Home ಸುದ್ದಿ ದೇಶ ಎಜುಕೇಟ್ ಗರ್ಲ್ಸ್‌ಗೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ

ಎಜುಕೇಟ್ ಗರ್ಲ್ಸ್‌ಗೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ

0

ನವದೆಹಲಿ: ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಭಾರತದ ಸರ್ಕಾರಿೇತರ ಸಂಸ್ಥೆ ಎಜುಕೇಟ್ ಗರ್ಲ್ಸ್ (Educate Girls) 2025ರ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಗೆ ಭಾಜನವಾಗಿದೆ. ಆಗಸ್ಟ್ 31ರಂದು ವಿಜೇತರ ಘೋಷಣೆ ನಡೆದಿದ್ದು, “ಏಷ್ಯಾದ ನೋಬೆಲ್” ಎಂದೇ ಪ್ರಸಿದ್ಧಿ ಪಡೆದಿರುವ ಈ ಗೌರವವನ್ನು ಪಡೆಯುತ್ತಿರುವ ಮೊದಲ ಭಾರತೀಯ ಎನ್‌ಜಿಒ ಎಂಬ ಹೆಗ್ಗಳಿಕೆಗೆ ಎಜುಕೇಟ್ ಗರ್ಲ್ಸ್ ಪಾತ್ರವಾಗಿದೆ.

ಎಜುಕೇಟ್ ಗರ್ಲ್ಸ್ ಸಂಸ್ಥೆಯನ್ನು 2007ರಲ್ಲಿ ಸಫೀನಾ ಹುಸೇನ್ ಸ್ಥಾಪಿಸಿದರು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿ ಪಡೆದಿದ್ದು, ಮಹಿಳಾ ಅನಕ್ಷರತೆಯ ತೀವ್ರ ಸಮಸ್ಯೆಯನ್ನು ಪರಿಹರಿಸಬೇಕೆಂಬ ಕನಸಿನಿಂದ ಭಾರತಕ್ಕೆ ಮರಳಿದರು.

ರಾಜಸ್ಥಾನದಿಂದ ಆರಂಭವಾದ ಈ ಸಂಸ್ಥೆ, ಶಾಲೆಗೆ ಹೋಗದ ಹೆಣ್ಣುಮಕ್ಕಳನ್ನು ಮರು ಶಾಲಾ ಪ್ರವೇಶ ಮಾಡಿಸುವುದರ ಜೊತೆಗೆ, ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಸಮುದಾಯಗಳನ್ನು ಪ್ರೇರೇಪಿಸಿ, ಸ್ಥಳೀಯ ಯುವಕರನ್ನು “ಟೀಮ್‌ ಬಾಲಿಕಾ” ಎಂಬ ಸ್ವಯಂಸೇವಕರಾಗಿ ತೊಡಗಿಸುವ ಮೂಲಕ ಈ ಸಂಸ್ಥೆ ಲಕ್ಷಾಂತರ ಮಕ್ಕಳಿಗೆ ಶಿಕ್ಷಣದ ದಾರಿ ತೆರೆದಿದೆ.

ಪ್ರಶಸ್ತಿ ಪ್ರದಾನ: ಈ 67ನೇ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 7ರಂದು ಫಿಲಿಪ್ಪೀನ್ಸ್‌ನ ರಾಜಧಾನಿ ಮನಿಲಾದ ಮೆಟ್ರೋಪಾಲಿಟನ್ ಥಿಯೇಟರ್‌ನಲ್ಲಿ ನಡೆಯಲಿದೆ. ಪ್ರತೀ ವರ್ಷ ಏಷ್ಯಾದ ವಿವಿಧ ದೇಶಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಎಜುಕೇಟ್ ಗರ್ಲ್ಸ್ ಸಾಧನೆ ಕುರಿತು ಸಫೀನಾ ಹುಸೇನ್: ಈ ಕುರಿತಂತೆ ಪ್ರತಿಕ್ರಿಯೆ ನೀಡುರುವ ಸಫೀನಾ ಅವರು ಈ ಪ್ರಶಸ್ತಿ ನಮ್ಮ ಸಂಸ್ಥೆಯಲ್ಲಿರುವ ಸಾವಿರಾರು ಸ್ವಯಂಸೇವಕರ ಶ್ರಮಕ್ಕೆ ಸಿಕ್ಕ ಮಾನ್ಯತೆ. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಶಿಕ್ಷಣವೇ ಬದುಕನ್ನು ಬದಲಾಯಿಸುವ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಭಿನಂದನೆ: ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತದ ‘Educate Girls’ ಸಂಸ್ಥೆಯು 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನವಾದ ಸುದ್ದಿ ಕೇಳಿ ಖುಷಿಯಾಯಿತು. ಸಂಸ್ಥೆಯ ಸ್ಥಾಪಕಿ ಸಫೀನಾ ಹುಸೇನ್‌ರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆಗಳು ತಿಳಿಸಿದ್ದಾರೆ.

ರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ‌ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ “Educate Girls” ಸಂಸ್ಥೆಯು, ಕಾಲ ಕಳೆದಂತೆ ಹೆಮ್ಮರವಾಗಿ ಬೆಳೆದು ಇಂದು ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸಲು ನಿಸ್ವಾರ್ಥ ಶ್ರಮಿಸುತ್ತಿದೆ. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ‘Educate Girls’ ಸಂಸ್ಥೆಯ ಹಿಂದಿರುವ ನಿಸ್ವಾರ್ಥ ಜೀವಗಳಿಗೆ ಈ ಪ್ರಶಸ್ತಿ ಹೊಸ ಸ್ಪೂರ್ತಿ ತುಂಬಲಿದೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version