ಹುಬ್ಬಳ್ಳಿ: ರಾಜ್ಯದಲ್ಲಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯ ಸಮಾರೋಪವನ್ನು ಹುಬ್ಬಳ್ಳಿಯಲ್ಲಿ ಮೇ 11ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಒಂದು ತಿಂಗಳ ಕಾಲ ಬೆಂಗಳೂರು ಹೊರತುಪಡಿಸಿ ಎಲ್ಲ ಕಡೆ ರ‍್ಯಾಲಿ, ಸಭೆ, ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೈಸೂರು, ಚಾಮರಾಜನಗರದಿಂದ ಜನಾಕ್ರೋಶ ಯಾತ್ರೆ ಆರಂಭಿಸಲಾಗಿತ್ತು. ಅದರ ಸಮಾರೋಪವನ್ನು ಮೇ 11 ರಂದು ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಲ್ಲಿ ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಅಂದು ದುರ್ಗದ ಬಯಲಿನಿಂದ ಮೂರುಸಾವಿರ ಮಠದವರೆಗೆ ಜನಾಕ್ರೋಶ ರ‍್ಯಾಲಿ ನಡೆಯಲಿದೆ. ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರು, ಮಾಜಿ ಸಚಿವರು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅದೇ ರೀತಿ ರಾಜ್ಯದಲ್ಲಿ ಮೇ 7 ರಂದು ಕೋಲಾರ, ಮೇ 8 ರಂದು ತುಮಕೂರು, ಚಿತ್ರದುರ್ಗ, ಮೇ 9 ರಂದು ಬಳ್ಳಾರಿ, ವಿಜಯನಗರ ಹಾಗೂ ಮೇ 10 ರಂದು ಚಿಕ್ಕಬಳ್ಳಾಪುರದಲ್ಲಿ ಜನಾಕ್ರೋಶ ಹಮ್ಮಿಕೊಳ್ಳಲಾಗಿದೆ. ಅಂತಿಮವಾಗಿ ಮೇ 11 ರಂದು ಸಮಾರೋಪ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬಿಜೆಪಿ ಕಾರ್ಯಕ್ರಮಗಳು ನಡೆಯಲು ಬಿಡುವುದಿಲ್ಲ ಎಂದಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ಭಯವಿದೆ. ಆದರೆ ಅವರು ಅಡ್ಡ ಹಾಕಿದರೂ ನಾವು ಸಭೆ ಮಾಡೇ ಮಾಡುತ್ತೇವೆ ಎಂದರು.