Home ಸುದ್ದಿ ದೇಶ ಮೋದಿ-ಶಾ ರಣತಂತ್ರ: ಬಿಹಾರದಲ್ಲಿ ‘ಮಹಾಘಟಬಂಧನ್’ ಉಡೀಸ್ ಆದ ಹಿಂದಿನ ಮಾಸ್ಟರ್ ಪ್ಲ್ಯಾನ್!

ಮೋದಿ-ಶಾ ರಣತಂತ್ರ: ಬಿಹಾರದಲ್ಲಿ ‘ಮಹಾಘಟಬಂಧನ್’ ಉಡೀಸ್ ಆದ ಹಿಂದಿನ ಮಾಸ್ಟರ್ ಪ್ಲ್ಯಾನ್!

0

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಗೆಲುವು ಕೇವಲ ಒಂದು ರಾಜಕೀಯ ಜಯವಲ್ಲ, ಅದೊಂದು ವ್ಯವಸ್ಥಿತವಾಗಿ ಹೆಣೆದ ರಣತಂತ್ರದ ಫಲ. ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಹುಮತಕ್ಕೆ ಕೊರತೆಯಾದಾಗ, ಬಿಹಾರದಲ್ಲಿ ಗೆದ್ದ 30 ಸ್ಥಾನಗಳೇ ಎನ್‌ಡಿಎ ಸರ್ಕಾರ ರಚನೆಗೆ ಆಸರೆಯಾಗಿದ್ದವು.

ಹೀಗಾಗಿ, ವಿಧಾನಸಭಾ ಚುನಾವಣೆಯ ಸೋಲು ಕೇಂದ್ರ ಸರ್ಕಾರದ ಸ್ಥಿರತೆಯ ಮೇಲೂ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯಲ್ಲಿದ್ದ ಬಿಜೆಪಿ, ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ‘ಮಹಾಘಟಬಂಧನ್’ ಅನ್ನು ಮಣಿಸಲು ‘ಮಾಸ್ಟರ್ ಪ್ಲ್ಯಾನ್’ ಅನ್ನೇ ರೂಪಿಸಿತ್ತು.

ಗೆಲುವಿನ ಮೊದಲ ಹೆಜ್ಜೆ:  ಗೆಲುವಿನ ಮೊದಲ ಹೆಜ್ಜೆ ಇಟ್ಟಿದ್ದೇ ಸೀಟು ಹಂಚಿಕೆಯಲ್ಲಿ. ಮೈತ್ರಿಕೂಟದ ಪಕ್ಷಗಳಾದ ಜೆಡಿಯು, ಎಲ್‌ಜೆಪಿ ಮತ್ತು ಹಿಂದೂಸ್ತಾನಿ ಅವಾಮಿ ಮೋರ್ಚಾದ ನಡುವೆ ಯಾವುದೇ ಭಿನ್ನಾಭಿಪ್ರಾಯ ತಲೆದೋರದಂತೆ ನೋಡಿಕೊಳ್ಳುವಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಮುಖ ಪಾತ್ರ ವಹಿಸಿದ್ದರು. ಸಣ್ಣಪುಟ್ಟ ಗೊಂದಲಗಳು ಉಂಟಾದಾಗಲೂ, ಅವರೇ ಮಧ್ಯಪ್ರವೇಶಿಸಿ, ಎಲ್ಲರನ್ನೂ ಸಮಾಧಾನಪಡಿಸಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ನೋಡಿಕೊಂಡರು.

565 ರ‍್ಯಾಲಿಗಳ ಮೂಲಕ ಮತದಾರರ ಮನಗೆದ್ದ ಬಿಜೆಪಿ: ಸೀಟು ಹಂಚಿಕೆ ಅಂತಿಮವಾಗುತ್ತಿದ್ದಂತೆ, ಬಿಜೆಪಿ ಪ್ರಚಾರದ ಅಖಾಡಕ್ಕೆ ಧುಮುಕಿತು. ಇಡೀ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು, ಅದು ಬರೋಬ್ಬರಿ 565 ಚುನಾವಣಾ ರ‍್ಯಾಲಿಗಳನ್ನು ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ 14 ಬೃಹತ್ ಸಮಾವೇಶಗಳು ಮತ್ತು 1 ರೋಡ್ ಶೋ ನಡೆಸುವ ಮೂಲಕ, ಒಟ್ಟು 115 ವಿಧಾನಸಭಾ ಕ್ಷೇತ್ರಗಳನ್ನು ತಲುಪಿದರೆ, ಅಮಿತ್ ಶಾ 36 ಕಾರ್ಯಕ್ರಮಗಳ ಮೂಲಕ 168 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕೇವಲ ಸಂಖ್ಯೆಯಲ್ಲ, ಸಾಮಾಜಿಕ ಲೆಕ್ಕಾಚಾರದ ತಂತ್ರ!: ಇದು ಕೇವಲ ಸಂಖ್ಯೆಗಳ ಆಟವಾಗಿರಲಿಲ್ಲ, ಬದಲಾಗಿ ಒಂದು ನಿಖರವಾದ ಸಾಮಾಜಿಕ ಲೆಕ್ಕಾಚಾರವಾಗಿತ್ತು.

ಯಾದವ ಮತಗಳಿಗೆ ಕನ್ನ: ಆರ್‌ಜೆಡಿಯ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಯಾದವ ಸಮುದಾಯವನ್ನು ಸೆಳೆಯಲು, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು 17ಕ್ಕೂ ಹೆಚ್ಚು ರ‍್ಯಾಲಿಗಳಿಗೆ ಬಳಸಿಕೊಳ್ಳಲಾಯಿತು.

ಸ್ಟಾರ್ ಪ್ರಚಾರಕರ ಬಳಕೆ: ಭೋಜ್‌ಪುರಿ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಪವನ್ ಸಿಂಗ್ (41 ರ‍್ಯಾಲಿ) ಮತ್ತು ದೆಹಲಿ ಸಂಸದ ಮನೋಜ್ ತಿವಾರಿ (37 ರ‍್ಯಾಲಿ) ಅವರನ್ನು ಬಳಸಿಕೊಂಡು ಯುವ ಮತದಾರರನ್ನು ಮತ್ತು ಸ್ಥಳೀಯರನ್ನು ಆಕರ್ಷಿಸಲಾಯಿತು.

ಹಿಂದುತ್ವದ ಅಲೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 31 ರ‍್ಯಾಲಿಗಳ ಮೂಲಕ ಹಿಂದುತ್ವದ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನವೂ ನಡೆಯಿತು.

ಹಿರಿಯ ನಾಯಕರ ದಂಡು: ಇವರಲ್ಲದೆ, ರಾಜನಾಥ್ ಸಿಂಗ್, ಜೆ.ಪಿ. ನಡ್ಡಾ, ನಿತಿನ್ ಗಡ್ಕರಿ, ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಂತಹ ಘಟಾನುಘಟಿ ನಾಯಕರೂ ಸಹ ರಾಜ್ಯದಾದ್ಯಂತ ಪ್ರಚಾರ ನಡೆಸಿ, ಎನ್‌ಡಿಎ ಪರವಾದ ಅಲೆಯನ್ನೇ ಸೃಷ್ಟಿಸಿದರು.

ಘಟಾನುಘಟಿ ನಾಯಕರ ಬೃಹತ್ ಪ್ರಚಾರ, ಮತ್ತು ಜಾತಿ-ವಾರು ಮತದಾರರನ್ನು ಸೆಳೆಯುವ ಸೂಕ್ಷ್ಮ ತಂತ್ರಗಾರಿಕೆಯ ಮೂಲಕ, ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ‘ಮಹಾಘಟಬಂಧನ್’ ಅನ್ನು ಸಂಪೂರ್ಣವಾಗಿ ಕಟ್ಟಿಹಾಕಿ, ಬಿಹಾರದ ಗದ್ದುಗೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version