ಚಿಕ್ಕಮಗಳೂರು: ಹೊಸ ವರ್ಷಾಚರಣೆಗೆ ಈಗಾಗಲೇ ಹೋಮ್‌ಸ್ಟೇ, ರೆಸಾರ್ಟ್ ಸೇರಿದಂತೆ ಇತರೆ ವಸತಿ ಗೃಹಗಳಲ್ಲಿ ಬರುವ ಪ್ರವಾಸಿಗರಿಗಾಗಿ ಭರ್ಜರಿ ವಿಶೇಷ ಸೌಲಭ್ಯ ನೀಡಿದೆ. ನಗರದ ಸುತ್ತಮುತ್ತವಿರುವ ರೆಸಾರ್ಟ್, ಹೋಮ್ ಸ್ಟೇ ಸೇರಿದಂತೆ ವಸತಿ ಗೃಹಗಳು ಬುಕ್ಕಿಂಗ್ ಆಗಿ ಪ್ರವಾಸಿಗರು ಕಾಫಿನಾಡಿಗೆ ದಾಂಗುಡಿ ಇಟ್ಟಿದ್ದಾರೆ.
ಕೆಲವರು ಒಂದು ತಿಂಗಳ ಮುಂಚೆಯಿಂದಲೇ ಬುಕ್ಕಿಂಗ್ ಮಾಡಿದ್ದು, ಸದ್ಯ ಎಲ್ಲಾ ವಸತಿ ಗೃಹಗಳು, ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಬುಕ್ ಆಗಿವೆ. ಪ್ರವಾಸಿಗರ ಅನುಕೂಲಕ್ಕಾಗಿ ನೈಟ್ ಫೈರಿಂಗ್, ಪ್ರವಾಸಿ ಕೇಂದ್ರಗಳಿಗೆ ಕರೆದೊಯ್ಯಲು ವಾಹನ ವ್ಯವಸ್ಥೆ, ಸ್ವಿಮಿಂಗ್, ಟ್ರಕ್ಕಿಂಗ್ ಸೇರಿದಂತೆ ಸಕಲ ಸಿದ್ಧತೆಗೆ ರೆಸಾರ್ಟ್, ಹೋಮ್ ಸ್ಟೇ ಮಾಲೀಕರು ಮುಂದಾಗಿದ್ದಾರೆ. ಒಟ್ಟಾರೆಯಾಗಿ ನೂತನ ವರ್ಷಾಚರಣೆಗೆ ಬರುವ ಪ್ರವಾಸಿಗರಿಗೆ ಔತಣ ನೀಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ.
ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಯ ಕಡೆ ಮುಖ ಮಾಡಿದ್ದು, ಜಿಲ್ಲೆಯ ಬಹುತೇಕ ಪ್ರವಾಸಿ ಕೇಂದ್ರ, ಜಲಪಾತ, ಧಾರ್ಮಿಕ ಕ್ಷೇತ್ರಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಭಾರೀ ಪ್ರಮಾಣದ ಪ್ರವಾಸಿಗರು ಜಿಲ್ಲೆಗೆ ಬರುತ್ತಿರುವುದರಿಂದ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುಳ್ಳಯ್ಯನಗಿರಿ ಶ್ರೇಣಿ ಪ್ರದೇಶಕ್ಕೆ ಆಗಮಿಸುತ್ತಿದ್ದು, ಇಲ್ಲಿನ ರೆಸಾರ್ಟ್‌ಗಳಲ್ಲಿ ತಂಗಲು ಬರುತ್ತಿರುವ ಪ್ರವಾಸಿಗರಿಂದ ಕಾಡುಪ್ರಾಣಿಗಳಿಗೆ ತೊಂದರೆಯಾಗುತ್ತಿದ್ದು, ರಾತ್ರಿ ಸಂಚರಿಸುವ ಪ್ರಾಣಿಗಳಿಗೆ ವಾಹನದಲ್ಲಿ ತೊಂದರೆ ನೀಡಲಾಗುತ್ತಿದೆ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ರೆಸಾರ್ಟ್ವೊಂದಕ್ಕೆ ತೆರಳುತ್ತಿದ್ದ ಪ್ರವಾಸಿಗರು ರಸ್ತೆ ದಾಟುತ್ತಿದ್ದ ಚಿರತೆಯನ್ನು ವಾಹನದಲ್ಲಿ ಫಾಲೋ ಮಾಡಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ ವಾಹನದ ಬೆಳಕಿನಿಂದ ಚಿರತೆಯನ್ನು ಹುಡುಕಾಡಿದ್ದಾರೆ. ಗಾಂಬರಿಗೊಂಡ ಚಿರತೆ ದಾಳಿ ನಡೆಸಿದರೆ ಹೊಣೆಯಾರು ಎಂದು ಪ್ರಶ್ನಿಸಿರುವ ಜನರು, ಪ್ರಾಣಿಗಳಿಗೆ ತೊಂದರೆ ನೀಡದಂತೆ ಮನವಿ ಮಾಡಿದ್ದಾರೆ. ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿ, ಮಾಣಿಕ್ಯಧಾರ, ಐ.ಡಿ.ಪೀಠ, ಕೆಮ್ಮಣ್ಣಗುಂಡಿ, ದೇವರಮನೆ ಸೇರಿದಂತೆ ಇತರೆ ಪ್ರವಾಸಿ ಕೇಂದ್ರಗಳಿಗೂ ಪ್ರವಾಸಿಗರ ದಂಡೆ ಹರಿದು ಬಂದಿದೆ. ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹೊರನಾಡಿಗೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.