Home ಸುದ್ದಿ ದೇಶ ಗೋವನ್ನರಂತೆ ಹೆಸರು ಬದಲಿಸಿಕೊಂಡರೆ 3 ವರ್ಷ ಜೈಲು

ಗೋವನ್ನರಂತೆ ಹೆಸರು ಬದಲಿಸಿಕೊಂಡರೆ 3 ವರ್ಷ ಜೈಲು

0

ಪಣಜಿ: ಗೋವಾ ಅಂದರೆ ಬಹಳಷ್ಟು ಜನರಿಗೆ ಇಷ್ಟ. ಗೋವಾ ಪ್ರವಾಸ ಕೇವಲ ಭಾರತೀಯರಿಗಷ್ಟೇ ಅಲ್ಲ, ವಿದೇಶಿ ಪ್ರವಾಸಿಗರಿಗೂ ಗೋವಾ ಅಚ್ಚುಮೆಚ್ಚುನ ಪ್ರವಾಸಿ ತಾಣ. ಇಲ್ಲಿನ ಬೀಚ್‌ಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಶಕ್ತಿ ಇದೆ.

ಗೋವಾ ರಾಜ್ಯ ಭಾರತದ ಅತ್ಯಂತ ಚಿಕ್ಕ ರಾಜ್ಯವಾದರೂ ಕೂಡ ದೇಶವಷ್ಟೇ ಅಲ್ಲದೇ ಹೊರ ದೇಶಗಳ ಪ್ರವಾಸಿಗರನ್ನೂ ತನ್ನತ್ತ ಆಕರ್ಷಿಸುತ್ತದೆ. ಆದರೆ, ಇಲ್ಲಿ ಮೋಜು, ಮಸ್ತಿ ಮಾಡಲೆಂದು ಬರುವ ಲಕ್ಷಾಂತರ ಜನರ ಮಧ್ಯೆ ಬದುಕು ಕಟ್ಟಿಕೊಳ್ಳಲೆಂದು ಗೋವಾಕ್ಕೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಲ್ಲಿ ಅತೀ ಹೆಚ್ಚು ಜನ ಸಂಖ್ಯೆಯಲ್ಲಿ ಕನ್ನಡಿಗರೇ ಇದ್ದಾರೆ.

ಗೋವಾದಲ್ಲಿರುವ ಕನ್ನಡಿಗರ ಮೇಲೆ ಆಗಾಗ ದೌರ್ಜನ್ಯ ನಡೆಯುತ್ತಲೇ ಇರುತ್ತವೆ. ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಎನ್ನುವ ಪ್ರಕರಣಗಳಿಂದ ಗೋವಾ ಸುದ್ದಿಯಾಗುತ್ತಿರುತ್ತದೆ. ಇವೆಲ್ಲದರ ಮಧ್ಯೆ ಗೋವಾ ಸರ್ಕಾರ ಮತ್ತೊಂದು ಮಹತ್ವದ ಸೂಚನೆಯನ್ನು ಅನ್ಯ ರಾಜ್ಯದಿಂದ ಬಂದ ನಾಗರಿಕರಿಗೆ ನೀಡಿದೆ. ಹೊರ ರಾಜ್ಯಗಳಿಂದ ಗೋವಾಕ್ಕೆ ಬಂದು ತಮ್ಮ ಹೆಸರು ಮತ್ತು ಅಡ್ಡಹೆಸರನ್ನು ಗೋವನ್ನರಂತೆಯೇ ಬದಲಾವಣೆ ಮಾಡಿಕೊಂಡವರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲು ಗೋವಾ ಸರ್ಕಾರ ಮುಂದಾಗಿದೆ.

ಗೋವಾಕ್ಕೆ ಬಂದ ಹಲವು ಜನ ಕನ್ನಡಿಗರು ತಮ್ಮ ಹೆಸರು ಮತ್ತು ಅಡ್ಡಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಇದೀಗ ಈ ಪ್ರಕರಣವು ಗೋವಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಇಂಥವರ ವಿರುದ್ಧ ಕಾರ್ಯಾಚರಣೆ ನಡೆಸಿ ಹೆಸರು ಬದಲಾವಣೆ ಅಕ್ರಮ ಎಂದು ಸಾಬೀತಾದರೆ ಅಂತಹವರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ನೀಡಲು ಗೋವಾ ಸರ್ಕಾರ ಮುಂದಾಗಿದೆ. ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಗೋವಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಹೊರ ರಾಜ್ಯಗಳಿಂದ ಗೋವಾಕ್ಕೆ ಬಂದ ಹಲವು ಜನರು ಹೆಸರು ಮತ್ತು ಅಡ್ಡಹೆಸರನ್ನು ಬದಲಾಯಿಸಿಕೊಂಡು ಗೋವನ್ನರಂತೆಯೇ ಹೆಸರನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಗೋವಾ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗೋವಾದ ನೈಜ ಗುರುತು ನಶಿಸಿಹೋಗುತ್ತಿದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಗೋವಾ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಪಕ್ಷದ ಹಲವು ಶಾಸಕರು ಬೆಂಬಲ ನೀಡಿದ್ದರು. ಅನಧಿಕೃತವಾಗಿ ನಡೆಯುತ್ತಿರುವ ಇಂತಹ ಪ್ರಕರಣಗಳನ್ನು ತಡೆಯಲು ಅಗತ್ಯ ಕಾಯ್ದೆಯ ತಿದ್ದುಪಡಿ ತರುವಂತೆ ಶಾಸಕರು ಆಗ್ರಹಿಸಿದರು.

ಈ ಕುರಿತಂತೆ ಉತ್ತರಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್, ಹೆಸರು ಮತ್ತು ಅಡ್ಡಹೆಸರು ಬದಲಾವಣೆಯ ಪ್ರಕರಣದ ಕುರಿತು ತನಿಖೆ ಪೂರ್ಣಗೊಂಡ ನಂತರ ಈ ಕಾಯ್ದೆಯಲ್ಲಿ ಅಗತ್ಯವಿರುವ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದರು.

ಕನ್ನಡಿಗರು ವಾಹನ ಖರೀದಿಸುವಂತಿಲ್ಲ: ಕಳೆದ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯ ಸೇರಿದಂತೆ ಇತರೆ ರಾಜ್ಯದ ಜನರು ಗೋವಾದಲ್ಲಿ ವಾಹನ ಖರೀದಿಸಲು ಮತ್ತು ಅವುಗಳನ್ನು ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧ ಹೇರುವ ಕಾನೂನನ್ನು ರೂಪಿಸಲು ಗೋವಾ ಸರ್ಕಾರ ಮುಂದಾಗಿತ್ತು. ಒಂದು ವೇಳೆ ಈ ಕಾನೂನು ಜಾರಿಯಾದರೆ ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕನ್ನಡಿಗರ ಮೇಲೆ ಪರಿಣಾಮ ಬೀರಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version