Home ನಮ್ಮ ಜಿಲ್ಲೆ Sigandur Bridge: ಸೇತುವೆ ನೋಡಲು, ದೇವಿ ದರ್ಶನಕ್ಕೆ ಜನವೋ ಜನ, ಸೆಲ್ಫಿ…ರೀಲ್ಸ್!

Sigandur Bridge: ಸೇತುವೆ ನೋಡಲು, ದೇವಿ ದರ್ಶನಕ್ಕೆ ಜನವೋ ಜನ, ಸೆಲ್ಫಿ…ರೀಲ್ಸ್!

0

ಮಹೇಶ್ ಹೆಗಡೆ
ಸಾಗರ: ಸಿಗಂದೂರು ಸೇತುವೆಯಾದ ಬಳಿಕ ದೇವಿ ದೇವಸ್ಥಾನಕ್ಕೆ ಭಕ್ತರ ಮಹಾಪೂರವೇ ಸಾಗರದಂತೆ ಹರಿದುಬರುತ್ತದೆ. ಭಾನುವಾರ ಹಿನ್ನೀರಿನ ಜನರು ಅಕ್ಷರಶಃ ನಡುಗಿ ಹೋಗಿದ್ದಾರೆ. ಈ ಹಿಂದೆ ಎಂದೂ ಕಾಣದ ವಾಹನದ ದಟ್ಟವಾದ ಸಾಲುಗಳು, ದೇವಿ ದರುಷನಕ್ಕೆ ನಿಂತ ಭಕ್ತರ ಸಾಲುಗಳನ್ನು ನೋಡಿ ಹಿನ್ನೀರಿನ ಜನರು ಹೌಹಾರಿದ್ದು ಈ ರೀತಿ ಮುಂದುವರೆದರೆ ಮುಂದೇನು? ಎನ್ನುವ ಆತಂಕದಲ್ಲಿದ್ದಾರೆ.

ಸೇತುವೆ ನೋಡಲು ಜನಸಾಗರ: ಈ ಹಿಂದೆ ಲಾಂಚ್ ಸೇವೆಯಿದ್ದ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ದಿನನಿತ್ಯವೂ ಕಿರಿಕಿರಿ, ಗಲಾಟೆ ನಡೆಯುತ್ತಿದ್ದವು. ಆದರೆ ಈಗ ಸೇತುವೆ ನಿರ್ಮಾಣವಾಗಿದ್ದು, ಸ್ಥಳೀಯರು ಸಂತೋಷದಿಂದ ಹಗಲು ರಾತ್ರಿಯೆನ್ನದೆ ಸಂಚಾರ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಶಾಪದಿಂದ ಬಿಡುಗಡೆಯಾದ ಹಾಗೆ ಆಗಿದೆ. ಸಿಗಂದೂರು ಸೇತುವೆ ದೇಶದ ಎರಡನೇ ಉದ್ದದ ಸೇತುವೆಯಾಗಿದೆ. ಇಲ್ಲಿ ದೀಪದ ಅಲಂಕಾರವಿರುವುದರಿಂದ ಜನರು ಸೇತುವೆ ನೋಡಲು ಬರುವ ನೆಪದಲ್ಲಿ ಸೇತುವೆಯ ಮೇಲೆ ಫೋಟೋ ಫೋಸ್ ಹಾಗೂ ರೀಲ್ಸ್ ಮಾಡುವುದು, ಸೆಲ್ಫಿ ಫೋಸ್ ಹುಚ್ಚಾಟಗಳು ಮಿತಿ ಮೀರಿವೆ. ಸೇತುವೆಯ ಮೇಲೆ ವಾಹನ ನಿಲ್ಲಿಸಿ ಫೋಟೋಗಳಿಗೆ ಜನರು ಮುಗಿ ಬೀಳುತ್ತಿದ್ದಾರೆ. ಇದರಿಂದ ಸೇತುವೆಯಲ್ಲಿ ವಾಹನ ಸಂಚಾರ ಮಾಡುವುದು ದುಸ್ತರವಾಗಿದೆ.

ಸಿಗಂದೂರಿಗೆ ಹೆಚ್ಚಿದೆ ಪ್ರವಾಸಿಗರ ಸಂಖ್ಯೆ: ಸೇತುವೆಯಾದ ಬಳಿಕ ಇಲ್ಲಿಯವರೆಗೆ ಸಿಗಂದೂರು ದೇವಿ ದೇವಸ್ಥಾನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಸೇತುವೆ ನೋಡಲು ಬರುವ ಜನರು ಕೂಡ ಸಿಗಂದೂರಿಗೆ ಬಂದು ದೇವಿಯ ದರುಷನ ಮಾಡಿ ಹೋಗುತ್ತಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದೇವಸ್ಥಾನದ ಸುತ್ತಮುತ್ತ ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಭಕ್ತರ ಸಂಖ್ಯೆ ದಿಢೀರ್ ಹೆಚ್ಚಾಗಿದ್ದರಿಂದ ನೂಕು ನುಗ್ಗಲು ಕೂಡ ಸಂಭವಿಸುವ ಅಪಾಯವಿದೆ.

ಸೇತುವೆಯಾದ ನಂತರ ಮುಂದೇನು?: ಸೇತುವೆ ಉದ್ಘಾಟನೆಯಾದ ನಂತರ ಕೆಲವು ಕೆಲಸ ಕಾರ್ಯಗಳು ಆಗಬೇಕಾಗಿದೆ. ಮುಖ್ಯವಾಗಿ ಜಿಲ್ಲಾಡಳಿತ ಇದನ್ನು ಗಮನಿಸಬೇಕಿದೆ. ಸಿ.ಸಿ. ಕ್ಯಾಮೆರಾವನ್ನು ಅಳವಡಿಸಿ ಸೇತುವೆಯ ಮೇಲೆ ಹದ್ದಿನಕಣ್ಣು ಇಡಬೇಕಾಗಿದೆ. ಈಗ ಸೇತುವೆಗೆ ದೀಪದ ಅಲಂಕಾರ ಮಾಡಲಾಗಿದೆ. ಆದರೆ ಇನ್ನೂ ಹೆಚ್ಚಿನ ಅಲಂಕಾರ ಮಾಡಿ ರಾತ್ರಿ ಸಮಯದಲ್ಲಿ ಜನರು ದೀಪದ ಅಲಂಕಾರ ನೋಡುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಮುಖ್ಯವಾಗಿ ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸ್ ಚೌಕಿಯನ್ನು ಮಾಡಿ ಸೇತುವೆಯ ಮೇಲೆ ಜನರ ಅಸಭ್ಯ ವರ್ತನೆ ತಡೆಯ ಬೇಕಾಗಿದೆ. ಸೇತುವೆಯವರೆಗೆ ಇರುವ ಬಸ್ ಸೌಲಭ್ಯವನ್ನು ಹೆಚ್ಚಿಸಿ ಮುಂದಿನ ಊರುಗಳಿಗೆ ಹೋಗುವ ವ್ಯವಸ್ಥೆ ಮಾಡಬೇಕಿದೆ. ಶರಾವತಿ ಹಿನ್ನೀರಿನ ಜನರಿಗೆ ಬಸ್ ಸೌಲಭ್ಯ ಹಾಗೂ ಇನ್ನಿತರೆ ವಾಹನ ಸೌಲಭ್ಯ ಬೇಕಾಗಿದೆ. ಸೇತುವೆಯಾಗಿರುವುದರಿಂದ ಸಾಗರದಿಂದ-ಸಿಗಂದೂರು ಹಾಗೂ ಕೊಲ್ಲೂರು ಕ್ಷೇತ್ರಗಳಿಗೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕಿದೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಟಿ.ಸತ್ಯನಾರಾಯ ಈ ಕುರಿತು ಮಾತನಾಡಿ, “ಸೇತುವೆಯಾದ ಬಳಿಕ ಹಿನ್ನೀರಿಗೆ ಇದ್ದ ಬಹುದೊಡ್ಡ ಶಾಪ ನಿವಾರಣೆಯಾಗಿದೆ. ಆದರೆ ಈಗ ಇನ್ನು ಕೆಲವು ಸೌಲಭ್ಯಗಳು ಹಾಗೂ ಸೇತುವೆಯ ಮೇಲೆ ಹದ್ದಿನ ಕಣ್ಣು ಇಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ” ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version