯಲ್ಲಿ ಅಥವಾ ಇತರ ಯಾವುದೇ ಕ್ರೀಡಾ ಸಂಘ/ಸಂಸ್ಥೆಯಲ್ಲಿ ಯಾವುದೇ ಕಚೇರಿ/ಹುದ್ದೆಗೆ ಆಯ್ಕೆಯಾಗಲು ಮತ್ತೊಮ್ಮೆ ಮಂಜೂರಾತಿಯನ್ನು ನೀಡಬಾರದು.
- ಚುನಾವಣೆಯಲ್ಲಿ ಭಾಗವಹಿಸುವ ಒಬ್ಬ ಸರ್ಕಾರಿ ನೌಕರನು ಕ್ರೀಡಾ ಸಂಘ/ಸಂಸ್ಥೆಯಿಂದ ಯಾವುದೇ ಸಂಭಾವನೆ/ಗೌರವಧನ ಅಥವಾ ಆರ್ಥಿಕ ಸೌಲಭ್ಯಗಳನ್ನು ಪಡೆಯುವಂತಿಲ್ಲ. ಇಂತಹ ಹುದ್ದೆಯ ಕರ್ತವ್ಯಗಳು ಆತನ ನಿಯಮಿತ ಸರ್ಕಾರಿ ಕೆಲಸ ಕಾರ್ಯಗಳಿಗೆ ಬಾಧಕವಾಗದಂತಿರಬೇಕು.
- ಕ್ರೀಡಾ ಸಂಸ್ಥೆಯ ಕಚೇರಿ/ಹುದ್ದೆಯನ್ನು ಹೊಂದಿದ್ದಾನೆಂಬ ಕಾರಣಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಲಾಗುವ ವರ್ಗಾವಣೆಯಿಂದ ವಿನಾಯಿತಿ ಕೋರತಕ್ಕದ್ದಲ್ಲ ಅಥವಾ ವಿಶೇಷ ರಜೆ ಅಥವಾ ಅನುಮತಿಯನ್ನು ಕೋರತಕ್ಕದ್ದಲ್ಲ. ಇಂತಹ ಕ್ರೀಡಾ ಸಂಸ್ಥೆಯಲ್ಲಿನ ಸರ್ಕಾರಿ ನೌಕರನ ವರ್ತನೆಯು ಕೂಡ ನಡತೆ ನಿಯಮಗಳಿಗೆ ಒಳಪಡುತ್ತದೆ.
- ಆಯ್ಕೆಯಾದ ಸರ್ಕಾರಿ ನೌಕರನ ಕುಟುಂಬದ ಸದಸ್ಯರು ಅಥವಾ ಆತನ ಸಂಬಂಧಿಕರು ಅಂತಹ ಸಂಸ್ಥೆಯ ಸದಸ್ಯರಾಗಿದ್ದಲ್ಲಿ ಅಂತಹ ಮಾಹಿತಿಯನ್ನು ಸಕ್ಷಮ ಪ್ರಾಧಿಕಾರಿಗೆ ವರದಿ ಮಾಡತಕ್ಕದ್ದು. ಕಛೇರಿ ಅವಧಿಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತಕ್ಕದ್ದಲ್ಲ.