Home ಅಪರಾಧ ಬ್ಯಾಂಕ್‌ಗೆ ವಂಚಿಸಿ ಬರೋಬ್ಬರಿ 20 ವರ್ಷಗಳ ಬಳಿಕ ಸಿಕ್ಕಿಬಿದ್ದ ಚಾಲಾಕಿ

ಬ್ಯಾಂಕ್‌ಗೆ ವಂಚಿಸಿ ಬರೋಬ್ಬರಿ 20 ವರ್ಷಗಳ ಬಳಿಕ ಸಿಕ್ಕಿಬಿದ್ದ ಚಾಲಾಕಿ

0

ಬೆಂಗಳೂರು: ಕಳೆದ 20 ವರ್ಷಗಳ ಹಿಂದೆ ಬ್ಯಾಂಕುಗಳಿಗೆ ವಂಚಿಸಿ ಅಂದಿನಿಂದ ತಲೆಮರೆಸಿಕೊಂಡಿದ್ದ ಘೋಷಿತ ಅಪರಾಧಿಯನ್ನು ಇದೀಗ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮಣಿ ಎಂ. ಶೇಖರ್ ಬಂಧಿತ ಮಹಿಳೆಯಾಗಿದ್ದು, ಸುಧಾರಿತ ಇಮೇಜ್ ಸರ್ಚ್ ಪರಿಕರಗಳನ್ನು ಬಳಸಿ ಆಕೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2006ರಲ್ಲಿ ಮಣಿ ಹಾಗೂ ಆಕೆಯ ಪತಿ ಆರ್.ಎಂ. ಶೇಖರ್ ಇಬ್ಬರೂ ಸೇರಿ ಇಂಡೋ ಮಾರ್ಕ್ಸ್ ಪ್ರೈ. ಲಿ ಮತ್ತು ಬಿಟಿಸಿ ಹೋಮ್ ಪ್ರಾಡಕ್ಟ್ ಪ್ರೈ. ಲಿ ಎಂಬ ಉದ್ಯಮಗಳನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬೆಂಗಳೂರಿನಲ್ಲಿನ ಎಸ್‌ಬಿಐ ಹಾಗೂ ಇಂಡಿಯನ್ ಓವರ್‌ಸಿಸ್ ಬ್ಯಾಂಕುಗಳಿಗೆ ತಮ್ಮ ಸಂಸ್ಥೆಗಳ ಹೆಸರಿನಿಂದ ನಾನ್-ಫಂಡ್-ಆಧಾರಿತ ಕ್ರೆಡಿಟ್ ಮಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓವರ್‌ಸೀಸ್ ಬ್ರಾಂಚ್‌ಗೆ 8 ಕೋಟಿ ವಂಚಿಸಿದ್ದರು.

ಇವರ ವಿರುದ್ಧ ದೂರು ದಾಖಲಾಗಿತ್ತು. ನಂತರ 2007ರ ಡಿಸೆಂಬರ್ 12ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಇಬ್ಬರೂ ಆರೋಪಿಗಳು ವಿಚಾರಣೆಗೆ ಹಾಜರಾಗಲು ಮತ್ತು ವಾರಂಟ್‌ಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.

ಹಾಗಾಗಿ ಫೆಬ್ರವರಿ 27, 2009ರಂದು ನ್ಯಾಯಾಲಯ ಇಬ್ಬರನ್ನು ಘೋಷಿತ ಅಪರಾಧಿಗಳೆಂದು ಆದೇಶಿಸಿತು. ಅಪರಾಧಿಗಳನ್ನು ಪತ್ತೆಹಚ್ಚಲು ವಿಫಲವಾದ ನಂತರ ಇವರ ಪತ್ತೆಗಾಗಿ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಸಿಬಿಐ ಕಣ್ಣಿಗೂ ಸಹ ದಂಪತಿ ಗೋಚರಿಸಲಿಲ್ಲ. ಆಗ ಸಿಬಿಐ ಅವರನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನವನ್ನೂ ಘೋಷಿಸಿತ್ತು.

ಹೆಸರು ಬದಲಿಸಿದ್ದರು: ದಂಪತಿ ತಪ್ಪಿಸಿಕೊಂಡ ನಂತರ ತಮ್ಮ ಹೆಸರು ಬದಲಿಸಿಕೊಂಡಿದ್ದರು. ಪತಿ ಶೇಖರ್ ಕೃಷ್ಣಕುಮಾರ್ ಎಂದು ಬದಲಿಸಿಕೊಂಡಿದ್ದರೆ ಪತ್ನಿ ಗೀತಾ ಕೃಷ್ಣಕುಮಾರ್ ಗುಪ್ತ ಎಂದು ಹೆಸರು ಬದಲಿಸಿಕೊಂಡಿದ್ದರು. ಇವರು ತಮ್ಮ ಯಾವುದೇ ದಾಖಲೆಗಳನ್ನು ಬಹಿರಂಗ ಗೊಳಿಸಿರಲಿಲ್ಲ.

ತಮ್ಮ ಕೆವೈಸಿಗಳನ್ನೂ ಬಳಸುತ್ತಿರಲಿಲ್ಲ. ಆಗಾಗ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸಿಕೊಳ್ಳುತ್ತಿದ್ದರು. ಇಮೇಲ್‌ಗಳನ್ನು ಬದಲಿಸಿಕೊಂಡಿದ್ದರು. ಆವಾಗವಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರೂ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಇವರನ್ನು ಹುಡುಕುವುದೇ ಕಷ್ಟ ಎಂದು ಅನಿಸಿದಾಗ ಸಿಬಿಐ ಅಧಿಕಾರಿಗಳು ಹೊಸ ಪ್ಲಾನ್ ರೂಪಿಸಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?: ಸಿಬಿಐ ಅಧಿಕಾರಿಗಳು ಆರೋಪಿಗಳ ಎಲ್ಲ ಮಾಹಿತಿಯನ್ನು ಕಲೆ ಹಾಕಿದರು. ಹೊಸದಾಗಿ ಅವರ ಮೊಬೈಲ್, ಡಿಜಿಟಲ್ ಹೆಜ್ಜೆಗಳನ್ನು ಗುರುತಿಸಿದರು. ಅವರು ಮಧ್ಯಪ್ರದೇಶದಲ್ಲಿರುವುದು ಗೊತ್ತಾಯಿತು. ಆಗ ಅಲ್ಲಿನ ಪೊಲೀಸರ ಸಹಾಯದಿಂದ ಆರೋಪಿಗಳು ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದರು.

ಅವರೇ ವಂಚಕರು ಎಂದು ದೃಢಪಟ್ಟ ನಂತರ ಅವರ ಮನೆಗೆ ಸಿಬಿಐ ಅಧಿಕಾರಿಗಳು ತೆರಳಿದ್ದರು. ಆದರೆ, ಪತಿ ಶೇಖರ್ ತಾನು ಬದಲಿಸಿಕೊಂಡಿದ್ದ ಹೆಸರಿನಿಂದಲೇ ಮೃತನಾಗಿದ್ದ ವಿಷಯ ತಿಳಿಯಿತು. ಸದ್ಯ ಪತ್ನಿ ಮಣಿಯನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version