Home ಸುದ್ದಿ ರಾಜ್ಯ ಅಲ್ಪಸಂಖ್ಯಾತ ಸಮುದಾಯಗಳಿಗೆ ಮತ್ತೆ ʼಶಾದಿಭಾಗ್ಯʼ

ಅಲ್ಪಸಂಖ್ಯಾತ ಸಮುದಾಯಗಳಿಗೆ ಮತ್ತೆ ʼಶಾದಿಭಾಗ್ಯʼ

0

ಬೆಂಗಳೂರು: ಆರ್ಥಿಕವಾಗಿ ದುರ್ಬಲವಾಗಿರುವ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರು ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆ ಆದಲ್ಲಿ 50 ಸಾವಿರ ರೂ. ನೆರವು ಪಡೆಯುವ ಶಾದಿ ಭಾಗ್ಯ 2.0 ಯೋಜನೆಯನ್ನು ಜಾರಿಗೆ ತರುವ ಆದೇಶವನ್ನು ಸರ್ಕಾರ ಹೊರಡಿಸಿದೆ.

ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದ ಶಾದಿ ಭಾಗ್ಯದ ರೀತಿಯಲ್ಲೇ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 – 26ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 5 ಸಾವಿರ ಜೋಡಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಪ್ರತಿ ದಂಪತಿಗೆ 50,000 ರೂ. ಸಿಗಲಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂ. ವೆಚ್ಚವಾಗಲಿದೆ. ಅಲ್ಲದೆ, ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಲಾಭರಹಿತ ಸಂಸ್ಥೆಗೆ ಪ್ರತಿ ಜೋಡಿಗೆ 5,000 ರೂ. ಪ್ರೋತ್ಸಾಹ ಧನ ಸಿಗಲಿದೆ. ಇದಕ್ಕೆ ಒಟ್ಟು 2.5 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಲಾಗಿದೆ.

ವಧು 18 ರಿಂದ 42 ವರ್ಷ ವಯಸ್ಸಿನವರಾಗಿರಬೇಕು. ವರನ ವಯಸ್ಸು 21-45 ವರ್ಷ ವಯಸ್ಸಿನವರಾಗಿರಬೇಕು ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ. ಈ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಪಡೆಯಲು ಅರ್ಹರಾಗಲು ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆಯಿರಬೇಕು. ಈಗಾಗಲೇ ಪತ್ನಿ ಇರುವ ಯಾವುದೇ ಪುರುಷನು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಒಂದು ಕುಟುಂಬದಿಂದ ಒಬ್ಬ ಸದಸ್ಯ ಮಾತ್ರ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹನಾಗಿರುತ್ತಾನೆ. 50,000 ರೂ.ಗಳ ಆರ್ಥಿಕ ಸಹಾಯವನ್ನು ದಂಪತಿ ಹೊಂದಿರುವ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಿಡಾಯಿ ಯೋಜನೆಯಡಿಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಹಿಳೆಯರಿಗೆ ಅವರ ವಿವಾಹ ವೆಚ್ಚಕ್ಕಾಗಿ 50,000 ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತಿತ್ತು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ʻಶಾದಿಭಾಗ್ಯʼ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ 2020 ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರದ್ದುಪಡಿಸಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ, ಕ್ರೈಸ್ತ, ಜೈನ್, ಸಿಖ್‌ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಕುಟುಂಬಕ್ಕೆ ಸೇರಿದ ಯುವತಿಯರ ಮದುವೆಗೆ 50 ಸಾವಿರ ನೀಡಲಾಗುತ್ತಿತ್ತು. ಸದ್ಯ ಈ ಯೋಜನೆಯನ್ನು ಜಾರಿಗೆ ತರುವ ಆದೇಶವನ್ನು ಸರ್ಕಾರ ಹೊರಡಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version