Home ಸುದ್ದಿ ದೇಶ ಆಗ ಒಬಮಾ ಮೆಚ್ಚುಗೆ, ಈಗ ಲೈಂಗಿಕ ಕಿರುಕುಳ ಆರೋಪ; ಯಾರೀ ಚೈತನ್ಯಾನಂದ ಸರಸ್ವತಿ?

ಆಗ ಒಬಮಾ ಮೆಚ್ಚುಗೆ, ಈಗ ಲೈಂಗಿಕ ಕಿರುಕುಳ ಆರೋಪ; ಯಾರೀ ಚೈತನ್ಯಾನಂದ ಸರಸ್ವತಿ?

0

ದೆಹಲಿಯ ಶ್ರೀಶಾರದಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ 19 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಈ ಸ್ವಯಂಘೋಷಿತ ದೇವಮಾನವನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಕರ್ಷಕ ಮಾಹಿತಿಗಳು ಸತ್ಯವೇ ಎಂಬ ಪ್ರಶ್ನೆ ಮೂಡಿದೆ.

ಈ ಸ್ವಾಮೀಜಿಯವರು ತಮ್ಮ ಪುಸ್ತಕಗಳಲ್ಲಿ ನೀಡಲಾದ ಲೇಖಕರ ಪರಿಚಯದಲ್ಲಿ ತಾವೊಬ್ಬ ಉನ್ನತ ವಿದ್ಯಾವಂತ, ಎಂಬಿಎ ಪದವೀಧರ, ಯೂನಿವರ್ಸಿಟಿ ಆಫ್ ಚಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಪಿಎಚ್‌ಡಿ ಪಡೆದವರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಏಳು ಡಿ-ಲಿಟ್ ಪದವಿಗಳನ್ನು ಪಡೆದಿರುವುದಾಗಿ ಹೆಮ್ಮೆಪಡುತ್ತಾರೆ.

ಅಷ್ಟೇ ಅಲ್ಲದೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಭಾಷಣವೊಂದರಲ್ಲಿ ಇವರ ಪುಸ್ತಕದ ಅಂಶವನ್ನು ಉಲ್ಲೇಖಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮಿಗಿಲಾಗಿ, ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರೇ ಇವರ “ಫರ್ಗೆಟ್ ಕ್ಲಾಸ್ ರೂಂ ಲರ್ನಿಂಗ್” ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಆ ಪುಸ್ತಕ 2007ರಲ್ಲಿ ಯೂರೋಪ್ ಹಾಗೂ ಉತ್ತರ ಅಮೆರಿಕಾದಲ್ಲಿ ಅತ್ಯಂತ ಜನಪ್ರಿಯವಾಗಿ ಮಾರಾಟವಾಗಿದೆ ಎಂದೂ ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳು ಸ್ವಾಮೀಜಿಯವರ ಘನತೆ ಮತ್ತು ಪ್ರತಿಭೆಯನ್ನು ಎತ್ತಿಹಿಡಿಯುವಂತೆ ತೋರುತ್ತವೆ. ಆದರೆ, ಈಗಿನ ಲೈಂಗಿಕ ಕಿರುಕುಳ ಆರೋಪಗಳ ಹಿನ್ನೆಲೆಯಲ್ಲಿ ಈ ಎಲ್ಲಾ ಹಕ್ಕುಸಾಧನೆಗಳ ಸತ್ಯಾಸತ್ಯತೆ ತನಿಖೆಗೆ ಒಳಪಟ್ಟಿವೆ.

ಪೊಲೀಸರು, ಸ್ವಾಮೀಜಿಯವರು ಪಡೆದ ಡಿಗ್ರಿಗಳು ಮತ್ತು ಪುಸ್ತಕಗಳ ಬಗ್ಗೆ ಪರಿಶೀಲನೆ ನಡೆಸುವವರೆಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅವರ ಲೇಖಕರ ಪರಿಚಯದಲ್ಲಿರುವ ಎಲ್ಲಾ ಮಾಹಿತಿ ಸತ್ಯವಾಗಿರಲಿಕ್ಕಿಲ್ಲ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರು, ಸ್ವಾಮೀಜಿಯವರು “ನನ್ನ ಕೋಣೆಗೆ ಬಂದರೆ ವಿದೇಶ ತೋರಿಸ್ತೇನೆ” ಎಂದು ಹೇಳುತ್ತಿದ್ದರೆಂದು ಆರೋಪಿಸಿದ್ದಾರೆ. ಸ್ವಾಮೀಜಿ ಎಂದು ಹೇಳಿಕೊಂಡ ಇತ ಈಗ ‘ಪೋಲಿಸ್ವಾಮೀ’ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಸದ್ಯ ತಲೆಮರೆಸಿಕೊಂಡಿದ್ದು ಕಾನೂನಿಗೆ ಶರಣಾದ ನಂತರ ಅಥವಾ ಮುಂದಿನ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version