ನವದೆಹಲಿ: ʻಆಪರೇಷನ್ ಸಿಂಧೂರ’ ನಿಲ್ಲಿಸಲಾಗಿದೆ, ಕೊನೆಗೊಳಿಸಲಾಗಿಲ್ಲ. ಆಪರೇಷನ್ ಸಿಂಧೂರ ಉದ್ದೇಶ ಯುದ್ಧ ಆರಂಭಿಸುವುದಲ್ಲ, ಬದಲಾಗಿ ಎದುರಾಳಿಯನ್ನು ತಲೆಬಾಗುವಂತೆ ಮಾಡುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಮಾತನಾಡಿ, ಯಾವುದೇ ಒತ್ತಡದಿಂದ ʻಆಪರೇಷನ್ ಸಿಂಧೂರ’ ಕೊನೆಗೊಳಿಸಲಾಗಿಲ್ಲ. ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಸಶಸ್ತ್ರ ಪಡೆಗಳು ನಿರ್ದಿಷ್ಟ ರಾಜಕೀಯ-ಮಿಲಿಟರಿ ಗುರಿ ಸಾಧಿಸಿದ ನಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪಾಕಿಸ್ತಾನ ಮತ್ತೇ ಭವಿಷ್ಯದಲ್ಲಿ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ, ಈ ʻಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಮುಂದಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ದಾಳಿ ನಡೆಸಿದೆ. ಇದರಲ್ಲಿ ಏಳು ಭಯೋತ್ಪಾದಕ ನೆಲೆಗಳು ಸಂಪೂರ್ಣ ನಾಶವಾಗಿವೆ. ಈ ಭಯೋತ್ಪಾದಕ ನೆಲೆಗಳು ನಾಶವಾದ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿದರು.
ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ ನಮ್ಮ ಮಿಲಿಟರಿ ಪಡೆಗಳು ಅಮಾಯಕ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದೆ. ದಾಳಿ ವೇಳೆ 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಾರತದ ಗಡಿಗಳನ್ನು ರಕ್ಷಿಸಲು ನಮ್ಮ ಸಶಸ್ತ್ರ ಪಡೆಗಳು ಸದಾ ಸನ್ನದ್ಧವಾಗಿವೆ ಎಂದು ಅವರು ಹೇಳಿದರು.
ಯಾವುದೇ ಒತ್ತಡದಿಂದಾಗಿ ಈ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿಲ್ಲ, ಒತ್ತಡದಿಂದ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎನ್ನುವುದು ಸತ್ಯಕ್ಕೆ ದೂರವಾದದ್ದು ಅದು ಆಧಾರರಹಿತವಾಗಿದೆ ಎಂದರು.
ʻಆಪರೇಷನ್ ಸಿಂಧೂರ’ ಕೈ ಬಿಡುವಂತೆ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು ವಿನಂತಿಸಿದ್ದರು. ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿ ಮಿಲಿಟರಿ ಕ್ರಮವನ್ನು ಕೊನೆಗೊಳಿಸಿ ಎಂದು ಭಾರತಕ್ಕೆ ಮನವಿ ಮಾಡಿದ್ದರು ಎಂದರು.
ಎರಡೂ ದೇಶಗಳ ಡಿಜಿಎಂಒಗಳ ನಡುವೆ ಔಪಚಾರಿಕ ಮಾತುಕತೆ ನಡೆದ ಬಳಿಕ ಎರಡೂ ಕಡೆಯವರು ಮಿಲಿಟರಿ ಕ್ರಮವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ಯಾವುದೇ ಮೂರನೇ ದೇಶ ಮಧ್ಯ ಪ್ರವೇಶಿಸಿಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದರು. ಈ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರ ಕದನ ವಿರಾಮದಲ್ಲಿ ಏನೂ ಇಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7 ರಂದು ಆಪರೇಷನ್ ಸಿಂಧೂರ ಪ್ರಾರಂಭಿಸಲಾಗಿತ್ತು.
ಟೀಕೆಗೆ ಒಪ್ಪದ ಶಶಿ ತರೂರ್: ಆಪರೇಷನ್ ಸಿಂಧೂರ ಬಗ್ಗೆ ಟೀಕಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಆಪರೇಷನ್ ಸಿಂಧೂರ ಬಗ್ಗೆ ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸುವಂತೆ ನಾಯಕರು ಸಂಪರ್ಕಿಸಿದ್ದಾರೆ. ಆಗ ಪಕ್ಷದ ನಿಲುವಿಗೆ ಬದ್ಧರಾಗಲು ಸಾಧ್ಯವಿಲ್ಲ ಎಂದು ಶಶಿ ತರೂರ್ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
Tharur is the real nationalist & patriotic person. He refused to speak against Operation Sindhoor is a right decision. Hats off Tharur.👌😊🇮🇳🇮🇳🇮🇳🙏