ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತದ ಧ್ವಜ ಹಾರಿದೆ, ಆಕ್ಸಿಯಮ್ -4 ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾರತವನ್ನು ಬಾಹ್ಯಾಕಾಶದಿಂದ ‘ಸಾರೆ ಜಹಾಂ ಸೆ ಅಚ್ಚಾ’ ಎಂದು ಬಣ್ಣಿಸಿ, ನೀಡಿದ ಭಾವನಾತ್ಮಕ ಸಂದೇಶ ಜಗತ್ತಿನೆದುರು ಭಾರತದ ಹಿರಿಮೆ ಹೆಚ್ಚಿದೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಯಶಸ್ವಿಯಾಗಿ ಹಿಂದಿರುಗಿದ ಬಳಿಕ ಭಾರತದಾದ್ಯಂತ ಮಕ್ಕಳಲ್ಲಿ ಬಾಹ್ಯಾಕಾಶದ ಅಧ್ಯಯನದ ಬಗ್ಗೆ ಆಸಕ್ತಿ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿ ಚಂದ್ರಯಾನ 3 ಬಳಿಕ, ಹಲವು ವಿದ್ಯಾರ್ಥಿಗಳು ಸ್ಪೇಸ್ ಸೈಂಟಿಸ್ಟ್ ಆಗುವ ಕನಸು ಹೊತ್ತಿದ್ದಾರೆ. ನೀವು ಇನ್ಸ್ಪೈರ್ ಮಾನಕ್ ಅಭಿಯಾನದ ಹೆಸರನ್ನು ಕೇಳಿರಬೇಕು. ಇದು ಮಕ್ಕಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಅಭಿಯಾನವಾಗಿದೆ. ಈ ಅಭಿಯಾನದಲ್ಲಿ, ಪ್ರತಿ ಶಾಲೆಯಿಂದ ಐದು ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಮಗುವೂ ಹೊಸ ಕಲ್ಪನೆಯನ್ನು ತರುತ್ತದೆ. ಇಲ್ಲಿಯವರೆಗೆ ಲಕ್ಷಾಂತರ ಮಕ್ಕಳು ಇದರಲ್ಲಿ ಸೇರಿದ್ದಾರೆ ಮತ್ತು ಚಂದ್ರಯಾನ-3 ಕಾರ್ಯಾಚರಣೆಯ ನಂತರ, ಅವರ ಸಂಖ್ಯೆ ದ್ವಿಗುಣಗೊಂಡಿದೆ ಎಂದರು.
ದೇಶದಲ್ಲಿ ಬಾಹ್ಯಾಕಾಶ ಸ್ಟಾರ್ಟ್ ಅಪ್‌ಗಳು ವೇಗವಾಗಿ ಬೆಳೆಯುತ್ತಿವೆ. ಐದು ವರ್ಷಗಳ ಹಿಂದೆ, ದೇಶದಲ್ಲಿ 50 ಕ್ಕಿಂತ ಕಡಿಮೆ ಸ್ಟಾರ್ಟ್ ಅಪ್‌ಗಳು ಇದ್ದವು. ಇಂದು, ಬಾಹ್ಯಾಕಾಶ ವಲಯದಲ್ಲಿ ಮಾತ್ರ 200 ಕ್ಕೂ ಹೆಚ್ಚು ಇವೆ. ಮುಂದಿನ ತಿಂಗಳು ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ. ನೀವು ಅದನ್ನು ಹೇಗೆ ಆಚರಿಸುತ್ತೀರಿ? ನಿಮ್ಮಲ್ಲಿ ಯಾವುದೇ ಹೊಸ ಆಲೋಚನೆಗಳಿದ್ದರೆ, ದಯವಿಟ್ಟು ಅವುಗಳನ್ನು ನಮೋ ಅಪ್ಲಿಕೇಶನ್‌ನಲ್ಲಿ ನನಗೆ ಕಳುಹಿಸಿ’ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಗಣಿತದಲ್ಲಿಯೂ ಛಾಪು ಮೂಡಿಸುತ್ತಿದೆ: ರಸಾಯನ ವಿಜ್ಞಾನದಿಂದ ಗಣಿತ ಒಲಿಂಪಿಯಾಡ್‌ಗಳವರೆಗೆ, ಭಾರತದ ಯುವ ಮನಸ್ಸುಗಳು ಪ್ರಕಾಶಮಾನವಾಗಿ ಹೊಳೆಯುತ್ತಿವೆ, ಭಾರತ ಗಣಿತದಲ್ಲಿಯೂ ತನ್ನ ಛಾಪು ಮೂಡಿಸುತ್ತಿದೆ ಮತ್ತು ನಮ್ಮ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮುಂದಿನ ತಿಂಗಳು ಮುಂಬೈನಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ ಒಲಿಂಪಿಯಾಡ್ ನಡೆಯಲಿದೆ. ಇದು ಇದುವರೆಗಿನ ಅತಿದೊಡ್ಡ ಒಲಿಂಪಿಯಾಡ್ ಆಗಲಿದೆ. ಭಾರತ ಈಗ ಒಲಿಂಪಿಕ್ಸ್ ಮತ್ತು ಒಲಿಂಪಿಯಾಡ್‌ಗಳೆರಡಕ್ಕೂ ಮುನ್ನಡೆಯುತ್ತಿದೆ ಎಂದರು.
ಐತಿಹಾಸಿಕ ಕೋಟೆಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ: ಶೌರ್ಯ ಮತ್ತು ದೂರದೃಷ್ಟಿಯ ಸಂಕೇತಗಳಾದ 12 ಮರಾಠಾ ಕೋಟೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ, ಸನಾತನ ಧರ್ಮದ ಸಾರ್ವಭೌಮತ್ವವನ್ನು ಪ್ರತಿನಿಧಿಸುವ ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜರ 12 ಐತಿಹಾಸಿಕ ಕೋಟೆಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಭಾರತೀಯ ಪರಂಪರೆ, ಸಂಸ್ಕೃತಿಗೆ ಹಾಗೂ ಶಿವಾಜಿ ಮಹಾರಾಜರ ಮಹತ್ ಸಾಧನೆಗೆ ಸಂದ ಬಹುದೊಡ್ಡ ಗೌರವವಾಗಿದೆ. ದೇಶವು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ದೇಶದಲ್ಲಿನ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಗಳನ್ನು ಸ್ಮರಿಸಿದರು.