ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣ ಲೋಕಾರ್ಪಣೆಗೊಣಂಡು ಎರಡು ವರ್ಷ ಕಳೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ 1,30,587 ಜನರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಹುಬ್ಬಳ್ಳಿ ಬಳಿಕ ರಾಜ್ಯದ ದೇಶಿಯ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆಯಲ್ಲಿ ಶಿವಮೊಗ್ಗ 2ನೇ ಸ್ಥಾನದಲ್ಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಎಸ್‌ಎಸ್‌ಐಡಿಸಿ) ಮಾಡುತ್ತಿದೆ. ಆದರೆ ಸಂಸದ ಬಿ.ವೈ.ರಾಘವೇಂದ್ರ ವಿಮಾನ ನಿಲ್ದಾಣ ನಿರ್ವಹಣೆಯನ್ನು ಕೆಎಸ್‌ಎಸ್‌ಐಡಿಸಿಗೆ ನೀಡಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ.
ಆಗಿದ್ದೇನು?: ಸೆಪ್ಟೆಂಬರ್ 12ರಂದು ಹವಾಮಾನ ವೈಪರೀತ್ಯದ ಕಾರಣ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೋಗಿತ್ತು. ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, “ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗದೇ ಹುಬ್ಬಳ್ಳಿಗೆ ತೆರಳಿತ್ತು. ನಾನು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿದೆ. ನಮ್ಮೂರಿನಲ್ಲೇ ವಿಮಾನ ನಿಲ್ದಾಣವಿದ್ದರೂ ಇನ್ನೊಂದು ಊರಿಗೆ ಹೋಗಿ ಬರುವಂತಹ ದುಸ್ಥಿತಿ ಇದೆ ಎಂದು ಬೇಸರವಾಗುತ್ತದೆ” ಎಂದರು.
“ವಿಮಾನ ನಿಲ್ದಾಣದ ನಿರ್ವಹಣೆಯನ್ನು ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ಕೆಎಸ್‌ಎಸ್‌ಐಡಿಸಿಗೆ ವಹಿಸಿದೆ. ಇದು ನಾನು ಮಾಡಿದ ದೊಡ್ಡ ತಪ್ಪು ಎಂದು ಎನಿಸಲು ಶುರುವಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ನಿರ್ವಹಣೆ ಮಾಡಿದರೆ ಸರಿ ಇರುತ್ತಿತ್ತು” ಎಂದು ಹೇಳಿದರು.
“ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್‌ಗೆ ಬೇಕಾದ ಉಪಕರಣಗಳನ್ನು ತರಿಸಿ ಮೂರು ತಿಂಗಳು ಕಳೆದಿದೆ. ಇವುಗಳ ಅಳವಡಿಕೆಗೆ 2 ರಿಂದ 3 ಕೋಟಿ ರೂ. ಅಗತ್ಯವಿದೆ. ಆದರೆ ಟೆಂಡರ್ ಕರೆಯಲು ವಿಫಲವಾಗುತ್ತಿದೆ. ನಿರ್ಮಿತಿ ಕೇಂದ್ರಕ್ಕೆ ಕೊಟ್ಟಿದ್ದರೆ ಟೆಂಡರ್ ಇಲ್ಲದೇ ಕೆಲಸ ಮುಗಿಯುತ್ತಿತ್ತು” ಎಂದು ತಿಳಿಸಿದರು.
“ಸರ್ಕಾರ ಒಂದು ಕೋಟಿ ರೂ. ಹಣ ನೀಡಲು ಸಚಿವ ಸಂಪುಟ ಸಭೆಯನ್ನು ನಡೆಸಬೇಕು ಎಂದು ಹೇಳುತ್ತದೆ. ಆದರೆ ಸರ್ಕಾರ ಹಣ ಕೊಡಲು ವಿಫಲವಾದ ಕಾರಣ ನಮಗೆ ಸಿಗಬೇಕಿದ್ದ ಅವಕಾಶ ಬೇರೆಯವರ ಪಾಲಾಗುತ್ತದೆ” ಎಂದರು.
“ಹಣ ನೀಡಿ ಸರ್ಕಾರ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಮಾಡಿಸಿದರೆ ದೆಹಲಿಯಲ್ಲಿ ಚರ್ಚಿಸಿ ಇನ್ನಷ್ಟು ವಿಮಾನ ನಗರಕ್ಕೆ ಬರುವಂತೆ ಮಾಡುತ್ತೇನೆ. ಇಲ್ಲವಾದಲ್ಲಿ ಮೋಡವಾದರೆ ವಿಮಾನಗಳು ರದ್ದಾಗುತ್ತದೆ” ಎಂದು ಸಂಸದರು ಹೇಳಿದರು.
ಶಿವಮೊಗ್ಗದ ವಿಮಾನ ನಿಲ್ದಾಣವನ್ನು 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದಂದು ಅವರ ಕನಸಿನ ಯೋಜನೆ ಲೋಕಾರ್ಪಣೆಯಾಗಿತ್ತು.
ಸದ್ಯ ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ, ಚೆನ್ನೈಗೆ ವಿಮಾನ ಸೇವೆ ಇದೆ. ಎರಡು ವರ್ಷಗಳಲ್ಲಿ 3092 ವಿಮಾನಗಳು ಇಲ್ಲಿಂದ ಹಾರಾಟ ನಡೆಸಿವೆ. ಅಲ್ಲದೇ ವಾಣಿಜ್ಯ ಮತ್ತು ಖಾಸಗಿ ಜೆಟ್‌ಗಳು 168 ಬಾರಿ ಶಿವಮೊಗ್ಗಕ್ಕೆ ಬಂದು ಹೋಗಿವೆ.
ಕೆಎಸ್‌ಎಸ್‌ಐಡಿಸಿ ನಿರ್ವಹಣೆ ಮಾಡುತ್ತಿರುವ ಕಾರಣ 273 ಜನರಿಗೆ ಇಲ್ಲಿ ಉದ್ಯೋಗ ಸಿಕ್ಕಿದೆ. ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ರಾಜ್ಯದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗದ್ದಾಗಿದೆ.