Home ಅಪರಾಧ ಹೋಟೆಲ್ ಮುಂಭಾಗ ಯುವತಿ ಮೇಲೆ ಹಲ್ಲೆ

ಹೋಟೆಲ್ ಮುಂಭಾಗ ಯುವತಿ ಮೇಲೆ ಹಲ್ಲೆ

0

ಮಂಗಳೂರು: ನಗರದ ಲಾಲ್‌ಬಾಗ್‌ನ ಹೋಟೆಲೊಂದರಲ್ಲಿ ಯುವಕರ ತಂಡವೊಂದು ಯುವತಿ ಹಾಗೂ ಆಕೆಯ ಸ್ನೇಹಿತರ ಮೇಲೆ ಹಲ್ಲೆ ನಡೆಸಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಯುವತಿ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ.
ಭಾನುವಾರ ರಾತ್ರಿ ೯.೩೦ಕ್ಕೆ ಮನೆಯವರೊಂದಿಗೆ ಕಾರಿನಲ್ಲಿ ಯುವತಿ ಹೋಟೆಲ್‌ಗೆ ಹೋಗಿದ್ದು, ರಾತ್ರಿ ೧೧ ಗಂಟೆಗೆ ಊಟ ಮುಗಿಸಿ ಬಿಲ್ ಪಾವತಿಸಿದ್ದರು. ಈ ವೇಳೆ ವಾಶ್‌ರೂಂಗೆ ಹೋದಾಗ ಅಲ್ಲಿ ಮಹಿಳಾ ಶೌಚಾಲಯದಲ್ಲಿ ಪುರುಷನೊಬ್ಬ ಇದ್ದ. ಅಲ್ಲಿಂದ ಹೊರ ಬಂದಾಗ ಅಲ್ಲಿದ್ದ ಇತರ ಇಬ್ಬರು ಅಸಭ್ಯವಾಗಿ ತಮಾಷೆ ಮಾಡಿದ್ದಾರೆ. ಈ ಬಗ್ಗೆ ಕ್ಯಾಶ್ ಕೌಂಟರ್‌ಗೆ ದೂರು ನೀಡಿದಾಗ, ಆತ ಕ್ಷಮೆ ಕೇಳಿ ಸಮಸ್ಯೆ ಅಲ್ಲಿಗೆ ಇತ್ಯರ್ಥವಾಗಿತ್ತು.
ಬಳಿಕ ಪಾರ್ಕಿಂಗ್ ಸ್ಥಳಕ್ಕೆ ಯುವತಿ ಬಂದಾಗ ಕಾರಿನ ಹಿಂದೆ ಬುಲೆಟ್ ಬೈಕ್‌ನ್ನು ಅಡ್ಡಲಾಗಿ ಇರಿಸಲಾಗಿತ್ತು. ಕಾರನ್ನು ರಿವರ್ಸ್ ತೆಗೆಯುವಾಗ ಬೈಕ್‌ನಲ್ಲಿದ್ದಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅದಕ್ಕೆ ಯುವತಿ ಜತೆಗಿದ್ದವರು ಆತನನ್ನು ಪ್ರಶ್ನಿಸಿದ್ದು ಮಾತಿಗೆ ಮಾತು ಬೆಳೆದಿದೆ. ಆಗ ಸ್ಥಳದಲ್ಲಿದ್ದ ೧೫-೨೦ ಮಂದಿ ಸೇರಿದ್ದು, ಅದರಲ್ಲಿ ಒಬ್ಬ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಯುವತಿ
ಪ್ರಶ್ನಿಸಿದಾಗ ಹಿಂದಕ್ಕೆ ದೂಡಿದ್ದಾರೆ. ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದಾಗ ಮತ್ತೊಬ್ಬ ಬಂದು ಹೊಡೆದಿದ್ದು, ಇನ್ನೊಬ್ಬಾತ ಬಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಘಟನೆಗೆ ಸಂಬಂಧಿಸಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ ಬ್ಯೂಸಿ ಬಂದ ಕಾರಣ ಯುವತಿ ಪಾಂಡೇಶ್ವರ ಮಹಿಳಾ ಠಾಣೆಗೆ ತೆರಳಿದ್ದಾರೆ. ಅಲ್ಲಿ ಬರ್ಕೆ ಠಾಣೆಗೆ ದೂರು ನೀಡುವಂತೆ ಕಳುಹಿಸಿದ್ದಾರೆ. ಅದರಂತೆ ಬರ್ಕೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದ್ದು, ಸೋಮವಾರ ಎಫ್‌ಐಆರ್ ಕೂಡಾ ದಾಖಲಾಗಿದೆ.
ಹಲ್ಲೆ ಮಾಡಿದವರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಬೇಕು ಎಂದು ಯುವತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಬಾರ್‌ನವರಿಗೂ ನೋಟಿಸ್ ಜಾರಿಗೊಳಿಸಿದ್ದು, ಘಟನೆ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ ಸಮೀಪದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಾರಿನವರಿಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.

Exit mobile version