ಬೆಂಗಳೂರು: ಭಾರತದ 15ನೇ ಉಪರಾಷ್ಟ್ರಪತಿಗಳಾಗುವ ಅದೃಷ್ಟ ಕನ್ನಡಿಗರಾದ ಸುಪ್ರಿಂ ನಿವೃತ್ತ ನ್ಯಾಯಾಧೀಶ ಎಸ್.ಅಬ್ದುಲ್ ನಜೀರ್ ಅವರಿಗೆ ಒಲಿಯಲಿದೆಯೇ?
ರಾಷ್ಟ್ರೀಯ ಬಿಜೆಪಿಯ ಅತ್ಯುನ್ನತ ಮೂಲಗಳ ಪ್ರಕಾರ, ನ್ಯಾ.ಎಸ್. ಅಬ್ದುಲ್ ನಜೀರ್ ಅವರ ಹೆಸರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವರಿಷ್ಠರ ನಡುವೆ ಚರ್ಚೆಗೆ ಬಂದಿದೆ. ಇದೇ ಮೂಲಗಳ ಪ್ರಕಾರ ಮುಂದಿನ ಉಪರಾಷ್ಟçಪತಿ ಚುನಾವಣೆಗೆ ನ್ಯಾ.ಅಬ್ದುಲ್ ನಜೀರ್ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅತ್ಯಂತ ಪ್ರಮುಖ ಎಂದು ಪರಿಗಣಿಸಲಾದ ಸುಪ್ರಿಂಕೋರ್ಟ್‌ನ ಮಹತ್ವದ ತೀರ್ಪುಗಳನ್ನು ನೀಡಿದ ನ್ಯಾಯಪೀಠಗಳಲ್ಲಿ ನ್ಯಾ.ನಜೀರ್ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಗಮನಾರ್ಹ. ಅದಕ್ಕಾಗಿ ಉಪರಾಷ್ಟ್ರಪತಿ ಹುದ್ದೆಗೆ ಇವರ ಹೆಸರು ಪ್ರಮುಖವಾಗಿ ಮುನ್ನೆಲೆಗೆ ಬಂದಿದೆ.
ಸದ್ಯ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ನ್ಯಾ.ಅಬ್ದುಲ್ ನಜೀರ್, ಎರಡು ವಿಚಾರಗಳಲ್ಲಿ ನೆನಪಿರುವ ವ್ಯಕ್ತಿ. ಮೊದಲನೆಯದು ತ್ರಿವಳಿ ತಲ್ಲಾಖ್ ರದ್ದುಪಡಿಸಿದ ಬಹಧರ್ಮೀಯರನ್ನು ಒಳಗೊಂಡ ಸಂವಿಧಾನ ಪೀಠದಲ್ಲಿ ಇವರು ಒಬ್ಬರಾಗಿದ್ದರು. 2017ರಲ್ಲಿ ಸುಪ್ರಿಂಕೋರ್ಟ್ ತ್ರಿವಳಿ ತಲ್ಲಾಖ್ ರದ್ದುಪಡಿಸಿದಾಗ 5 ಜನ ನ್ಯಾಯಾಧೀಶರಿದ್ದ ಸಂವಿಧಾನ ಪೀಠವು 3-2 ಬಹುಮತದಿಂದ ತೀರ್ಪು ಪ್ರಕಟಿಸಿತು. ಆ ಪೈಕಿ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದ ನ್ಯಾ.ನಜೀರ್ ತೀರ್ಪಿನ ಪರ ನಿಲುವು ತಾಳಿದ್ದರು. ಮತ್ತೊಂದು, ಶತಮಾನಗಳ ಅಯೋಧ್ಯೆ ವಿವಾದವನ್ನು ಬಗೆಹರಿಸಿದ ಮಹತ್ವದ ತೀರ್ಪು. 2019ರ ಅಯೋಧ್ಯೆಯ ಬಾಬ್ರಿ ಮಸೀದಿ-ರಾಮಮಂದಿರ ವಿವಾದದಲ್ಲಿ 5 ಸಂವಿಧಾನ ಪೀಠವು 5-0 ಬಹುಮತ ದಿಂದ ತೀರ್ಪು ನೀಡಿದಾಗ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದ ನ್ಯಾ. ನಜೀರ್ ಅವರು ತೀರ್ಪಿನ ಪರವೇ ನಿಲುವು ಪ್ರಕಟಿಸಿದ್ದರು.
ದ.ಕ. ಬೆಳುವಾಯಿ ಮೂಲ: ಕಾನೂನು ತಜ್ಞ ಜಸ್ಟಿಸ್ ಸೈಯದ್ ಅಬ್ದುಲ್ ನಜೀರ್ ಅವರು ಮೂಲತಃ ದ. ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿ ಬೆಳುವಾಯಿ ಗ್ರಾಮದವರು (ಜನನ: ಜನವರಿ 5, 1958). ತಂದೆ ಫಕೀರ್ ಸಾಹೇಬ್. ಮೂಡುಬಿದಿರೆ ಮಹಾವೀರ್ ಕಾಲೇಜಿನಲ್ಲಿ ಪದವಿ ಪಡೆದು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಮುಗಿಸಿದರು. 1983ರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು.
ಭಾರತದ 14ನೇ ಉಪ ರಾಷ್ಟ್ರಪತಿ ಆಗಿದ್ದ ಜಗದೀಪ್ ಧನಕರ್ ಜುಲೈ 21ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು 2022ರಲ್ಲಿ ಅವರು ಉಪ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದರು. 74 ವರ್ಷದ ಜಗದೀಪ್ ಧನಕರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರವನ್ನು ಕಳಿಸಿದ್ದರು, ಆರೋಗ್ಯದ ಕಾರಣವನ್ನು ನೀಡಿ ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಗದೀಪ್ ಧನಕರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯರ ಸಲಹೆ ಮೇರೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು.
ಬಿಜೆಪಿ-ಆರೆಸ್ಸೆಸ್ ಲೆಕ್ಕಾಚಾರವೇನು?
- ನಜೀರ್ ಆಯ್ಕೆಯಾದರೆ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ಅನುಕೂಲ
- ಬಿಹಾರ 17% ಮುಸ್ಲಿಂ ಬಾಹುಳ್ಯದ ರಾಜ್ಯ. ಉತ್ತರ ಪ್ರದೇಶದಲ್ಲೂ ಮುಂದೆ ಪ್ರಯೋಜನ
- ದಕ್ಷಿಣದ ಕರ್ನಾಟಕ, ಆಂಧ್ರದಲ್ಲೂ ಚುನಾವಣೆಯಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ
- ಎಲ್ಲ ಕಡೆ ಬಿಜೆಪಿ ಅನುಸರಿಸುವ ಮುಸ್ಲಿಂ ಮತ ವಿಭಜನೆ ಕಾರ್ಯತಂತ್ರಕ್ಕೆ ಅನುಕೂಲ
- ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ
- ಬಿಜೆಪಿ ಮುಸ್ಲಿಂ ವಿರೋಧಿಯಲ್ಲ ಎಂದು ತೋರಿಸಿಕೊಳ್ಳಲು ಈಗ ಇನ್ನೊಂದು ಅವಕಾಶ
- ಹೀಗಾಗಿ ನ್ಯಾ. ನಜೀರ್ ಹೆಸರು ಆರ್‌ಎಸ್‌ಎಸ್ ಕಡೆಯಿಂದ ಮೋದಿಗೆ ಶಿಫಾರಸು: ಮೂಲಗಳು