Home ನಮ್ಮ ಜಿಲ್ಲೆ ಕೊಡಗು ಸಾಲು-ಸಾಲು ರಜೆ: ಕೊಡಗು ಹೋಂ ಸ್ಟೇ, ರೆಸಾರ್ಟ್‌ ಮಾಲೀಕರಿಗೆ ಮಹತ್ವದ ಸೂಚನೆ

ಸಾಲು-ಸಾಲು ರಜೆ: ಕೊಡಗು ಹೋಂ ಸ್ಟೇ, ರೆಸಾರ್ಟ್‌ ಮಾಲೀಕರಿಗೆ ಮಹತ್ವದ ಸೂಚನೆ

0

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ತನಕ ದಸರಾ-2025ರ ಅಂಗವಾಗಿ ಸಾಲು-ಸಾಲು ರಜೆ ಇದೆ. ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಏರಿಕೆಯಾಗಲಿದೆ. ವಿವಿಧ ಜಿಲ್ಲೆಗಳ, ದೇಶ ಹಾಗೂ ವಿದೇಶದ ಪ್ರವಾಸಿಗರು ಜಿಲ್ಲೆಗೆ ಆಗಮಿಸಲಿದ್ದಾರೆ.

ಆದ್ದರಿಂದ ಕೊಡಗು ಜಿಲ್ಲಾಡಳಿತ ಪ್ರವಾಸಿಗರು ವಾಸ್ತವ್ಯ ಹೂಡುವ ಹೋಂ-ಸ್ಟೇ/ ರೆಸಾರ್ಟ್/ ಹೋಟೆಲ್-ಲಾಡ್ಜ್‌ಗಳಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಲೀಕರಿಗೆ ಸೂಚನೆ ನೀಡಿದೆ. ಎಲ್ಲಾ ರೆಸಾರ್ಟ್, ಹೋಟೆಲ್, ಹೋಂ-ಸ್ಟೇ ಮಾಲೀಕರು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ನಿರ್ದೇಶನ ಕೊಡಲಾಗಿದೆ.

ಯಾವ-ಯಾವ ನಿಯಮಗಳು

  1. ಅತಿಥಿಗಳು ಬಂದಾಗ ರಿಜಿಸ್ಟರ್ ಪುಸ್ತಕದಲ್ಲಿ ಆಗಮಿಸಿರುವ ಎಲ್ಲ ಪ್ರವಾಸಿಗರ ಹೆಸರು, ಆಧಾರ್ ಕಾರ್ಡ್, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ ಪಡೆಯುವುದು ಹಾಗೂ ವಿದೇಶಿಯರು ಬಂದಾಗ ಅವರ ವೀಸಾ ಪಾಸ್ ಪೋರ್ಟ್/ ವಿಮಾನ ಟಿಕೆಟ್ ಪರಿಶೀಲಿಸಿ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.
  2. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಮಾರ್ಗ ನಕ್ಷೆಯನ್ನು ತಿಳಿಸುವುದು ಪ್ರವಾಸಿ ತಾಣಗಳು ತೆರೆಯುವ ಹಾಗೂ ಮುಚ್ಚುವ ವೇಳೆಯನ್ನು ಪ್ರವಾಸಿಗರಿಗೆ ತಿಳಿಸುವುದು.
  3. ಕಡ್ಡಾಯವಾಗಿ ಮಾಲೀಕರು ಸದರಿ ಕಟ್ಟಡದಲ್ಲಿ ವಾಸವಿರತಕ್ಕದ್ದು ಹಾಗೂ ಪ್ರವಾಸಿಗರ ಜೊತೆ ಅವರ ಪ್ರವಾಸ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಹಾಗೂ ಸ್ಥಳೀಯ ಪದ್ಧತಿಗಳು ಮತ್ತು ಕಾನೂನುಗಳ ಬಗ್ಗೆ ತಿಳಿಸುವುದು. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸುವುದು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಬೆಂಕಿ ನಂದಕವನ್ನು ಕಡ್ಡಾಯವಾಗಿ ಅಳವಡಿಸುವುದು.
  4. ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವುದು, ಸಿಸಿಟಿವಿಯ 45 ದಿನಗಳ ಫುಟೇಜ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ಸಿಸಿಟಿವಿಯನ್ನು ಸರಿಯಾಗಿ ನಿರ್ವಹಿಸುವುದು. ಹಾಗೂ ‘ನೀವು ಸಿಸಿಟಿವಿ ಕಣ್ಗಾವಲಿನಲ್ಲಿರುತ್ತೀರಿ’ ಎಂಬ ಫಲಕವನ್ನು ಕಡ್ಡಾಯವಾಗಿ ಅಳವಡಿಸುವುದು.
  5. ಯಾವುದೇ ಅಹಿತಕರ ಘಟನೆ ಅಥವಾ ತಪ್ಪುಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಸರ್ಕಾರದ ಗಮನಕ್ಕೆ ತರತಕ್ಕದ್ದು, ಇಲ್ಲವಾದಲ್ಲಿ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕಾನೂನು ಕ್ರಮಕೈಗೊಳ್ಳುವುದು. ಯಾವುದೇ ಮಾದಕ ವಸ್ತುಗಳು ಹಾಗೂ ಮದ್ಯಪಾನ ಇತ್ಯಾದಿಗಳಿಗೆ ಅವಕಾಶ ನೀಡದಂತೆ ಕ್ರಮವಹಿಸುವುದು.
  6. ಅಕ್ಟೋಬರ್ 1 ರಂದು ಸಂಜೆ 6 ರಿಂದ ಅಕ್ಟೋಬರ್ 3ರ ಮುಂಜಾನೆ 6ರ ತನಕ ದಸರಾ ಹಾಗೂ ಗಾಂಧಿ ಜಯಂತಿ ಇರುವ ಹಿನ್ನೆಲೆಯಲ್ಲಿ ಎಲ್ಲ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಈ ಕಾರಣ ಯಾವುದೇ ಮದ್ಯದ ಬಾಟಲ್‍ಗಳನ್ನು ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸಂಗ್ರಹಣೆ/ ಬಳಕೆ/ ಮಾರಾಟ ಮಾಡುವಂತಿಲ್ಲ ಹಾಗೂ ಮದ್ಯಪಾನ ಮಾಡಿ ಬಂದ/ ಸಂಗ್ರಹಣೆ ಮಾಡಿಕೊಂಡ ಬಂದಂತಹ ಪ್ರವಾಸಿಗರಿಗೆ ಕೊಠಡಿಗಳನ್ನು ನೀಡಲು ನಿರಾಕರಿಸುವುದು.
  7. ಕಡ್ಡಾಯವಾಗಿ ಒಣತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳ ಸಂಗ್ರಹಣೆಗೆ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುವುದು. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ 2 ಲೀಟರ್‌ಗಳಿಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಿದ್ದು, ಅದರಂತೆ ಸೂಕ್ತ ಕ್ರಮ ವಹಿಸುವುದು.
  8. ತುರ್ತು ಸಮಯದಲ್ಲಿ 24×7 ಕಾರ್ಯನಿರ್ವಹಿಸುವ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ 08272-221077, 08272-221099, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ 9480804900, 08272-228330 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

NO COMMENTS

LEAVE A REPLY

Please enter your comment!
Please enter your name here

Exit mobile version