Home ಸುದ್ದಿ ದೇಶ ವಿಶ್ವ ದಾಖಲೆ ನಿರ್ಮಿಸಿದ “ಪರೀಕ್ಷಾ ಪೇ ಚರ್ಚಾ”

ವಿಶ್ವ ದಾಖಲೆ ನಿರ್ಮಿಸಿದ “ಪರೀಕ್ಷಾ ಪೇ ಚರ್ಚಾ”

0

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ಗಿನ್ನೆಸ್ ದಾಖಲೆ ನಿರ್ಮಿಸಿದೆ. 3.53 ಕೋಟಿಗೂ ಹೆಚ್ಚು ನೋಂದಣಿಗಳು ಮತ್ತು ದೂರದರ್ಶನದಲ್ಲಿ 21 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೂಲಕ ಪರೀಕ್ಷಾ ಪೇ ಚರ್ಚಾ ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶಿಸಿದೆ.

2018 ರಿಂದ ಆರಂಭಿಸಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿನ ಪರೀಕ್ಷೆಯ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿಯಾಗಿತ್ತು. 2025ರ ಫೆಬ್ರವರಿಯ ಕಾರ್ಯಕ್ರಮದ ಮೂಲಕ ಹೆಚ್ಚಿನ ವೀಕ್ಷಣೆಯನ್ನು ಕಾರ್ಯಕ್ರಮದ 8ನೇ ಆವೃತ್ತಿ ಅತಿ ಹೆಚ್ಚು ನೋಂದಣಿಯ ದಾಖಲೆ ನಿರ್ಮಿಸಿದೆ.

ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತ ಗಿನ್ನೆಸ್‌ವಿಶ್ವ ದಾಖಲೆ ಪ್ರಮಾಣಪತ್ರವನ್ನು ಔಪಚಾರಿಕವಾಗಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಗಿನ್ನೆಸ್‌ವಿಶ್ವ ದಾಖಲೆಗಳ ಅಧಿಕೃತ ತೀರ್ಪುಗಾರ ರಿಷಿನಾಥ್‌ದಾಖಲೆಯನ್ನು ಮಾನ್ಯ ಮಾಡಿ ಘೋಷಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ಮತ್ತು ಜಿತಿನ್ ಪ್ರಸಾದ ‘ಪರೀಕ್ಷಾ ಪೇ ಚರ್ಚಾ’ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ವೀಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರವಾಗಿ ಸಂವಾದ ನಡೆಸುತ್ತಾ ಬಂದಿದ್ದು. ಪರೀಕ್ಷೆಯ ಕಾಲದಲ್ಲಿ ಮಕ್ಕಳ ಮೇಲಿನ ಒತ್ತಡದ ಸಮಯದ ಬದಲಾಗಿ ಪ್ರೋತ್ಸಾಹದ ಸಮಯವನ್ನಾಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದ್ದು ಭಾರತೀಯ ಪಾಲಕರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ನೆಚ್ಚಿನ ಕಾರ್ಯಕ್ರಮವಾಗಿದ್ದು, ಸಂವಹನ ಸಂದರ್ಭದಲ್ಲಿ ಪರೀಕ್ಷೆಯ ಒತ್ತಡ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮೋದಿ ಉತ್ತರಿಸುತ್ತಾರೆ.

8ನೇ ಆವೃತ್ತಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ: ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2025 ರ ಎಂಟನೇ ಆವೃತ್ತಿಯಲ್ಲಿ ಸಂವಾದಾತ್ಮಕ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದು ವೀಶೇಷವಾಗಿತ್ತು, “ಸ್ಪರ್ಧೆ ಎಂಬುದು ಅವಶ್ಯಕ, ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಗುರುತಿಸಲು ಹಾಗೂ ದೌರ್ಬಲ್ಯಗಳನ್ನು ಸುಧಾರಿಸಲು ಸ್ಪರ್ಧೆ ಸಹಕಾರಿ. ಸ್ಪರ್ಧೆ ಇದ್ದರೆ ನೀವು ಬೆಳೆಯುತ್ತೀರಿ” ಎಂದು ದೀಪಿಕಾ ಹೇಳಿದ್ದಾರೆ.

“ನಿಮ್ಮ ಸಹ ಸ್ಪರ್ಧಿಯಿಂದ ನಾನೇನು ಕಲಿಯಬಲ್ಲೆ ಎಂದು ನಿಮ್ಮನ್ನು ಕೇಳಿಕೊಳ್ಳಿ. ನಮ್ಮ ಜೊತೆಯೇ ನಾವು ಸ್ಪರ್ಧೆಗೆ ಇಳಿಯಬೇಕು. ನಾನು ಏನನ್ನಾದರೂ ಮಾಡಿದರೆ ಮುಂದಿನ ಬಾರಿ ಅದನ್ನು ಮೀರಿ ಮಾಡಲು ಪ್ರಯತ್ನಿಸುತ್ತೇನೆ. ಎಂಬ ಆತ್ಮವಿಶ್ವಾಸದೊಂದಿಗೆ ಸದಾ ನಗುವಿನೊಂದಿಗೆ ಛಲದಿಂದ ಸಾಗಿರಿ” ಎಂದು ನಟಿ ದೀಪಿಕಾ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದರು.

ಧರ್ಮೇಂದ್ರ ಪ್ರಧಾನ್‌ಸಚಿವರಾಗಿದ್ದಾಗ ಗಿನ್ನೆಸ್ ದಾಖಲೆಯ ಎರಡನೇ ಮನ್ನಣೆ: ಪರೀಕ್ಷಾ ಪೇ ಚರ್ಚಾ ಗಿನ್ನೆಸ್ ವಿಶ್ವ ದಾಖಲೆ ಕುರಿತಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಮಾಡಿದ್ದು, “ಈ ವರ್ಷ 3.53 ಕೋಟಿಗೂ ಹೆಚ್ಚು ನೋಂದಣಿಗಳು ಮತ್ತು ದೂರದರ್ಶನದಲ್ಲಿ 21 ಕೋಟಿಗೂ ಹೆಚ್ಚು ವೀಕ್ಷಕರೊಂದಿಗೆ ಪರೀಕ್ಷಾ ಪೇ ಚರ್ಚಾ ವಿಶ್ವ ದಾಖಲೆ ಸ್ಥಾಪಿಸಿದೆ. ನಾನು ಕ್ಯಾಬಿನೆಟ್ ಸಚಿವನಾಗಿದ್ದಾಗ ಗಿನ್ನೆಸ್ ದಾಖಲೆಯ ಎರಡನೇ ಮನ್ನಣೆ ಇದಾಗಿದೆ.” ಎಂದಿದ್ದಾರೆ.

ಈ ಹಿಂದೆ ಎಲ್‌ಪಿಜಿಗೆ ವಿಶ್ವದ ಅತಿದೊಡ್ಡ ನೇರ ಪ್ರಯೋಜನ ವರ್ಗಾವಣೆ ಯೋಜನೆಯಾದ PAHALಗಾಗಿ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿತ್ತು ಎಂಬುದನ್ನು ಸ್ಮರಿಸಿಕೊಂಡಿದ್ದಾರೆ. “ಪರೀಕ್ಷಾ ಪೇ ಚರ್ಚಾ ದಾಖಲೆ ಮಹತ್ವದ ಮೈಲಿಗಲ್ಲಾಗಿದ್ದು, ಎಲ್ಲರಿಗೂ ವಿಶೇಷವಾಗಿ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರು, ಪೋಷಕರು ಮತ್ತು ಶಾಲೆಗಳಿಗೆ ಅಭಿನಂದನೆಗಳು” ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version