Home ಸುದ್ದಿ ದೇಶ Bihar Election: ಐವರು ಮಾಜಿ IPS ಅಧಿಕಾರಿಗಳಲ್ಲಿ ಮತದಾರ ಮೆಚ್ಚಿದ್ದು ಒಬ್ಬರನ್ನೇ!

Bihar Election: ಐವರು ಮಾಜಿ IPS ಅಧಿಕಾರಿಗಳಲ್ಲಿ ಮತದಾರ ಮೆಚ್ಚಿದ್ದು ಒಬ್ಬರನ್ನೇ!

0

Bihar Election: ಬಿಹಾರ ವಿಧಾನಸಭಾ ಚುನಾವಣೆಯು ಕೇವಲ ರಾಜಕೀಯ ಪಕ್ಷಗಳ ನಡುವಿನ ಕದನವಾಗಿರಲಿಲ್ಲ, ಅದೊಂದು ಖಾಕಿ ತೊಟ್ಟು ಸೇವೆ ಸಲ್ಲಿಸಿದ್ದ ಹಿರಿಯ ಐಪಿಎಸ್ ಅಧಿಕಾರಿಗಳ ರಾಜಕೀಯ ಅದೃಷ್ಟ ಪರೀಕ್ಷೆಯ ಅಖಾಡವೂ ಆಗಿತ್ತು.

ಐಪಿಎಸ್‌ನಂತಹ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿ, ರಾಜಕೀಯದ ಮೂಲಕ ಜನಸೇವೆ ಮಾಡಲು ಮುಂದಾಗಿದ್ದ ಐವರು ಮಾಜಿ ಪೊಲೀಸ್ ಅಧಿಕಾರಿಗಳ ಪೈಕಿ, ಮತದಾರ ಪ್ರಭು ಕರುಣೆ ತೋರಿದ್ದು ಕೇವಲ ಒಬ್ಬರಿಗೆ ಮಾತ್ರ.

ಗೆದ್ದಿದ್ದು ಒಬ್ಬರೇ, ಸೋತಿದ್ದು ಘಟಾನುಘಟಿಗಳು!: ಈ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಐವರು ಮಾಜಿ ಐಪಿಎಸ್ ಅಧಿಕಾರಿಗಳಲ್ಲಿ, ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಆನಂದ್ ಮಿಶ್ರಾ ಮಾತ್ರ ಗೆಲುವಿನ ನಗೆ ಬೀರಿದ್ದಾರೆ. ಉಳಿದ ನಾಲ್ವರು ಘಟಾನುಘಟಿಗಳು ಸೋಲಿನ ರುಚಿ ಕಂಡಿದ್ದಾರೆ.

ಗೆಲುವಿನ ರೂವಾರಿ ಆನಂದ್ ಮಿಶ್ರಾ (ಬಿಜೆಪಿ): 1996ರ ಬಿಹಾರ ಕೇಡರ್‌ನ ಅಧಿಕಾರಿಯಾಗಿದ್ದ ಆನಂದ್ ಮಿಶ್ರಾ, ಬಕ್ಸರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ತಮ್ಮ ಸಮೀಪದ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು ಬರೋಬ್ಬರಿ 28,353 ಮತಗಳ ಅಂತರದಿಂದ ಮಣಿಸಿದ್ದಾರೆ. 1989ರ ಕುಖ್ಯಾತ ಭಾಗಲ್ಪುರ ಗಲಭೆಯ ಸಮಯದಲ್ಲಿ ಎಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ‘ಜನ್ ಸುರಾಜ್’ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು.

‘ಸಿಂಗಂ’ ಶಿವದೀಪ್‌ಗೆ ಸೋಲು: ಜನಸಾಮಾನ್ಯರಲ್ಲಿ ‘ಸಿಂಗಂ’ ಎಂದೇ ಖ್ಯಾತರಾಗಿದ್ದ, 2006ರ ಬಿಹಾರ ಕೇಡರ್‌ನ ಶಿವದೀಪ್ ವಾಮನರಾವ್ ಲ್ಯಾಂಡೆ, ಐಜಿ ಹುದ್ದೆಗೆ ರಾಜೀನಾಮೆ ನೀಡಿ, ಜಮಾಲ್ಪುರ್ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಆದರೆ, ಅವರು ಕೇವಲ 15,538 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತ ಬೃಜ್ ಕಿಶೋರ್: 1989ರ ಬ್ಯಾಚ್‌ನ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಬೃಜ್ ಕಿಶೋರ್ ರವಿ, ಕಾಂಗ್ರೆಸ್ ಟಿಕೆಟ್‌ನಿಂದ ರೋಸೆರಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಎದುರು ಹೀನಾಯ ಸೋಲು ಅನುಭವಿಸಿದರು.

‘ಜನ್ ಸುರಾಜ್’ ಕೈ ಹಿಡಿಯಲಿಲ್ಲ: ಪ್ರಶಾಂತ್ ಕಿಶೋರ್ ‘ಜನ್ ಸುರಾಜ್’ ಪಕ್ಷದಿಂದ ಸ್ಪರ್ಧಿಸಿದ್ದ ಇಬ್ಬರು ಮಾಜಿ ಐಪಿಎಸ್ ಅಧಿಕಾರಿಗಳಾದ ರಾಕೇಶ್ ಕುಮಾರ್ ಮಿಶ್ರಾ (ದರ್ಭಾಂಗ್ ಕ್ಷೇತ್ರ) ಮತ್ತು ಜೈ ಪ್ರಕಾಶ್ ಸಿಂಗ್ (ಛಪ್ರಾ ಕ್ಷೇತ್ರ) ಕೂಡ ಸೋಲು ಕಂಡಿದ್ದಾರೆ. ರಾಕೇಶ್ ಕುಮಾರ್ ಮೂರನೇ ಸ್ಥಾನ ಪಡೆದರೆ, ಜೈ ಪ್ರಕಾಶ್ ಸಿಂಗ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಖಾಕಿಗಿಂತ ಖಾದಿ ಕಠಿಣ: ಈ ಫಲಿತಾಂಶವು ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಪೊಲೀಸ್ ಇಲಾಖೆಯಲ್ಲಿ ಗಳಿಸಿದ ಹೆಸರು ಮತ್ತು ಗೌರವ, ರಾಜಕೀಯದಲ್ಲಿ ಗೆಲುವಿನ ಮಾನದಂಡವಾಗಬೇಕಿಲ್ಲ. ಖಾಕಿ ತೊಟ್ಟು ಕಾನೂನು ಪಾಲನೆ ಮಾಡುವುದಕ್ಕೂ, ಖಾದಿ ಧರಿಸಿ ಜನರ ಮನಗೆದ್ದು ಮತಗಳನ್ನು ಪಡೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಈ ಚುನಾವಣೆಯು ಮತ್ತೊಮ್ಮೆ ಸಾಬೀತುಪಡಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version