Home ಅಪರಾಧ ತುತ್ತು ಊಟಕ್ಕೂ ಪರದಾಡಿ ಕೊನೆಗೆ ಆತ್ಮಹತ್ಯೆ ಶರಣಾದ ಮಹಿಳೆ

ತುತ್ತು ಊಟಕ್ಕೂ ಪರದಾಡಿ ಕೊನೆಗೆ ಆತ್ಮಹತ್ಯೆ ಶರಣಾದ ಮಹಿಳೆ

0

ಕಾರವಾರ: ಜೀವನದಲ್ಲಿನ ಸಂಕಷ್ಟಗಳಿಂದ ಹೊತ್ತಿನ ಊಟಕ್ಕೂ ತೊಂದರೆಯಾಗಿದ್ದರಿಂದ ಮನನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ಬೆಳ್ತಾರಗದ್ದೆಯಲ್ಲಿ ನಡೆದಿದೆ.

ಮೃತರನ್ನು ಬೆಳ್ತಾರಗದ್ದೆ ನಿವಾಸಿ ಲಕ್ಷ್ಮೀ ಮಹಾದೇವಿ ನಾಗೇಶ ಸಿದ್ದಿ (48) ಎಂದು ಗುರುತಿಸಲಾಗಿದೆ. ಮೃತ ಲಕ್ಷ್ಮೀ ಮಹಾದೇವಿ ತನ್ನ ಪತಿಯಿಂದ ದೂರವಾಗಿ ಸೈಮನ್ ಎಂಬುವವರೊಂದಿಗೆ ವಾಸವಾಗಿದ್ದಳು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಗೆ ದುಡಿಯಲು ಸಾಧ್ಯವಾಗುತ್ತಿರಲಿಲ್ಲ. ಅವಲಂಬಿತರ ಮನೆಗೆ ತನ್ನಿಂದ ಯಾವುದೇ ಆಹಾರ ಸಾಮಾನುಗಳನ್ನು ತಂದುಕೊಡಲು ಆಗದ ಬಗ್ಗೆ ನೊಂದಿದ್ದಳು. ಅಲ್ಲದೆ ಊಟಕ್ಕೂ ತೊಂದರೆಯಾಗುತ್ತಿರುವುದರಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ಆಕೆಯ ಮಗಳು ದೂರಿನಲ್ಲಿ ತಿಳಿಸಿದ್ದಾರೆ.

ಆಗಸ್ಟ್ 2 ರಂದು ರಾತ್ರಿ ಸುಮಾರು 11 ಗಂಟೆಗೆ ಅವರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ಕೂಡಲೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆಗೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಅವರು, ಆಗಸ್ಟ್ 5 ರಂದು ರಾತ್ರಿ 12 ಗಂಟೆಗೆ ಸಾವನ್ನಪ್ಪಿದ್ದಾಳೆ. ಮಗಳಾದ ಮಂಗಲಾ ಪ್ರೇಮಾನಂದ ಸಿದ್ದಿ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಹಸಿವೆಯಿಂದ ಬಳಲುತ್ತಿದ್ದಳು: ತಾಯಿ ತಂದೆಯಿಂದ ದೂರಾದ ಬಳಿಕ ನಮ್ಮೊಂದಿಗೆ ಇರುವಂತೆ ಕರೆದರೂ ಬಂದಿರಲಿಲ್ಲ. ಅನಾರೋಗ್ಯಕ್ಕೆ ಒಳಗಾದಾಗಲೂ ಹಲವು ಬಾರಿ ಕರೆ ಮಾಡಿ ಬರುವಂತೆ ಕೇಳಿಕೊಂಡಿದ್ದೇವೆ. ಆದರೂ ನಮ್ಮೊಂದಿಗೆ ಇರುವುದಕ್ಕೆ ಒಪ್ಪಿಲ್ಲ. ನಾವು ಕೂಡ ಕಷ್ಟದಲ್ಲಿಯೇ ಜೀವನ ನಡೆಸುತ್ತಿರುವುದನ್ನು ಅವಳು ತಿಳಿದಿದ್ದಳು. ಇದೇ ಕಾರಣಕ್ಕೆ ಎಷ್ಟೇ ಕರೆದರೂ ಬರಲು ಒಪ್ಪಿರಲಿಲ್ಲ. ಆದರೆ ನಾವು ಕೈಲಾದಷ್ಟನ್ನು ಆಕೆಗೆ ನೀಡುತ್ತಿದ್ದೆವು. ಅವಳ ಬಳಿ ರೇಷನ್ ಕಾರ್ಡ್ ಇರಲಿಲ್ಲ. ಸರ್ಕಾರದ ಯಾವುದೇ ಯೋಜನೆಯ ಲಾಭವೂ ಅವಳಿಗೆ ಸಿಗುತ್ತಿರಲಿಲ್ಲ. ಇದರಿಂದ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇತ್ತು. ಈ ಬಗ್ಗೆ ಸೈಮನ್ ಬಳಿಯೂ ತಾನು ನಿನಗೆ ಹೊರೆಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಳಂತೆ. ಈ ಎಲ್ಲ ಕಾರಣದಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಮಗಳು ಮಂಗಳಾ ಸಿದ್ದಿ ಹೇಳಿಕೊಂಡಿದ್ದಾಳೆ.

ಅಲ್ಲದೇ ಆಹಾರ ತಯಾರಿಸಲು ಮನೆಯಲ್ಲಿ ದಿನಸಿ ಇಲ್ಲವೆಂದು ಎರಡು ದಿನಗಳಿಂದ ತಾಯಿ ಏನನ್ನೂ ತಿಂದಿರಲಿಲ್ಲ ಎಂದು ಮಂಗಳಾ ಹೇಳಿದ್ದಾರೆ. ಅನಾರೋಗ್ಯದಿಂದಾಗಿ ಕೆಲಸ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಒಬ್ಬಂಟಿಯಾಗಿದ್ದ ತಾಯಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆಕೆಯ ಮಗಳು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version