ಪುಟ್ಟಪರ್ತಿ (ಆಂಧ್ರ ಪ್ರದೇಶ): “ಮಾನವ ಸೇವೆಯೇ ಮಾದವ ಸೇವೆ” ಎಂದು ಸಾರಿದ್ದ ಶ್ರೀ ಸತ್ಯಸಾಯಿ ಬಾಬಾ ಅವರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಇಂದು ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬಾ ಅವರ ಸೇವಾತತ್ವ, ಜನಕಲ್ಯಾಣದ ಬದ್ಧತೆ ಮತ್ತು ಮಾನವೀಯತೆ ಆಧಾರಿತ ಜೀವನಶೈಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
“ಕಾಯಕವೇ ಕೈಲಾಸ” ಎನ್ನುವ ನಂಬಿಕೆ ಬಾಬಾ ಅವರದು: ಬಾಬಾ ಧಾರ್ಮಿಕತೆ ಮತ್ತು ಸೇವೆಯನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ನೋಡುತ್ತಿದ್ದರು. ಸೇವೆ ಮಾಡಿದಾಗಲೇ ಜೀವನದ ಅರ್ಥ ದೊರೆಯುತ್ತದೆ ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ತೋರಿಸಿದರು. ಬಾಬಾ ಅವರು ಬಡವರು, ನಿರ್ಗತಿಕರು ಮತ್ತು ದಿಕ್ಕೆಟ್ಟ ಜನರಿಗಾಗಿ ಮಾಡಿದ ಶಿಕ್ಷಣ, ಆರೋಗ್ಯ ಮತ್ತು ನೀರು ಯೋಜನೆಗಳು ಲಕ್ಷಾಂತರ ಜನರಿಗೆ ಹೊಸ ಬದುಕು ನೀಡಿವೆ. ಬಾಬಾ ಅವರ ಬೋಧನೆ ಕೇವಲ ಪ್ರವಚನಕ್ಕೆ ಸೀಮಿತವಾಗಿರಲಿಲ್ಲ. ಅವರ ಸೇವೆ ಅವರ ಸಂದೇಶವಾಗಿತ್ತು ಎಂದು ಪ್ರಧಾನಿ ಹೇಳಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಪ್ರಧಾನಿಯಿಂದ ಸುಕನ್ಯಾ ಸಮೃದ್ಧಿ ಯೋಜನೆಗೆ ಚಾಲನೆ ನೀಡಲಾಯಿತು. ಸತ್ಯಸಾಯಿ ಬಾಬಾ ಶತಮಾನ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಈ ಭವ್ಯ ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು. ಉಪಮುಖ್ಯಮಂತ್ರಿ ಪವನ ಕಲ್ಯಾಣ. ಸಚಿನ್ ತೆಂಡೂಲ್ಕರ್. ನಟಿ ಐಶ್ವರ್ಯ ರೈ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
