Home ಅಪರಾಧ 15 ವರ್ಷಕ್ಕೆ ಇಬ್ಬರು ಮಕ್ಕಳ ಹೆತ್ತ ಬಾಲಕಿ!

15 ವರ್ಷಕ್ಕೆ ಇಬ್ಬರು ಮಕ್ಕಳ ಹೆತ್ತ ಬಾಲಕಿ!

0

ಪತಿ ವಿರುದ್ಧ ಪೋಕ್ಸೋ ಕೇಸು ದಾಖಲು

ಬೆಳಗಾವಿ: ಮಕ್ಕಳ ರಕ್ಷಣಾ ಘಟಕ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯ ಲೋಪಕ್ಕೆ ಎಳೆವೆಯಲ್ಲಿಯೇ ಬಾಲಕಿಯೊಬ್ಬಳು ಎರಡು ಹೆರಿಗೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ತಡವಾಗಿ ವರದಿಯಾಗಿದೆ.
ಆಧಾರ ಕಾರ್ಡಿನಲ್ಲಿ ಜನ್ಮದಿನಾಂಕವನ್ನು ಬದಲಾಯಿಸಿಕೊಂಡು ಐದು ವರ್ಷ ಹೆಚ್ಚು ಮಾಡಿಕೊಂಡು ಗರ್ಭಿಣಿ ಪತ್ನಿಯನ್ನು ನಿಯಮಿತ ತಪಾಸಣೆಗಾಗಿ ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡು ಮಾಡಿಕೊಂಡಿದ್ದು ವಿಚಾರಣೆ ವೇಳೆ ತಿಳಿದುಬಂದಿದೆ.
೨೬ ವರ್ಷದ ಯುವಕನ ಜತೆ ಸಂತ್ರಸ್ತ ಬಾಲಕಿಯ ವಿವಾಹ 12ನೇ ವಯಸ್ಸಿನಲ್ಲಿಯೇ ಮಾಡಲಾಗಿದ್ದು, ಮದುವೆಯಾದ ವರ್ಷದಲ್ಲಿಯೇ ಹುಕ್ಕೇರಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗು ಬದುಕಲಿಲ್ಲ. ಮತ್ತೊಮ್ಮೆ ೧೫ನೇ ಹರೆಯದಲ್ಲಿ ೨ನೇ ಮಗುವಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಇದೇ ಫೆ. ೧೨ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ತೂಕ ಕಡಿಮೆ ಸೇರಿದಂತೆ ಅನಾರೋಗ್ಯದಿಂದ ಎರಡನೇ ಮಗು ಕೂಡಾ ಮೃತಪಟ್ಟಿದೆ.
ಬೆಳಗಾವಿಯ ಸ್ಪಂದನಾ ಅಸೋಸಿಯೇಷನ್ ಸಂಸ್ಥೆ ಘಟನೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಮಕ್ಕಳ ರಕ್ಷಣಾ ಘಟಕ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ. ೧೨ನೇ ವಯಸ್ಸಿನಲ್ಲಿಯೆ ಲೈಂಗಿಕ ಕಿರುಕುಳಕ್ಕೆ ಬಾಲಕಿ ಒಳಗಾಗಿರುವ ಅಂಶ ಬಯಲಾಗುತ್ತಿದ್ದಂತೆಯೇ ಸ್ಪಂದನಾ ಸಂಸ್ಥೆಯವರು ಬಾಲಕಿಯ ಪತಿ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಯಿ ಮಗು ಕಾರ್ಡು ನೀಡುವ ಸಂದರ್ಭದಲ್ಲಿ, ಮೊದಲ ಹೆರಿಗೆಯ ವೇಳೆಯಲ್ಲಿಯೇ ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳ ರಕ್ಷಣಾ ಘಟಕದವರು ಎಚ್ಚೆತ್ತುಕೊಂಡಿದ್ದರೆ, ಬಾಲಕಿ ಮೇಲಿನ ಶೋಷಣೆಯನ್ನು ತಪ್ಪಿಸಬಹುದಾಗಿತ್ತು ಎಂದು ಸ್ಪಂದನಾ ಸಂಸ್ಥೆಯ ಮಹಿಳಾ ಹೋರಾಟಗಾರ್ತಿ ವಿ. ಸುಶೀಲಾ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Exit mobile version