Home ಸುದ್ದಿ ರಾಜ್ಯ ಗೊಬ್ಬರಕ್ಕಾಗಿ ಹೋರಾಟ: ರೈತರೊಂದಿಗೆ ಕೈ ಜೋಡಿಸಿದ ಬಿಜೆಪಿ

ಗೊಬ್ಬರಕ್ಕಾಗಿ ಹೋರಾಟ: ರೈತರೊಂದಿಗೆ ಕೈ ಜೋಡಿಸಿದ ಬಿಜೆಪಿ

0

ಬಾಗಲಕೋಟೆ/ಬೆಂಗಳೂರು: ಕರ್ನಾಟಕದಲ್ಲಿ ರೈತರಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ, ಗೊಬ್ಬರ ಪೂರೈಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಜ್ಯದ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಈ ಕುರಿತು ಹೋರಾಟಕ್ಕೆ ವೇದಿಕೆ ಸಿದ್ಧಗೊಳಿಸಿದೆ.

ಜುಲೈ 28ರ ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ರಸಗೊಬ್ಬರ ಸಿಗುತ್ತಿಲ್ಲ, ದಾಸ್ತಾನು ಇಲ್ಲ ಎಂದು ಅಂಗಡಿಯ ಮಾಲೀಕರು ವಾಪಸ್ ಕಳಿಸುತ್ತಿದ್ದಾರೆ. ರಸಗೊಬ್ಬರ ನೀಡದ ಅಂಗಡಿಗಳಿಗೆ ರೈತರು ಬೀಗ ಜಡಿಯುತ್ತಿದ್ದಾರೆ. ಈ ವಿಚಾರ ಈಗ ಆಡಳಿತ, ಪ್ರತಿಪಕ್ಷದ ನಡುವೆ ಜಟಾಪಟಿಗೆ ಕಾರಣವಾಗಿದೆ.

ಕಾಳಸಂತೆಯಲ್ಲಿ ಮಾರಾಟ; ಭಾನುವಾರ ಬಾಗಲಕೋಟೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎ.ಎಸ್.ಪಾಟೀಲ ನಡಹಳ್ಳಿ, “ರೈತರಿಗೆ ಅಗತ್ಯವಿರುವಷ್ಟು ಬಿತ್ತನೆಬೀಜ, ಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯೂರಿಯಾದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“6.25 ಲಕ್ಷ ಮೆಟ್ರಿಕ್ ಟನ್ ಯೂರಿಯಾಕ್ಕೆ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ 8.40 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಅಗತ್ಯಕ್ಕಿಂತ ಹೆಚ್ಚಿಗೆ ಪೂರೈಕೆಯಾದರೂ ಕೇಂದ್ರದ ಕಡೆಗೆ ಬೊಟ್ಟು ಮಾಡುವುದಾದರೆ ಇವರು ಏಕೆ ಅಧಿಕಾರದಲ್ಲಿದ್ದಾರೆ?” ಎಂದು ಪ್ರಶ್ನಿಸಿದರು.

“ರೈತರಿಗೆ ತೊಂದರೆಯಾದರೆ ಗೊಬ್ಬರ ವಿತರಣಾ ಕೇಂದ್ರದ ಮುಂದೆಯೂ ಹೋರಾಟ ನಡೆಸಲಾಗುತ್ತದೆ. ‌ಮುಂದಿನ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು” ಎಚ್ಚರಿಕೆಯನ್ನು ನೀಡಿದರು.

“ಕೊಪ್ಪಳದಲ್ಲಿ ಗೊಬ್ಬರ ಸಿಗದಿರುವ ಕಾರಣ ರೈತರು ಮಣ್ಣು ತಿಂದು ಆಕ್ರೋಶ ಹೊರ ಹಾಕಿದ್ದಾರೆ. ಗೊಬ್ಬರ ಮತ್ತು ಬಿತ್ತನೆ ಬೀಜಕ್ಕೆ ಕೃತಕ ಅಭಾವ ಸೃಷ್ಟಿಯಾಗಿದೆ. ದುಪ್ಪಟ್ಟು ಬೆಲೆ ವಸೂಲಿ ಮಾಡಲಾಗುತ್ತಿದೆ. ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ” ಎಂದು ಪ್ರತಿ ಜಿಲ್ಲೆಯಲ್ಲೂ ರೈತರು ಆಕ್ರೋಶ ಹೊರ ಹಾಕಿದ್ದಾರೆ ಎಂದರು.

“900 ರೂಪಾಯಿ ಇರುವ ಹತ್ತಿ ಬೀಜದ ಪ್ಯಾಕೆಟ್ ಅನ್ನು 1,200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. 258 ರೂ. ಇರುವ ಯೂರಿಯಾ 400 ರಿಂದ 500 ರೂ.ಗೆ ಮಾರಾಟ ಆಗುತ್ತಿದೆ. 1,200 ರೂ. ಬೆಲೆಯ ಡಿಎಪಿ ಗೊಬ್ಬರ 1,800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ರೈತರು ದುಪ್ಪಟ್ಟು ಬೆಲೆ ತೆರಬೇಕಾಗಿದೆ” ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, “ಮುಂಗಾರು ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರ, ಕೃಷಿ ಸಚಿವರು ಇದಕ್ಕೆ ಪೂರಕ ಕ್ರಮಗಳನ್ನು ಕೈಗೊಂಡಿರದ ಕಾರಣ ಇಂದು ಗೊಬ್ಬರ ಬಿಕ್ಕಟ್ಟು ಎದುರಾಗಿದೆ” ಎಂದು ಹೇಳಿದರು.

“ರೈತರು ಬೀದಿಗೆ ಇಳಿಯುತ್ತಿದ್ದಾರೆ. ಗೊಬ್ಬರ ಪೂರೈಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ದೂರುವುದು ಮೂರ್ಖತನ, ಕೇಂದ್ರ ಸರ್ಕಾರ ರಾಜ್ಯದ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದ ಗೊಬ್ಬರ ಪೂರೈಸಿದೆ. ರಾಜ್ಯ ಸರ್ಕಾರ ಗೊಬ್ಬರ ಬೇಡಿಕೆಯನ್ನು ಅಳೆಯುವುದರಲ್ಲಿ ವಿಫಲವಾಗಿದೆ” ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version