ನವದೆಹಲಿ : 19 ವರ್ಷದ ಭಾರತೀಯ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಇಂದು ಫಿಡೆ ಮಹಿಳಾ ಚೆಸ್ ವಿಶ್ವಕಪ್ನಲ್ಲಿ ಅನುಭವಿ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿಯನ್ನು ಟೈಬ್ರೇಕ್‌ನಲ್ಲಿ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಜಾರ್ಜಿಯಾದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ನಂ.1 ಮತ್ತು ಲೆಜೆಂಡರಿ ಆಟಗಾರ್ತಿ ಕೊನೆರು ಹಂಪಿ ವಿರುದ್ಧ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ದಿವ್ಯಾ ದೇಶಮುಖ್ ಅವರು ಗೆಲುವು ಸಾಧಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದರು. ಈ ಮೂಲಕ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ದಿವ್ಯಾ ದೇಶಮುಖ್ ಅವರು ಒಟ್ಟಾರೆ 88ನೇ ಇಂಡಿಯನ್ ಗ್ರಾಂಡ್ ಮಾಸ್ಟರ್ ಆಗಿದ್ದಾರೆ.
ದಿವ್ಯಾ ದೇಶಮುಖ್ ಈ ಪ್ರಶಸ್ತಿ ಗೆಲುವಿನೊಂದಿಗೆ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿಕಳೆದ ಮೂರು ವಾರಗಳಿಂದ ಮಹಿಳಾ ಚೆಸ್ ವಿಶ್ವಕಪ್ ನಡೆಯುತ್ತಿತ್ತು.ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಕೂಡ ಫೈನಲ್ ಪ್ರವೇಶಿಸಿದ್ದರು. ದಿವ್ಯಾ ದೇಶ್‌ಮುಖ್ ಹಾಗೂ ಕೊನೆರು ಹಂಪಿ ನಡುವಿನ ಮಹಿಳಾ ವಿಶ್ವಕಪ್ ಚೆಸ್‌ನ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದವು.
ಶನಿವಾರ ನಡೆದಿದ್ದ ಫೈನಲ್‌ನ ಮೊದಲ ಗೇಮ್ ಡ್ರಾಗೊಂಡಿತ್ತು. ಭಾನುವಾರದ 2ನೇ ಗೇಮ್ ಕೂಡಾ ಡ್ರಾದಲ್ಲಿ ಅಂತ್ಯಗೊಂಡಿತು. ಹೀಗಾಗಿ ಫಲಿತಾಂಶ ನಿರ್ಧರಿಸಲು ಇವರಿಬ್ಬರ ನಡುವೆ ಸೋಮವಾರ ಟೈ ಬ್ರೇಕರ್ ಮೊರೆ ಹೋಗಲಾಯಿತು. ಇನ್ನು ಮೊದಲ ಟೈ ಬ್ರೇಕರ್ ಯಾಪಿಡ್ ಗೇಮ್ ಕೂಡಾ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಎರಡನೇ ಟೈ ಬ್ರೇಕರ್‌ನಲ್ಲಿ ಅನುಭವಿ ಚೆಸ್ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಸಮಯದ ಒತ್ತಡದಲ್ಲಿ ಕೊಂಚ ಎಡವಿದರು. ಇದರ ಲಾಭ ಪಡೆದ ದಿವ್ಯಾ ದೇಶ್‌ಮುಖ್ 1.5-0.5 ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು.
ಫಿಡೆ ಚೆಸ್ ವಿಶ್ವಕಪ್ನ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಚೆಸ್ ಆಟಗಾರ್ತಿಯರಿಬ್ಬರು ಪರಸ್ಪರ ಮುಖಾಮುಖಿಯಾಗಿದ್ದರು. ಇದೀಗ ಇಬ್ಬರೂ 2026ರಲ್ಲಿ ನಡೆಯಲಿರುವ ವಿಮೆನ್ಸ್ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಗೆಲುವು ಸಾಧಿಸಿದರೆ ಮುಂದಿನ ವರ್ಷ ನಡೆಯಲಿರುವ ವಿಶ್ವ ಮಹಿಳಾ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಜು ವೆಂಜುನ್ ಅವರನ್ನು ಎದುರಿಸಲಿದ್ದಾರೆ.
ದಿವ್ಯಾ ದೇಶ್‌ಮುಖ್ ಪರಿಚಯ: ಜಿತೇಂದ್ರ ಮತ್ತು ನಮ್ರತಾ ಅವರ ಮಗಳಾದ ದಿವ್ಯಾ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ್ದು, 5ನೇ ವರ್ಷದಿಂದಲೇ ಚೆಸ್ ಆಡಲು ಪ್ರಾರಂಭಿಸಿದ್ದಾರೆ, ಚೆನ್ನೈನ ಚೆಸ್ ಗುರುಕುಲದಲ್ಲಿ ಜಿಎಂ ಆರ್‌ಬಿ ರಮೇಶ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದು, 2012 ರಲ್ಲಿ, ಅಂದರೆ ತಮ್ಮ ಏಳನೇ ವಯಸ್ಸಿನಲ್ಲಿಯೇ 7 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಬರವಸೆ ಮೂಡಿಸಿದ್ದರು, ಚೆಸ್‌ನಲ್ಲಿ ಗೆಲುವಿನ ಆಟ ಆರಂಭಿಸಿದ ದಿವ್ಯಾ ಫಿಡೆ ಮಹಿಳಾ ವಿಶ್ವಕಪ್ ಫೈನಲ್‌ಗೇರಿದ ಅತಿ ಕಿರಿಯ ಆಟಗಾರ್ತಿಯಾಗಿರುವ ದಿವ್ಯಾ ಈ ಮುಂಚೆ 2024ರಲ್ಲಿ ಫಿಡೆ ಅಂಡರ್-20 ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.